‘ದೈವ ದೇವರುಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಿದರೆ ಆ ದೈವ ಶಕ್ತಿಗಳು ಮನುಷ್ಯನನ್ನು ಕೈಹಿಡಿದು ಮುನ್ನಡೆಸುತ್ತವೆ. ಮನವಳಿಕೆ ಗುತ್ತಿನಲ್ಲಿ ದೈವದೇವರ ಆರಾಧನೆಯಿಂದ ಆ ಮನೆತನದವರಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಧಾರ್ಮಿಕ ಪ್ರಜ್ಞೆ ಸದಾ ಇದೆ.
ಇದರೊಂದಿಗೆ ಯಕ್ಷಗಾನ ಸೇವೆಯನ್ನೂ ನಡೆಸುತ್ತಿರುವುದು ಸ್ತುತ್ಯರ್ಹ.ಯಕ್ಷಗಾನ ನವರಸಪ್ರಧಾನ ಕಲೆ. ಮನುಷ್ಯನಿಗೆ ಯಕ್ಷಗಾನದಿಂದ ನೈಪುಣ್ಯತೆ, ಕೌಶಲ್ಯತೆ ಬರುವುದರ ಜೊತೆಗೆ ಅದು ಧಾರ್ಮಿಕ ಪ್ರಜ್ಞೆಯನ್ನೂ ಮೂಡಿಸುತ್ತದೆ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಪೆರಾಬೆ ಗ್ರಾಮದ ಮನವಳಿಕೆ ಗುತ್ತುವಿನಲ್ಲಿ ಬೆಂಗಳೂರು ಉದ್ಯಮಿ ಹೇಮಂತ್ ರೈ ಮನವಳಿಕೆ ಗುತ್ತು ಅವರು ಏರ್ಪಡಿಸಿದ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು. ‘ಯಕ್ಷಗಾನದ ಮೂಲಕ ಧರ್ಮಪ್ರಜ್ಞೆ ಮೂಡಿಸುವ ಕಾರ್ಯವಾಗಲಿ’ ಎಂದು ತಿಳಿಸಿ ‘ಸುಸಂಸ್ಕೃತ ಮನೆತನದಿಂದ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲು ಸಾಧ್ಯ’ ಎಂದವರು ನುಡಿದರು.
ಮಕ್ಕಳಿಂದ ಸಂಸ್ಕಾರ ಉಳಿಯಬೇಕು : ಐಕಳ ಹರೀಶ್ ಶೆಟ್ಟಿ
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಾಗತಿಕ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾತನಾಡಿ ‘ಸಮಾಜದಲ್ಲಿ ಸತ್ಕಾರ್ಯಗಳು ನಡೆಯಬೇಕಾದರೆ ಮಕ್ಕಳಿಂದ ಸಂಸ್ಕಾರ ಉಳಿಯಬೇಕು. ಬಂಟ ಸಮಾಜವು ಎಲ್ಲಾ ಸಮಾಜದವರನ್ನು ಪ್ರೀತಿ ಮಾಡುವ ಸಮುದಾಯವಾಗಿದ್ದು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಕೀರ್ತಿಗೆ ಪಾತ್ರವಾಗಿದೆ. ಜಾಗತಿಕ ಬಂಟ ಸಂಘಗಳ ಒಕ್ಕೂಟದಿಂದ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ 120 ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದಲ್ಲದೆ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯಲ್ಲಿ ಆರ್ಥಿಕ ನೆರವುವನ್ನೂ ನೀಡಲಾಗಿದೆ ಎಂದು ತಿಳಿಸಿ ‘ಹೇಮಂತ್ ರೈ ಮನವಳಿಕೆ ಗುತ್ತು ರಂತಹ ಸಾಮಾಜಿಕ ಕಳಕಳಿಯುಳ್ಳವರು ಹುಟ್ಟಿದರೆ ಆ ಕುಟುಂಬವೇ ಸಾರ್ಥಕ’ ಎಂದು ನುಡಿದರು.
ಯಕ್ಷಧ್ರುವ ಪಟ್ಲ ಪೌಂಡೇಷನ್‍ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ. ‘ಹೇಮಂತ್ ರೈ ಮನವಳಿಕೆ ಗುತ್ತು ಅವರು ಯಕ್ಷಧ್ರುವಪಟ್ಲ ಪೌಂಡೇಷನ್‍ನ ಚೆನ್ನೈ ಘಟಕದ ಸ್ಥಾಪನೆಗೆ ಮೂಲ ಪ್ರೇರಕರಾಗಿದ್ದು ಆ ಮೂಲಕ ಟ್ರಸ್ಟ್‍ಗೆ ಮನವಳಿಕೆ ಗುತ್ತಿನ ಋಣವಿದೆ ಎಂದು ತಿಳಿಸಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಇನ್ನಷ್ಟು ಧರ್ಮಕಾರ್ಯ ಮಾಡಲು ಭಗವಂತ ಅನುಗ್ರಹಿಸಲಿ’ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೇಮಂತ್ ರೈ ಮನವಳಿಕೆ ಗುತ್ತು ಅವರು ‘ದುರ್ಗಾದೇವಿ ರೌದ್ರಾವತಾರದಲ್ಲಿ ಧೂಮ್ರಾಕ್ಷನನನ್ನು ವಧೆ ಮಾಡಿದ ದಿವ್ಯಶಕ್ತಿಯಾಗಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳು ನೆಲೆನಿಂತ ಜಾಗವೇ ಮನವಳಿಕೆ ಗುತ್ತು ಆಗಿದೆ. ಈ ಮನೆತನದಲ್ಲಿ ಹಿರಿಯರಾದ ಕರಿಯಪ್ಪ ರೈ, ಉಮೇಶ್ ರೈ ಮನವಳಿಕೆ ಹಾಗೂ ಇನ್ನಿತರರು ರಾಜಕೀಯ, ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ದಿವಸಗಳಲ್ಲಿ ಇನ್ನಷ್ಟೂ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಯುವಸಾಧಕರಿಗೆ ಸನ್ಮಾನ :
ಸಮಾರಂಭದಲ್ಲಿ ಮನವಳಿಕೆ ಗುತ್ತಿನವರಾದ ವೈದ್ಯಕೀಯ ಸಾಧಕ ಮನವಳಿಕೆ ಡಾ. ಅಭಿಷೇಕ್ ಶೆಟ್ಟಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಮನವಳಿಕೆ ಅಭಿಷೇಕ್ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಭಿಷೇಕ್ ಎನ್. ಶೆಟ್ಟಿ ಪರವಾಗಿ ತಂದೆ ಜಗನ್ನಾಥ್ ಶೆಟ್ಟಿ ಮತ್ತು ತಾಯಿ ತುಳಸಿ ಶೆಟ್ಟಿಯವರು ಸನ್ಮಾನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಅಭಿನಂದಿಸಲಾಯಿತು. ನಿತ್ಯಾನಂದ ಶೆಟ್ಟಿ ಮನವಳಿಕೆ, ಸುಭಾಷ್ ರೈ ಮನವಳಿಕೆ ಮತ್ತು ಮನವಳಿಕೆ ಗುತ್ತು ಲಕ್ಷ್ಮೀನಾರಾಯಣ ರೈ ಹರೇಕಳ ಅವರು ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಮತ್ತು ಬರೋಡದ ಉದ್ಯಮಿ ಶಶಿಧರ ಶೆಟ್ಟಿ, ಬರೋಡ ಶುಭಹಾರೈಸಿದರು.
ಪುತ್ತೂರು ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೊಡಗು ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಮಡಿಕೇರಿಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಹೇಶ್ ಮೋಟಾರ್ಸ್‍ನ ಮಾಲಕರಾದ ಎ.ಕೆ. ಜಯರಾಮ ಶೇಖ, ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ ಮತ್ತು ವಿಠಲ ರೈ ಮನವಳಿಕೆ ಗುತ್ತು ಉಪಸ್ಥಿತರಿದ್ದರು.
ದಯಾನಂದ ರೈ ಮನವಳಿಕೆ ಗುತ್ತು ಸ್ವಾಗತಿಸಿ, ಪ್ರಶಾಂತ್ ರೈ ಮನವಳಿಕೆ ಗುತ್ತು ಧನ್ಯವಾದ ಸಮರ್ಪಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಅಪೂರ್ವ ಜೆ. ಶೆಟ್ಟಿ ಪ್ರಾರ್ಥಿಸಿದರು, ಮನವಳಿಕೆ ಗುತ್ತಿನ ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ, ವಿಜಯಕುಮಾರ್ ರೈ, ರಾಧಾಕೃಷ್ಣ ರೈ ದೆಹಲಿ, ಸುಧಾಕರ ರೈ, ಪ್ರದೀಪ್ ರೈ ಸಹಕರಿಸಿದರು.
ಸಭೆಯ ಬಳಿಕ ಜ್ಞಾನ ಶಕ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು