Saturday, January 18, 2025
Homeಯಕ್ಷಗಾನಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ - ಗಾನಕೋಗಿಲೆ ಶ್ರೀ ಕೇಶವ ಹೆಗಡೆ ಕೊಳಗಿ 

ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ – ಗಾನಕೋಗಿಲೆ ಶ್ರೀ ಕೇಶವ ಹೆಗಡೆ ಕೊಳಗಿ 

ಸೂಕ್ತ ತರಬೇತಿಯನ್ನು ಹೊಂದಿಯೇ ಒಳ್ಳೆಯ ಹೆಸರನ್ನು ಗಳಿಸಿ ಬಹು ಬೇಡಿಕೆಯ ಭಾಗವತರಾಗಿ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರೂ ಒಬ್ಬರು. ಶ್ರೀಯುತರು ಪ್ರಾಚಾರ್ಯ ಶ್ರೀ ಎಂ. ನಾರ್ಣಪ್ಪ ಉಪ್ಪೂರರ ಶಿಷ್ಯ. ಬಡಗು ತಿಟ್ಟಿನ ಹಿರಿಯ ಖ್ಯಾತ ವೇಷಧಾರಿ ಕೊಳಗಿ ಶ್ರೀ ಅನಂತ ಹೆಗಡೆಯವರ ಪುತ್ರ. 

ಗಾನಕೋಗಿಲೆ ಶ್ರೀ ಕೊಳಗಿ ಕೇಶವ ಹೆಗಡೆಯವರು ಉತ್ತರ ಕನ್ನಡ ಆಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಶ್ರೀ ಅನಂತ ಹೆಗಡೆ ಮತ್ತು ಅರುಂಧತೀ ದಂಪತಿಗಳಿಗೆ ಪುತ್ರನಾಗಿ 1964 ಮಾರ್ಚ್ 29ರಂದು ಜನಿಸಿದರು. ಕೊಳಗಿ ಶಾಲೆ ಮತ್ತು ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ವಿದ್ಯಾಭ್ಯಾಸ. ಎಳವೆಯಲ್ಲೇ ಯಕ್ಷಗಾನ ನೋಡುವ ಹವ್ಯಾಸವಿತ್ತು.

ತಂದೆ ಕೊಳಗಿ ಶ್ರೀ ಅನಂತ ಹೆಗಡೆಯವರು ಆ ಕಾಲದ ಖ್ಯಾತ ಕಲಾವಿದ. ಇಡಗುಂಜಿ ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದರು. ಹಾಗಾಗಿ ಕೊಳಗಿ ಕೇಶವ ಹೆಗಡೆಯವರಿಗೆ ಯಕ್ಷಗಾನವು ರಕ್ತಗತವಾಗಿಯೇ ಇತ್ತು. ಕೊಳಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ಹೆಗ್ಗರಣೆ, ಹೇರೂರು, ಒಂದಾನೆ ಮೊದಲಾದ ಕಡೆಗಳಲ್ಲಿ ನಡೆಯುತ್ತಿದ್ದ ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ನೆಬ್ಬೂರರ ಭಾಗವತಿಕೆಯನ್ನೂ ತಂದೆ ಕೊಳಗಿ ಅನಂತ ಹೆಗಡೆಯವರ ಮತ್ತು ಗೋಡೆ ನಾರಾಯಣ ಹೆಗಡೆ ಮೊದಲಾದವರ ವೇಷಗಳನ್ನು ನೋಡುತ್ತಾ ಬೆಳೆದವರು.

ಬಾಲಕನಾಗಿದ್ದಾಗ ಕೊಳಗಿ ಕೇಶವ ಹೆಗಡೆಯವರಿಗೆ ವೇಷಧಾರಿಯಾಗಬೇಕೆಂಬ ಆಸೆಯಿತ್ತು. ಏಳನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಾಟ್ಯವನ್ನು ಕಲಿತಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ ಮಾಡುವ ಅವಕಾಶವೂ ಆಗಿತ್ತು. ವಿಂದಾನುವಿಂದ ಕಾಳಗ ಪ್ರಸಂಗದಲ್ಲಿ ಅನುವಿಂದ, ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ರತಿ ಮೊದಲಾದ ವೇಷಗಳನ್ನು ಮಾಡಿದ್ದರು. ನೆಬ್ಬೂರು ನಾರಾಯಣ ಭಾಗವತರ ಹಾಡುಗಳನ್ನು ಕೇಳಿಯೇ ತಾನೂ ಭಾಗವತನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ಎಸ್.ಎಸ್.ಎಲ್.ಸಿ ಆದ ಬಳಿಕ ಯಕ್ಷಗಾನ ಹಾಡುಗಾರಿಕೆಯನ್ನು ಕಲಿಯುವುದೆಂದು ನಿರ್ಧರಿಸಿಯೂ ಆಗಿತ್ತು.

ತಂದೆ ಶ್ರೀ ಕೊಳಗಿ ಅನಂತ ಹೆಗಡೆಯವರಿಗೆ ಮನಸ್ಸಿಲ್ಲದಿದ್ದರೂ ಮಗನ ಆಸೆಗೆ ತಣ್ಣೀರೆರಚದೆ ಕಳುಹಿಸಿಕೊಟ್ಟಿದ್ದರು. ಯಕ್ಷಗಾನ ಭಾಗವತಿಕೆಯನ್ನು ಅಭ್ಯಸಿಸುವ ಉದ್ದೇಶದಿಂದ 1984ರಲ್ಲಿ ಕೊಳಗಿ ಕೇಶವ ಹೆಗಡೆಯವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವನ್ನು ಸೇರಿದ್ದರು. ಅಲ್ಲಿ ಪ್ರಾಚಾರ್ಯ ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರರು ಗುರುಗಳಾಗಿ ಕಲಿಕಾಸಕ್ತರಿಗೆ ಪಾಠ ಹೇಳಿಕೊಡುತ್ತಿದ್ದರು. ಮಳೆಗಾಲ ಮೂರು ತಿಂಗಳು ಕಲಿಕೆ. ಹೀಗೆ ಮೂರು ವರ್ಷಗಳ ಕಾಲ ಹಂಗಾರಕಟ್ಟೆ ಕಲಿಕಾ ಕೇಂದ್ರದ ವಿದ್ಯಾರ್ಥಿಯಾಗಿ ಭಾಗವತಿಕೆಯನ್ನು ಅಭ್ಯಸಿಸಿದ್ದರು.

ಒಂದನೇ ವರ್ಷದ ತರಬೇತಿಯ ನಂತರ ಊರ ಪ್ರದರ್ಶನಗಳಲ್ಲಿ ಹಾಡುವ ಅವಕಾಶವೂ ಆಗಿತ್ತು. ಹಂಗಾರಕಟ್ಟೆ ಕೇಂದ್ರಕ್ಕೆ 1984ರಲ್ಲಿ ಕಲಿಕಾಸಕ್ತರಾಗಿ ಸಂದರ್ಶನಕ್ಕೆ ಸುಮಾರು ನೂರು ಜನ ಬಂದಿದ್ದರು. 12 ಮಂದಿ ಮಾತ್ರ ಆಯ್ಕೆಯಾಗಿದ್ದರು. ಹಾಡು ಹೇಳುವುದಕ್ಕೆ ರಂಗವೇರುವ ಮೊದಲೇ ನೇಪಥ್ಯದಲ್ಲೇ ಗುರು ಉಪ್ಪೂರರ ಸಂದೇಶಗಳನ್ನು ನೆನಪಿಸುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ಅವರು ಅದಕ್ಕೆ ಕೊರತೆಯಾದರೆ ಸಹಿಸಿಕೊಳ್ಳುತ್ತಿರಲಿಲ್ಲವಂತೆ. ಸರಿಯಾಗಿ ಅಭ್ಯಾಸ ಮಾಡದೆ, ಪೂರ್ವಸಿದ್ಧತೆಯಿಲ್ಲದೆ ರಂಗವೇರಬಾರದು, ಸಮಯದ ಬಗ್ಗೆ ಗಮನಹರಿಸಬೇಕು ಎಂದು ಆಗಾಗ ಎಚ್ಚರಿಸುತ್ತಿದ್ದರಂತೆ.

