ಇಂದಿನಿಂದ ಪುತ್ತೂರಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ನಡೆಯಲಿದೆ. ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಜರಗಲಿರುವ ಈ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ.
ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 16 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷದ ಕಾರ್ಯಕ್ರಮ ಇಂದಿನಿಂದ ಅಂದರೆ ಫೆಬ್ರವರಿ 27ರಿಂದ ಆರಂಭವಾಗಲಿದ್ದು ಮಾರ್ಚ್ 1ರ ವರೆಗೆ ನಡೆಯಲಿದೆ.
ಪ್ರತಿದಿನವೂ ಸಂಜೆ 6.30 ಘಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಬಾರಿ ಒಂದು ದಿನ ಶಾಸ್ತ್ರೀಯ ಸಂಗೀತ ಮತ್ತು ಉಳಿದೆರಡು ದಿನಗಳಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಅದರಂತೆ ಮೊದಲ ದಿನ ಅಂದರೆ ಫೆಬ್ರವರಿ 27 ಶನಿವಾರ 6 ಘಂಟೆಗೆ ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಹಾಡುಗಾರಿಕೆಯಲ್ಲಿ ವಿದ್ವಾನ್ ರಾಮಕೃಷ್ಣನ್ ಮೂರ್ತಿ, ವಯಲಿನ್ ವಿದುಷಿ ಚಾರುಮತಿ ರಘುರಾಮನ್, ಮೃದಂಗದಲ್ಲಿ ವಿದ್ವಾನ್ ದಿಲ್ಲಿ ಎಸ್. ಸಾಯಿರಾಮ್ ಮತ್ತು ಘಟಂ ವಾದಕರಾಗಿ ವಿದ್ವಾನ್ ವಝಪಲ್ಲೀ ಆರ್. ಕೃಷ್ಣಕುಮಾರ್ ಅವರು ಭಾಗವಹಿಸಲಿದ್ದಾರೆ.
ಫೆಬ್ರವರಿ 28 ಆದಿತ್ಯವಾರ ಸಂಜೆ 6.30ಕ್ಕೆ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಾಲಿಗ್ರಾಮ ಮೇಳದವರು ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.
ಕೊನೆಯ ದಿನ ಮಾರ್ಚ್ 1, ಸೋಮವಾರದಂದು ಸಂಜೆ 6.30ಕ್ಕೆ ತೆಂಕುತಿಟ್ಟಿನ ಯಕ್ಷಗಾನ ಕಾರ್ಯಕ್ರಮ ಇರುತ್ತದೆ. ಹನುಮಗಿರಿ ಮೇಳದವರಿಂದ ‘ಶುಕ್ರನಂದನೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.

