ಕರ್ನಾಟಕ ಯಕ್ಷಗಾನ ಅಕಾಡೆಮಿ ಇತ್ತೀಚೆಗೆ ಪ್ರಕಟಿಸಿದ ಕೃತಿ ಕೀರ್ತಿಶೇಷ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ ಇದು. ಯಕ್ಷಗಾನದ ಮಟ್ಟುಗಳ ಅದ್ಭತ ಸಿದ್ಧಿಯನ್ನು ಎಳವೆಯಲ್ಲೇ ಸಾಧಿಸಿದ ಮಹಾಕವಿಯೊಬ್ಬರ ಕೃತಿಸಂಪುಟವನ್ನು ಪ್ರಕಟಿಸುವುದರ ಮೂಲಕ ಅಕಾಡೆಮಿ ಸ್ತುತ್ಯಕಾರ್ಯವನ್ನೇ ಮಾಡಿದೆ.
ಉಪಾಧ್ಯಾಯರ ಗುರುದ್ರೋಣ, ಬಾಘಟೋತ್ಕಚ ಪ್ರಕಟವಾಗಿ ದಶಕಗಳೇ ಕಳೆದು ಹೋಗಿ ಈಗ ಉಪಲಬ್ಧವೇ ಇರಲಿಲ್ಲ. ಅವರಿನ್ನೂ ಹದಿನೆಂಟನೆಯ ವರ್ಷದವರಿದ್ದಾಗ ಬರೆದ ಧರಣಿಮೋಹಿನಿ ಕಲ್ಯಾಣ ಛಂದೋವಿದ ಡಾ. ನಾರಾಯಣ ಶೆಟ್ಟರಿಗೆ ಅನೇಕ ಮಟ್ಟುಗಳನ್ನು ಸೂಚಿಸಲು ಸಹಕಾರಿಯಾಗದ್ದವು. ಈ ಸಂಪುಟದಲ್ಲಿ ಧರಣಿ ಮೋಹಿನಿ ಕಲ್ಯಾಣ,(1928) ಬಾಲಘಟೋತ್ಕಚ,(1942) ಗುರುದ್ರೋಣ, (ಇದು ಅವರು ರಚಿಸುವಾಗ ಅಪೂರ್ಣವಾಗಿದ್ದು 1980 ರ ಸಮಯಕ್ಕೆ ಅವರ ಪುತ್ರರುಗಳಿಂದ ಪೂರ್ಣವಾಗಿದೆ) ಅಶೋಕಸುಂದರೀ ಕಲ್ಯಾಣ,(1952)ಮೋಹಿನೀ ಕಲಾವಿಲಾಸ (1930) ಹೀಗೆ ದಿ.ಉಪಾಧ್ಯಾಯರ ಎಲ್ಲಾ ಐದು ಪ್ರಸಂಗಗಳು ಇವೆ.
ಕೊನೆಯ ಪ್ರಸಂಗ ತಂಬಾಕು, ನಸ್ಯ, ಮದ್ಯ ಮುಂತಾದ ಅಮಲು ಪದಾರ್ಥಗಳ ಕುರಿತ ಕಾಲ್ಪನಿಕ ಪ್ರಸಂಗ. ಎಲ್ಲವೂ ಪೌರಾಣಿಕ ಪಾತ್ರಗಳೇ ಇರುವ ಈ ಪ್ರಸಂಗದಲ್ಲಿ 442 ಪದ್ಯಗಳಿವೆ!. ಪ್ರಖ್ಯಾತ ರಂಗ ಕರ್ಮಿ, ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ಕೃತಿಯನ್ನು ಸಂಪಾದಿಸಿ ಯಕ್ಷಲೋಕದ ಮುಂದಿಟ್ಟಿದ್ದಾರೆ.
ಯಕ್ಷಗಾನಕ್ಕೊಂದು ಅಪೂರ್ವ ಕೃತಿ ಸಂಪುಟವನ್ನು ನೀಡಿದ ಅಕಾಡೆಮಿಯ ಅಧ್ಯಕ್ಷರಾದ ಪ್ರೊ|ಎಂ ಎ ಹೆಗಡೆಯವರು ಕೃತಿಯನ್ನು ಕುರಿತು ಬರೆದಿದ್ದಾರೆ. ನಾನು ಕೃತಿಗಳ ಕಿರುಪರಿಚಯದ ಮುನ್ನುಡಿಯ ಸೇವೆ ಮಾಡಿದ್ದೇನೆ. ಕನ್ನಡಕ್ಕೊಂದು ಹೊಸ ಶಬ್ದ “ಇನ್ನುಡಿ” ಯನ್ನು ಸಂಪಾದಕ ಕೆ ಎಸ್ ಉಪಾಧ್ಯಾಯ ನೀಡಿದ್ದಾರೆ. ಪ್ರಖ್ಯಾತ ಅರ್ಥವಾದಿ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಈ ಕವಿಯ ಸುಪುತ್ರರು. ಯಕ್ಷಗಾನಾಸಕ್ತರೆಲ್ಲ ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳಬೇಕಾದ ಕೃತಿ.
ಪ್ರಕಾಶಕರು: ಯಕ್ಷಗಾನ ಅಕಾಡೆಮಿ, ಬೆಂಗಳೂರು. ಬೆಲೆ: 130/ ಪುಟಗಳು 270.
– ಶ್ರೀಧರ್ ಡಿ. ಎಸ್.