ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿ ವಿಶೇಷ ಸಾಧನೆಗೈದ ನಿ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಸುಪುತ್ರ ಡಾ. ನಿ.ಬೀ ವಿಜಯ ಬಲ್ಲಾಳರು ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಕಳೆದ ಎಂಟು ದಶಕಗಳಿಂದ ಕಲಾ ಸಾಧನೆಗೈಯುತ್ತಿರುವ ಪರ್ಕಳದ ಹಿರಿಯ ಸಂಘಟನೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.) ಆಯ್ಕೆಯಾಗಿದೆ.
ಮಂಡಳಿಯ ಸ್ಥಾಪಕರ ನೆನಪಿನಲ್ಲಿ ನೀಡುವ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಸಸ್ತಿಗಳನ್ನು ಅನುಕ್ರಮವಾಗಿ ಪ್ರಸಿದ್ಧ ಮದ್ದಲೆವಾದಕ ಶ್ರೀ ಮಂಜುನಾಥ ಭಂಡಾರಿ ಕರ್ಕಿ, ಹಿರಿಯ ಹವ್ಯಾಸಿ ಭಾಗವತ ಶ್ರೀ ಟಿ. ಭೋಜಪ್ಪ ಸಾಲ್ಯಾನ್ ತೋನ್ಸೆ ಹಾಗೂ ಬಹುಮುಖಿ ಕಲಾವಿದ ಶ್ರೀ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 7, 2021 ಭಾನುವಾರದಂದು ಅಂಬಲಪಾಡಿಯಲ್ಲಿ ಜರಗಲಿದೆ ಎಂದು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಕೆ.ಜೆ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.