“ತಪ್ಪಿದರೆ ತಿದ್ದಿ ತೀಡುತ್ತಿದ್ದರು. ರಂಗದಲ್ಲಿ ಕುಳಿಯುಕೊಳ್ಳುವ ಕ್ರಮದಿಂದ ತೊಡಗಿ ಎಲ್ಲವನ್ನೂ ಸೊಗಸಾಗಿ ಹೇಳಿಕೊಡುತ್ತಿದ್ದರು. ಸಂತೋಷವಾದರೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು”. ಎಂದು ಹೇಳುವ ಮೂಲಕ ಕೊಳಗಿ ಕೇಶವ ಹೆಗಡೆಯವರು ಗುರು ಶ್ರೀ ಎಂ. ನಾರ್ಣಪ್ಪ ಉಪ್ಪೂರರನ್ನು ಗೌರವಿಸುತ್ತಾರೆ. ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುವ ಸಂದರ್ಭ ಕೊಳಗಿಯವರಿಗೆ ಕಡತೋಕಾ ಮಂಜುನಾಥ ಭಾಗವತರ ಭಾಗವತಿಕೆಯನ್ನು ಕೇಳುವ ಅವಕಾಶವೂ ಸಿಕ್ಕಿತ್ತು. 

ಹಂಗಾರಕಟ್ಟೆ ಕೇಂದ್ರದಲ್ಲಿ ಮೂರು ವರ್ಷಗಳ ತರಬೇತಿಯನ್ನು ಪಡೆದು ಗುಂಡಬಾಳ ಮೇಳದಲ್ಲಿ ಸಂಗೀತ ಭಾಗವತನಾಗಿ ಒಂದು ವರ್ಷ ತಿರುಗಾಟ. ಬಳಿಕ ಮುಲ್ಕಿ ಮೇಳದಲ್ಲಿ ಒಂದು ವರ್ಷ ಕಲಾಸೇವೆ. ಆಗ ಮುಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪಾಚಾರ್ ಮತ್ತು ಕೆ.ಪಿ.ಹೆಗಡೆಯವರು ಭಾಗವತರಾಗಿದ್ದರು. ಕಟ್ಟೆ ಶ್ರೀನಿವಾಸ ಆಚಾರ್ ಮದ್ದಳೆಗಾರರಾಗಿದ್ದರು. ತಂದೆ ಕೊಳಗಿ ಅನಂತ ಹೆಗಡೆ, ಐರೋಡಿ ಗೋವಿಂದಪ್ಪ, ನಗರ ಜಗನ್ನಾಥ ಶೆಟ್ಟಿ, ಹಳ್ಳಾಡಿ ಜಯರಾಮ ಶೆಟ್ಟಿ, ಅರಾಟೆ ಮಂಜುನಾಥ, ಮೊದಲಾದವರು ಆಗ ಮುಲ್ಕಿ ಮೇಳದ ಕಲಾವಿದರಾಗಿದ್ದರು. ಬಳಿಕ ಒಂದು ವರ್ಷ ಕಮಲಶಿಲೆ ಮೇಳದ ಮುಖ್ಯ ಭಾಗವತನಾಗಿ ತಿರುಗಾಟ ನಡೆಸಿದ್ದರು.

ಆಮೇಲೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಎರಡು ವರ್ಷ ಎರಡನೇ ಭಾಗವತನಾಗಿ ಕಲಾಸೇವೆ. ಬಳಿಕ ಶಿರಸಿ ಮಾರಿಕಾಂಬಾ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಈ ಸಂದರ್ಭ ಅನೇಕ ಹಿರಿಯ ಕಲಾವಿದರ ಒಡನಾಟವು ಸಿಕ್ಕಿತ್ತು. ಬಳಿಕ ಏಳು ವರ್ಷಗಳ ಕಾಲ ಬಚ್ಚಗಾರು ಮೇಳದಲ್ಲಿ ಕಲಾಸೇವೆ. ಈ ಮೇಳದಲ್ಲಿ ಅಪಾರ ಅನುಭವವನ್ನು ಕೊಳಗಿ ಕೇಶವ ಹೆಗಡೆಯವರು ಪಡೆದಿದ್ದರು. ಪೌರಾಣಿಕ ಪ್ರಸಂಗಗಳು, ಅವುಗಳ ನಡೆ, ಪ್ರಸಂಗವನ್ನು ಮುನ್ನಡೆಸುವ ರೀತಿ, ರಂಗತಂತ್ರ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದರು. ಶ್ರೀ ಪಿ.ವಿ.ಹಾಸ್ಯಗಾರ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಹಾಬಲ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯ, ಕೊಳಗಿ ಅನಂತ ಹೆಗಡೆ ಮೊದಲಾದ ಖ್ಯಾತ ಕಲಾವಿದರನ್ನು ಕುಣಿಸುವ ಅವಕಾಶವೂ ಒದಗಿತ್ತು.

ತಂದೆ ಮತ್ತು ಮಗ (ಕೊಳಗಿ ಅನಂತ ಹೆಗಡೆ ಮತ್ತು ಕೊಳಗಿ ಕೇಶವ ಹೆಗಡೆ) ಒಟ್ಟಾಗಿ ತಿರುಗಾಟ ಮಾಡಿದ ಮೇಳಗಳು ಮುಲ್ಕಿ ಮೇಳ ಮತ್ತು ಬಚ್ಚಗಾರು ಮೇಳ. ರಂಗದಲ್ಲಿ ತಂದೆಯನ್ನು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರು. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶ್ರೀ ನಾರಾಯಣ ಶಬರಾಯರ ನಂತರ ಕಲಾಸೇವೆಯನ್ನು ಮಾಡಿದ್ದರು. ಕೆರೆಮನೆ ಶ್ರೀ ಶಂಭು ಹೆಗಡೆಯವರ ವೇಷಕ್ಕೆ ಹಾಡು ಹೇಳುವ ಅವಕಾಶ ಸೀಗಲಿಲ್ಲ ಎಂಬ ನೋವು ಕೊಳಗಿ ಕೇಶವ ಹೆಗಡೆಯವರಿಗಿದೆ. ಆದರೂ ತಾಳಮದ್ದಳೆಗಳಲ್ಲಿ  ಅರ್ಥಗಾರಿಕೆಯಲ್ಲಿ ಪದ್ಯ ಹೇಳಿದ್ದೇನೆ ಎಂಬ ಸಂತೋಷವನ್ನೂ ಹೊಂದಿದ್ದಾರೆ. ಶಂಭು ಹೆಗಡೆಯವರು ರಂಗದಲ್ಲಿ ಮೆರೆಯುತ್ತಿರುವ ಕಾಲಕ್ಕೆ ನಾನು ಕಿರಿಯವನಾಗಿದ್ದೆ. ಅನನುಭವಿಯಾಗಿದ್ದೆ. ಹಾಗಾಗಿ ಅವಕಾಶ ಸಿಕ್ಕಿರಲಿಲ್ಲ ಎಂದು ಕೊಳಗಿಯವರು ನೋವಿನ ಜೊತೆ ಸಮಾಧಾನವನ್ನೂ ಹೊಂದುತ್ತಾರೆ.

ಉಪ್ಪೂರರನ್ನು ಬಿಟ್ಟರೆ ಚಿಟ್ಟಾಣಿಯವರನ್ನು ಅತ್ಯಂತ ಹೆಚ್ಚು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರೇ ಆಗಿರಬಹುದೆಂದು ನನ್ನ ಊಹೆ. ಅದ್ಭುತವಾದ ಲಯಸಿದ್ಧಿಯನ್ನು ಹೊಂದಿ, ಹೊಂದಾಣಿಕೆಯ ಸ್ವಭಾವದಿಂದ ಹಿಮ್ಮೇಳದವರನ್ನು ಚಿಟ್ಟಾಣಿಯವರು ಪ್ರೋತ್ಸಾಹಿಸುತ್ತಿದ್ದರೆಂದು ಕೊಳಗಿಯವರು ಅವರೊಂದಿಗಿನ ಒಡನಾಟವನ್ನು ಸದಾ ನೆನಪಿಸುತ್ತಾರೆ. ಕೆರೆಮನೆ ಮಹಾಬಲ ಹೆಗಡೆಯವರು ಲಯ, ರಾಗ, ತಾಳ, ಕುಣಿತ, ಮಾತುಗಾರಿಕೆ, ಸಾಹಿತ್ಯದ ಬಗೆಗೆ ತಿಳಿದಿರುವ ಕಲಾವಿದ. ಅವರ ಒಡನಾಟವೂ ಬೆಳವಣಿಗೆಗೆ ಸಹಕಾರವಾಗಿತ್ತು ಎಂದು ಹೇಳುವ ಮೂಲಕ ಆ ಖ್ಯಾತ ಕಲಾವಿದರನ್ನು ಕೊಳಗಿಯವರು ಗೌರವಿಸುತ್ತಾರೆ. 

ಸಾಲಿಗ್ರಾಮ ಮೇಳದ ತಿರುಗಾಟ, ರಂಗನಾಯಕಿ, ಸತ್ಯಹರಿಶ್ಚಂದ್ರ, ಕಾರ್ತವೀರ್ಯಾರ್ಜುನ, ಕೀಚಕ ವಧೆ, ಗದಾಯುದ್ಧ ಮೊದಲಾದ ಪ್ರಸಂಗಗಳ ಹಾಡುಗಳು ಕೊಳಗಿಯವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಸಮಯದಲ್ಲಿ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ಒಡನಾಟವೂ ದೊರೆತಿತ್ತು. ಸಾಲಿಗ್ರಾಮ ಮೇಳ ಬಿಟ್ಟ ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ನೇತೃತ್ವದ ಪೂರ್ಣಚಂದ್ರ ಕಲಾ ಮಂಡಳಿ ತಂಡದ ಪೂರ್ಣಕಾಲಿಕ ಭಾಗವತನಾಗಿ ಸೇವೆ ಅಲ್ಲದೆ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನಾಯಕತ್ವದ ‘ವೀರಾಂಜನೇಯ ಯಕ್ಷಮಿತ್ರ ಮಂಡಳಿ’ ಯಲ್ಲಿಯೂ ಭಾಗವತನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಒಂದೇ ಮನೆಯ ಮೂರು ಮಂದಿಗಳ ವೇಷಕ್ಕೆ ಪದ್ಯ ಹೇಳುವ ಅವಕಾಶವಾಗಿತ್ತು. (ತಂದೆ, ಮಗ, ಮೊಮ್ಮಗ- ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ)

ಸಾಲಿಗ್ರಾಮ ಮೇಳದ ಮಳೆಗಾಲದ ಮುಂಬೈ ಪ್ರದರ್ಶನಗಳಲ್ಲಿಯೂ ಭಾಗಿಯಾಗಿದ್ದರು. ಪ್ರಸ್ತುತ ಅತಿಥಿ ಕಲಾವಿದರಾಗಿ ಕೊಳಗಿ ಶ್ರೀ ಕೇಶವ ಹೆಗಡೆಯವರು ಯಕ್ಷಗಾನ ಕ್ಷೇತ್ರದ ಭಾಗವತರಾಗಿ ವ್ಯವಸಾಯ ಮಾಡುತ್ತಿದ್ದಾರೆ. 2009ರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರು ತಮ್ಮ ತೀರ್ಥರೂಪರಾದ ಕೊಳಗಿ ಶ್ರೀ ಅನಂತ ಹೆಗಡೆಯವರ ಹೆಸರಿನಲ್ಲಿ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ (ರಿ) ಸಿದ್ಧಾಪುರ ಎಂಬ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಶ್ರೀ ಅನಂತ ಪ್ರಶಸ್ತಿ ಪ್ರದಾನವೂ ನಡೆಯುತ್ತಿದೆ. ಶ್ರೀ ಎಂ.ಎಂ.ಹೆಗಡೆ ಮತ್ತು ನೆಬ್ಬೂರು ನಾರಾಯಣ ಭಾಗವತರು ಈ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುತ್ತಾರೆ. ಕೊಳಗಿ ಕೇಶವ ಹೆಗಡೆಯವರು ವಿದೇಶಗಳಲ್ಲೂ ತಮ್ಮ ಗಾನಸುಧೆಯನ್ನು ಹರಿಸಿದವರು. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ತಂಡದ ಭಾಗವತನಾಗಿ ಎರಡು ಬಾರಿ ಸಿಂಗಾಪುರ, ಅಲ್ಲದೆ ಅಮೆರಿಕಾ, ದುಬೈಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಕೊಳಗಿ ಕೇಶವ ಹೆಗಡೆಯವರ ಪತ್ನಿ ಶ್ರೀಮತಿ ಮಂಜುಳಾ ಅವರು ಚೆನ್ನಕಂಡ ಶ್ರೀ ವೆಂಕಟೇಶ ಹೆಗಡೆ ಮತ್ತು ಸುಮತಿ ಹೆಗಡೆ ದಂಪತಿಗಳ ಪುತ್ರಿ. ಶ್ರೀ ವೆಂಕಟೇಶ ಹೆಗಡೆ ಅವರು ವಿದ್ವಾಂಸರಾಗಿದ್ದು ಯಕ್ಷಗಾನ ವೇಷಧಾರಿಯೂ ತಾಳಮದ್ದಳೆ ಅರ್ಥಧಾರಿಯೂ ಆಗಿ ಪ್ರಸಿದ್ಧರು. ಭಾವನಾತ್ಮಕ ಪಾತ್ರಗಳಲ್ಲಿ ಒಳ್ಳೆಯ ಹೆಸರು ಪಡೆದವರು. ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಮಂಜುಳಾ ದಂಪತಿಗಳ ಪುತ್ರಿ ಕು| ಹರ್ಷಿತಾ ಆರನೆಯ ತರಗತಿ ವಿದ್ಯಾರ್ಥಿನಿ. ಯಶಸ್ವೀ ಪ್ರದರ್ಶನಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕು? ಭಾಗವತರು, ವೇಷಧಾರಿಗಳು ಹೇಗಿರಬೇಕು? ಎಂಬುದನ್ನು ಕೊಳಗಿ ಕೇಶವ ಹೆಗಡೆಯವರು ಮನ ಮುಟ್ಟುವಂತೆ ಹೇಳುತ್ತಾರೆ. ಅವರ ಮಾತುಗಳಲ್ಲಿ ಸಂತಸದ ಜತೆ ನೋವಿನ ಧ್ವನಿಯನ್ನೂ ಗುರುತಿಸಬಹುದು.

“ಪ್ರದರ್ಶನವು ಯಶಸ್ವಿಯಾಗಬೇಕಾದರೆ ಹಿಮ್ಮೇಳ ಮತ್ತು ಮುಮ್ಮೇಳಗಳ ಸಾಂಗತ್ಯ ಅಗತ್ಯ. ಪರಸ್ಪರ ಅರಿತು ಸಹಕರಿಸಬೇಕಾದುದು ಉಭಯರಿಗೂ ಕರ್ತವ್ಯ. ಭಾಗವತಿಕೆ ಭಾವಪೂರ್ಣವಾಗಿರಬೇಕು. ಅವನು ವೇಷಧಾರಿಯಾಗಲೇಬೇಕು. ಕಲಾವಿದರ ಜತೆ ಸಮಾಲೋಚನೆ ಮಾಡಲೇಬೇಕು ಇಂತಹಾ ಪದ್ಯ ಹೀಗೆ ಹೇಳುತ್ತೇನೆ ಎಂದು ಸೂಚಿಸಬೇಕು. ಭಾಗವತನಿಗೂ ನಿರ್ದೇಶನದ ಅಗತ್ಯವಿದೆ. ಯಾರೂ ಪರಿಪೂರ್ಣರಲ್ಲ. ಹಿರಿಯ ಮುಮ್ಮೇಳ ಕಲಾವಿದರ ಅನುಭವಗಳನ್ನು ಪಡೆಯಬೇಕು. ನಾನು ಭಾಗವತ ಎಂಬ ಅಹಂಕಾರ ಸಲ್ಲದು. ಹಿರಿತನ, ಅನುಭವಗಳಿಂದ ಮಾಗಿದ ಮುಮ್ಮೇಳ ಕಲಾವಿದರನ್ನು ಗೌರವಿಸಿ ಮಾಹಿತಿ ಪಡೆಯಬೇಕು. ಪ್ರೇಕ್ಷಕರಿಗೆ ಇನ್ನೂ ಬೇಕು ಎನಿಸಿದಾಗ ಭಾಗವತನೂ ವೇಷಧಾರಿಯೂ ಮುಗಿಸಬೇಕು. ಕುಣಿತವೂ ಅಭಿನಯವೂ ಜತೆಯಾಗಿರಬೇಕು. (ಅದು ಕಷ್ಟ. ಆದರೂ ಜತೆಯಾಗಿರಬೇಕು) ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದ ಸಾಲ್ವನಿಗಿರುವ ಪದ್ಯ. ‘ಅರರೇ ಶಾಭಾಸು ದ್ರವ್ಯವನೀವೆ ಎನುತಲೀ ಕರೆತಂದಳೀ ವಿಪ್ರನ …” ಇದು ಶೃಂಗಾರ ಅಲ್ಲ. ಹಲವು ಬಾರಿ ಅಭಿನಯ ಸಲ್ಲದು. ಹಾಗೆ ಪದ್ಯ ಹೇಳದಿದ್ದರೆ ಭಾಗವತಿಕೆ ಗೊತ್ತಿಲ್ಲ ಎಂಬ ಆರೋಪ ಬರುತ್ತದೆ. ಕಲಾವಿದರಿಗೆ ಬೇಕಾದಂತೆ ಪದ್ಯ ಹೇಳಬೇಕಾದ ಕಾಲ ಇದು. ಪ್ರಸಂಗಕ್ಕೆ ಬೇಕಾದಂತೆ ಪದ್ಯ ಹೇಳಿದರೆ ಬೇಡಿಕೆ ಇಲ್ಲ. ಕಲಾವಿದರೂ ಪ್ರೇಕ್ಷಕರೂ ಇದನ್ನು ತಿಳಿದುಕೊಳ್ಳಬೇಕು. ಕನಕಾಂಗೀ ಕಲ್ಯಾಣ ಪ್ರಸಂಗದ ‘ತಾಯೆ ಚಿಂತಿಪುದೇನು ಪೇಳೆನ್ನೊಳು ಮಾಯವಿದರೊಳಿನ್ನು ತೋಯಜ ಮುಖಿ ಸುಪ್ರೀಯದೊಳೇಳು ಆಯಾಸಗಳುಳಿದು….” ಚಿಂತೆ ಏನೆಂದು ಕೇಳುವ ಪದ್ಯ ಇದು. ಹಲವು ತಾಳಗಳಲ್ಲಿ ಹೇಳಿ ಕುಣಿಸುತ್ತಾರೆ! ಇಂತಹ ಉದಾಹರಣೆಗಳು, ಸಂದರ್ಭಗಳು ಹಲವಾರು ಇವೆ. ಕುಶಲವರ ಕಾಳಗ ಪ್ರಸಂಗದ ಹಾಡು. ‘ಚೆಲುವರನು ನೋಡಿದರೆ ನಲಿವುದೆನ್ನಯ ಮನವು..’ ಇದಕ್ಕೂ ಭಾವ ಇಲ್ಲದ ಹಾಡು! ರಾಮನ ಪಾತ್ರಧಾರಿಯೂ ಕುಣಿಯುತ್ತಾನೆ. ಭಾವನಾತ್ಮಕ ಹಾಡು ಯಕ್ಷಗಾನದಲ್ಲಿ ಸತ್ತು ಹೋದಾಗ ಬೇಸರವಾಗುತ್ತದೆ. ವೇಗದ ಹಾಡುಗಾರಿಕೆಗೆ ಅಭಿನಯ ಮತ್ತು ಕುಣಿತ ಎರಡೂ ಕಷ್ಟ. ಅಭಿನಯ ಮತ್ತು ಕುಣಿತ ಜತೆಯಾಗಿರಬೇಕಾದುದು ಅಗತ್ಯ. ಹಾಗಾಗಿ ಯಕ್ಷಗಾನಕ್ಕೆ ವೇಗವು ಸಲ್ಲದು”

ಇದು ಕೊಳಗಿ ಕೇಶವ ಹೆಗಡೆ ಅವರ ಮನದ ಮಾತುಗಳು. ಗಾನಕೋಗಿಲೆ ಬಡಗುತಿಟ್ಟಿನ ಹೆಸರಾಂತ ಭಾಗವತರಾದ ಕೊಳಗಿ ಶ್ರೀ ಕೇಶವ ಹೆಗಡೆಯವರಿಗೆ ಇನ್ನೂ ಹೆಚ್ಚಿನ ಕಲಾಸೇವೆ ಮಾಡುವ ಭಾಗ್ಯವು ದೊರೆಯಲಿ. ಅವರ ಗಾನಾಮೃತವನ್ನು ಕಲಾಭಿಮಾನಿಗಳು ದೀರ್ಘಕಾಲ ಸವಿಯುವಂತಾಗಲಿ. 

ಲೇಖನ: ರವಿಶಂಕರ್ ವಳಕ್ಕುಂಜ 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments