Friday, November 22, 2024
Homeಯಕ್ಷಗಾನಭಾಗವತರ ಔಷಧೋಪಚಾರಕ್ಕೆ ಕಲಾಭಿಮಾನಿ ಬಳಗದ ನೆರವು - ಕಲಾವಿದರ ಬದುಕಿಗೆ ಅಭಿಮಾನಿಗಳ ಶ್ರೀರಕ್ಷೆ : ಪುರುಷೊತ್ತಮ...

ಭಾಗವತರ ಔಷಧೋಪಚಾರಕ್ಕೆ ಕಲಾಭಿಮಾನಿ ಬಳಗದ ನೆರವು – ಕಲಾವಿದರ ಬದುಕಿಗೆ ಅಭಿಮಾನಿಗಳ ಶ್ರೀರಕ್ಷೆ : ಪುರುಷೊತ್ತಮ ಪೂಂಜ

‘ಬಾಯಿಮಾತಿನ ಅಭಿಮಾನದಿಂದಲೇ ಸಂತೃಪ್ತಿ ಪಡೆಯುವುದು ಕಲಾವಿದರ ಸ್ವಭಾವ. ಆದರೆ ಅಂತಹ ಅಭಿಮಾನ ದೃಢವಾಗುವುದು ಕಲಾವಿದರು ಸಂಕಷ್ಟದಲ್ಲಿದ್ದಾಗ ಮಾತ್ರ. ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಯಕ್ಷಗಾನ ರಂಗದಲ್ಲಿ ಪ್ರಾಮಾಣಿಕವಾಗಿ ದುಡಿದ ತನಗೆ ನಾಡು – ಹೊರನಾಡುಗಳಲ್ಲಿ ಅಸಂಖ್ಯ ಸಂಖ್ಯೆಯ ಅಜ್ಞಾತ ಅಭಿಮಾನಿಗಳಿರುವುದು ಮನದಟ್ಟಾಗುತ್ತಿದೆ. ಅವರ ಸಾಂತ್ವನದ ಮಾತುಗಳು, ಹಣಕಾಸಿನ ನೆರವು ಶ್ರೀರಕ್ಷೆಯಾಗಿ ಬದುಕಿನ ಬಗ್ಗೆ ಭರವಸೆ ಮೂಡಿಸಿದೆ ‘ ಎಂದು ಯಕ್ಷಗಾನದ ಹಿರಿಯ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಹೇಳಿದ್ದಾರೆ.         

ರಕ್ತ ಸಂಬಂಧಿಯಾದ ಗಂಭೀರ ಕಾಯಿಲೆಗೆ ಒಳಗಾಗಿ ನಗರದ ಕದ್ರಿ ಕಂಬಳದ ತಾತ್ಕಾಲಿಕ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಔಷಧೋಪಚಾರಕ್ಕಾಗಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನೀಡಲಾದ ಆರ್ಥಿಕ ನೆರವನ್ನು ಸ್ವೀಕರಿಸಿ ಪುರುಷೋತ್ತಮ ಪೂಂಜ ಮಾತನಾಡಿದರು.       

ಈಗಾಗಲೇ ಮೊದಲ ಹಂತದಲ್ಲಿ ರೂ 1 ಲಕ್ಷದ ಮೊತ್ತವನ್ನು ಚಿಕಿತ್ಸೆಗಾಗಿ ನೀಡಿದ್ದ ಕಲಾಭಿಮಾನಿ ಬಳಗ, ಎರಡನೇ ಸುತ್ತಿನಲ್ಲಿ ಮುಂಬಯಿ ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಿದ ರೂಪಾಯಿ 75 ಸಾವಿರ ನಿಧಿಯನ್ನು ಅವರಿಗೆ ಹಸ್ತಾಂತರಿಸಿತು. ಈ ನಿಧಿಗೆ ಮುಂಬೈ ಹೋಟೆಲ್ ಪಾಪಿಲ್ಲೋನ್ ನ ರಘು ಎಲ್. ಶೆಟ್ಟಿ , ಕೊಟ್ರಪ್ಪಾಡಿ ಲಕ್ಷ್ಮೀಜನಾರ್ಧನ ಬ್ರಹ್ಮಸಿರಿ ಕಲಾ ಬಳಗದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಕೊಟ್ರಪಾಡಿ, ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿಜಯ್ ಶೆಟ್ಟಿ ಅಜೆಕಾರು, ಶ್ರೀ ಶನೇಶ್ಚರ ಸೇವಾ ಸಮಿತಿ ಬಟ್ಟಿಪಾಡ ಭಾಂಡೂಪ್, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಭಟ್ಟಿಪಾಡ, ಅಡ್ವೋಕೇಟ್ ಶೇಖರ್ ಆರ್. ಶೆಟ್ಟಿ ಮುಂಬೈ ಮತ್ತು ಅಡ್ವೋಕೇಟ್ ದಯಾನಂದ್ ಕೆ.ಶೆಟ್ಟಿ ಮುಂಬಯಿ ದೇಣಿಗೆಯಿತ್ತು ಸಹಕರಿಸಿದ್ದರು.

ನೆರವಿನ ಹಸ್ತ ದೊರೆಯಲಿ: ದಾನಿಗಳ ಪರವಾಗಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿಧಿ ಸಮರ್ಪಣೆ ಮಾಡಿದರು. ಬಳಗದ ಸಲಹೆಗಾರ ಮತ್ತು ಯಕ್ಷಗಾನ ಅರ್ಥಧಾರಿ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಯಕ್ಷಗಾನ ರಂಗಕ್ಕೆ ಪೂಂಜರ ಕೊಡುಗೆಯನ್ನು ವಿವರಿಸಿ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ‘ಈ ಅಪರೂಪದ ಕಾಯಿಲೆಗೆ ಹೊರದೇಶದಿಂದ ದುಬಾರಿ ಔಷಧಿಗಳನ್ನು ತರಿಸಿ ಚಿಕಿತ್ಸೆ  ನೀಡಬೇಕಾದ್ದರಿಂದ ಭಾಗವತರನ್ನು ಮೊದಲಿನಂತಾಗಿಸಲು ಇನ್ನಷ್ಟೂ ನೆರವಿನ ಹಸ್ತಗಳು ಒದಗಿ ಬರಬೇಕು’ ಎಂದವರು ನುಡಿದರು. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ ಅಜೆಕಾರು  ಮತ್ತು ಪೂಂಜರ ಧರ್ಮಪತ್ನಿ ಶೋಭಾ ಪೂಂಜ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments