Friday, November 22, 2024
Homeಸುದ್ದಿಫರೀದಾ ತರೀನ್ ಗೆ 36 ದಿನಗಳಲ್ಲಿ 4 ವರ್ಗಾವಣೆ

ಫರೀದಾ ತರೀನ್ ಗೆ 36 ದಿನಗಳಲ್ಲಿ 4 ವರ್ಗಾವಣೆ

ಪಾಕಿಸ್ತಾನ ಅಧಿಕಾರಿ ಫರೀದಾ ತರೀನ್ ಗೆ 36 ದಿನಗಳಲ್ಲಿ 4 ವರ್ಗಾವಣೆಗಳನ್ನು ಮಾಡಲಾಗಿದೆ. ಆದರೆ ಇಮ್ರಾನ್ ಸರ್ಕಾರ ಈ ಪ್ರಕರಣದಲ್ಲಿ ತನ್ನ ಪಕ್ಷಪಾತವನ್ನು ನಿರಾಕರಿಸಿದೆ.

ಬಲೂಚಿಸ್ತಾನದ ಮಹಿಳಾ ಅಧಿಕಾರಿ ಫರೀದಾ ತರೀನ್ 36 ದಿನಗಳಲ್ಲಿ ನಾಲ್ಕು ವರ್ಗಾವಣೆಗಳಿಗೆ ಒಳಗಾಗಿದ್ದಾರೆ. ಫೆಬ್ರವರಿ 11 ರಿಂದ ಮಾರ್ಚ್ 16 ರವರೆಗೆ 4 ವಿಭಿನ್ನ ಸ್ಥಾನಗಳಿಗೆ ಆಕೆಯನ್ನು ವರ್ಗಾವಣೆ ಮಾಡಲಾಯಿತು. ಬಲೂಚಿಸ್ತಾನದ ಮಹಿಳಾ ಅಧಿಕಾರಿ ಫರೀದಾ ತರೀನ್ 36 ದಿನಗಳಲ್ಲಿ ನಾಲ್ಕು ವರ್ಗಾವಣೆಗಳಿಗೆ ಒಳಗಾಗಿದ್ದಾರೆ ಎಂದು ಎಎನ್‌ಐ ವರದಿಯಲ್ಲಿ ತಿಳಿಸಲಾಗಿದೆ.

ಪಾಕ್ ಅಧಿಕಾರಿ ಮೊದಲು ಫೆಬ್ರವರಿ 11 ರಂದು ಸಹಾಯಕ ಆಯುಕ್ತ ಕ್ವೆಟ್ಟಾ ಆಗಿ ನೇಮಕಗೊಂಡರು. ಮರುದಿನ ಅವರ ನೇಮಕಾತಿಯನ್ನು ರದ್ದುಪಡಿಸಲಾಯಿತು, ಮತ್ತು ಫೆಬ್ರವರಿ 16 ರಂದು ಅವರನ್ನು ಆಡಳಿತ ವಿಭಾಗದಲ್ಲಿ ಸೆಕ್ಷನ್ ಆಫೀಸರ್ ಥ್ರೀ ಆಗಿ ನೇಮಿಸಲಾಯಿತು. ತರುವಾಯ, ಫೆಬ್ರವರಿ 25 ರಂದು, ಅವರನ್ನು ಸೇವೆಗಳು ಮತ್ತು ಸಾಮಾನ್ಯ ಆಡಳಿತ ವಿಭಾಗದಲ್ಲಿ ಸೆಕ್ಷನ್ ಆಫೀಸರ್ ಒನ್ ಆಗಿ ನೇಮಿಸಲಾಯಿತು. ಅದರ ನಂತರ ಮಾರ್ಚ್ 16 ರಂದು ಆಕೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧಿಕಾರಿಯಾಗಿ ನೇಮಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಸರ್ಕಾರದ ವಕ್ತಾರರು ಅಧಿಕಾರಿಯ ವಿರುದ್ಧ ತಾರತಮ್ಯದ ಪ್ರಕರಣವನ್ನು ನಿರಾಕರಿಸಿದರೂ, ಪಾಕಿಸ್ತಾನದ ಮಹಿಳೆಯರು ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಸಾಕ್ಷ್ಯಗಳು ತೋರಿಸುತ್ತವೆ. ಪಾಕಿಸ್ತಾನವನ್ನು ಗ್ಲೋಬಲ್ ಜೆಂಡರ್ ಗ್ಯಾಪ್ ಇಂಡೆಕ್ಸ್ 2018 ಮಹಿಳೆಯರಿಗಾಗಿ ವಿಶ್ವದ ಆರನೇ ಅತ್ಯಂತ ಅಪಾಯಕಾರಿ ರಾಷ್ಟ್ರವೆಂದು ಪರಿಗಣಿಸಿದೆ ಮತ್ತು ಲಿಂಗ ಸಮಾನತೆಯ ದೃಷ್ಟಿಯಿಂದ ವಿಶ್ವದ ಎರಡನೇ ಅತ್ಯಂತ ಕೆಟ್ಟ ದೇಶವಾಗಿದೆ (148 ನೇ ಸ್ಥಾನ) ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತೆ ಅನಿಲಾ ಗುಲ್ಜಾರ್ ‘ಪಾಕಿಸ್ತಾನ ಮತ್ತು ಚೀನಾದಲ್ಲಿ ಮಹಿಳೆಯರ ಜೀವನ’ ಎಂಬ ಲೇಖನವೊಂದರಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಮಹಿಳೆಯರು ಕೆಲಸದ ಸ್ಥಳದಲ್ಲಿ, ಬೀದಿಯಲ್ಲಿ ಮತ್ತು ಕುಟುಂಬದಲ್ಲಿ ಪುರುಷ ಕುಟುಂಬ ಸದಸ್ಯರಿಂದ ಲೈಂಗಿಕ ಕಿರುಕುಳವನ್ನು ಎದುರಿಸುತ್ತಾರೆ ಎಂದು ಗುಲ್ಜಾರ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಂಕಿಅಂಶಗಳ ಪ್ರಕಾರ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ನಡುವಿನ ಅಂತರವು ವಿಶ್ವದಲ್ಲೇ ಅತ್ಯಂತ ಹಿರಿದಾಗಿದೆ. ಒಂದೇ ರೀತಿಯ ನೌಕರಿಯಾದರೂ ಪಾಕಿಸ್ತಾನದ ಮಹಿಳೆಯರು ಪುರುಷರಿಗಿಂತ ಶೇಕಡಾ 34 ರಷ್ಟು ಕಡಿಮೆ ಆದಾಯ ಗಳಿಸುತ್ತಾರೆ.

RELATED ARTICLES

Most Popular

Recent Comments