Saturday, January 18, 2025
Homeಯಕ್ಷಗಾನಅಜೆಕಾರು ಕಲಾಭಿಮಾನಿ ಬಳಗಕ್ಕೆ ಹುಟ್ಟೂರಲ್ಲಿ ಚಾಲನೆ - ಕಲಾವಿದರಿಗೆ ತಾಯಿನಾಡಿನ ಋಣ ದೊಡ್ಡದು: ಅಜೆಕಾರು ಬಾಲಕೃಷ್ಣ...

ಅಜೆಕಾರು ಕಲಾಭಿಮಾನಿ ಬಳಗಕ್ಕೆ ಹುಟ್ಟೂರಲ್ಲಿ ಚಾಲನೆ – ಕಲಾವಿದರಿಗೆ ತಾಯಿನಾಡಿನ ಋಣ ದೊಡ್ಡದು: ಅಜೆಕಾರು ಬಾಲಕೃಷ್ಣ ಶೆಟ್ಟಿ

‘ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಹೆತ್ತ ತಾಯಿ ಮತ್ತು ಹುಟ್ಟಿದ ಊರು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಅದರಲ್ಲೂ ಕಲಾವಿದನಾದವನಿಗೆ ತಾಯಿನಾಡಿನ ಋಣ ಎಲ್ಲಕ್ಕಿಂತ ದೊಡ್ಡದು. ಯಾವುದಾದರೊಂದು ರೂಪದಲ್ಲಿ ಅದನ್ನು ತೀರಿಸುವ ಸಂದರ್ಭ ಬಂದಾಗ ನಾವದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಜೆಕಾರು ಕಲಾಭಿಮಾನಿ ಬಳಗ ಹೊರನಾಡಿನಲ್ಲಿ ಜನಪ್ರಿಯತೆ ಗಳಿಸಲು ಹುಟ್ಟೂರಿನ ಸಂಸ್ಕಾರವೇ ಕಾರಣ’ ಎಂದು ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.        

ಕಾರ್ಕಳ ತಾಲೂಕಿನ ಅಜೆಕಾರು ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ ದೀಪ ಬೆಳಗಿ ನೂತನ ಸಮಿತಿಗೆ ಚಾಲನೆ ನೀಡಿದರು. ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬಳಗದ ಸಾಧನೆ: ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ವಿದ್ವಾಂಸ ಮತ್ತು ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ‘ಅಜೆಕಾರು ಕಲಾಭಿಮಾನಿ ಬಳಗವು ಕಳೆದ ಎರಡು ದಶಕಗಳಿಂದ ಮುಂಬಯಿಯಲ್ಲಿ ಸರಣಿ ತಾಳಮದ್ದಳೆ, ಯಕ್ಷಗಾನ ಬಯಲಾಟ, ಕಲಾವಿದರ ಸಮ್ಮಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ತರಬೇತಿ ಮತ್ತು ಗ್ರಂಥ ಪ್ರಕಟಣೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇಂತಹ ಸತ್ಕಾರ್ಯಗಳನ್ನು ಹುಟ್ಟೂರಿನಲ್ಲೂ ವಿಸ್ತರಿಸುವ ಸಲುವಾಗಿ ಅಜೆಕಾರಿನಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗುತ್ತಿದೆ. ಇದು ಉತ್ತಮ ಮೇಲ್ಪಂಕ್ತಿ ‘ ಎಂದರು.

ಕಲಾ ಪೋಷಕರಾದ ಭೋಜ ಮಡಿವಾಳ ಪರಂಬರಬೆಟ್ಟು ಮತ್ತು ಹರೀಶ್ ನಾಯಕ್ ಶುಭಹಾರೈಸಿದರು.  ಮುಂಬೈಯ ಖ್ಯಾತ ಹೋಟೆಲು ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ಅವರು ಗೌರವಾಧ್ಯಕ್ಷರಾಗಿ ಹಾಗೂ ಅಜೆಕಾರು ವಿಜಯ ಶೆಟ್ಟಿ  ಅಧ್ಯಕ್ಷರಾಗಿರುವ ಅಜೆಕಾರು ಕಲಾಭಿಮಾನಿ ಬಳಗದ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

ಸಮಿತಿ ಸಂಚಾಲಕ ಪ್ರಶಾಂತ ಶೆಟ್ಟಿ ಕುಂಟಿನಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಶಂಕರ ಆಚಾರ್ಯ ಸ್ವಾಗತಿಸಿ, ಜತೆ ಕಾರ್ಯದರ್ಶಿ ರಾಘವೇಂದ್ರ ಪಾಟ್ಕರ್ ವಂದಿಸಿದರು. ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಮಜಲು ಮನೆ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments