ಬಿಜೆಪಿ ಮಂಡಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ತನ್ನ ದೆಹಲಿ ಮನೆಯಲ್ಲಿ ಮೃತಪಟ್ಟಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ದೆಹಲಿಯ ಗೋಮತಿ ಅಪಾರ್ಟ್ ಮೆಂಟ್ ನಲ್ಲಿ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಶವವನ್ನು ಮರಣೋತ್ತರ ಪರೀಕ್ಷೆಗೆ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ಬಿಜೆಪಿ ಸಂಸದರ ನಿವಾಸದಲ್ಲಿದ್ದ ಪೊಲೀಸರು ಪ್ರಸ್ತುತ ಇದು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಪ್ರಕರಣವೇ ಎಂದು ತನಿಖೆ ನಡೆಸುತ್ತಿದ್ದೇವೆ, ಏಕೆಂದರೆ ಅವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅವರು ಒಬ್ಬ ಸಿಬ್ಬಂದಿಯಿಂದ ಕರೆ ಸ್ವೀಕರಿಸಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದರು, ಮತ್ತು ಆತನು ರಾಮ್ ಸ್ವರೂಪ್ ಶರ್ಮಾ ಅವರ ನಿವಾಸವನ್ನು ತಲುಪಿದಾಗ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರು ಮತ್ತು ಒಳಗಿನಿಂದ ಬಾಗಿಲು ಮುಚ್ಚಿತ್ತು ಎಂದು ತಿಳಿದುಬಂದಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬಿಜೆಪಿ ತನ್ನ ಸಂಸದೀಯ ಸಭೆಯನ್ನು ರದ್ದುಪಡಿಸಿದೆ ಪಶ್ಚಿಮ ಬಂಗಾಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬುಧವಾರ ನಡೆಯಬೇಕಿದ್ದ ಬಿಜೆಪಿ ಸಂಸದೀಯ ಸಭೆ ಬಿಜೆಪಿ ಸಂಸದರ ನಿಧನದ ನಂತರ ಈಗ ರದ್ದುಗೊಂಡಿದೆ.
1958 ರಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ ಶರ್ಮಾ ಮೊದಲ ಬಾರಿಗೆ ಲೋಕಸಭೆಗೆ 2014 ರಲ್ಲಿ ಆಯ್ಕೆಯಾದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಮತ್ತೆ ಮಂಡಿಯಿಂದ ಮರು ಆಯ್ಕೆ ಮಾಡಲಾಯಿತು. ಅವರು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ರಾಮ್ ಸ್ವರೂಪ್ ಶರ್ಮಾ ಅವರಿಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಸಂಸದರ ನಿಧನಕ್ಕೆ ಪ್ರಧಾನಿ, ಗೃಹ ಸಚಿವರು ಮತ್ತು ಇತರ ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಮತ್ತು ಬಿಜೆಪಿಯ ಮುಖಂಡರು ಸಂತಾಪ ಸೂಚಿಸಿದ್ದಾರೆ.