ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಆಯೋಜಿಸುತ್ತಿರುವ ಅಭೂತಪೂರ್ವ ಕಾರ್ಯಕ್ರಮವಾದ ಸಂಪಾಜೆ ಯಕ್ಷೋತ್ಸವವು ಈ ಬಾರಿ ಇದೇ ಬರುವ ಮಾರ್ಚ್ 6, 2021, ಶನಿವಾರದಂದು ಸಂಜೆ 4 ಘಂಟೆಗೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಆರಂಭವಾಗಲಿದೆ.
ಉದ್ಘಾಟನಾ ಕಾರ್ಯಕ್ರಮ ಸಂಜೆ 4 ಘಂಟೆಯಿಂದ 5 ಘಂಟೆಯ ವರೆಗೆ ನಡೆಯಲಿದೆ. ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಉದ್ಘಾಟಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ಯು.ಶಿವಶಂಕರ ಭಟ್ಟರಿಗೆ ವೈದಿಕ ಪ್ರಶಸ್ತಿ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಸನ್ಮಾನ, ಶ್ರೀ ರಾಜೇಶ್ ರೈ ಕಲ್ಲಂಗಳ ಇವರಿಗೆ ಕಲಾಪೋಷಕ ಪ್ರಶಸ್ತಿ, ಭಾಗವತತ್ರಯರಾದ ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ದಿನೇಶ ಅಮ್ಮಣ್ಣಾಯ ಇವರಿಗೆ ಕೇಶವಾನಂದ ಭಾರತೀ ಶಿಷ್ಯ ಭಾಗವತ ಪ್ರಶಸ್ತಿ ನೀಡಲಾಗುವುದು.
ಮೊದಲ ಯಕ್ಷಗಾನ ಪ್ರಸಂಗದ ಪ್ರದರ್ಶನ ಮುಗಿದ ನಂತರ ರಾತ್ರಿ 7 ಘಂಟೆಯಿಂದ ರಾತ್ರಿ 8 ಘಂಟೆಯ ವರೆಗೆ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಕಾರ್ಯಕ್ರಮ ನಡೆಯಲಿದೆ. ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀ ಕೇಶವಾನಂದ ಭಾರತೀ ನ್ಯಾಯ ಪ್ರಶಸ್ತಿಯನ್ನು ಶ್ರೀ ತುಷಾರ್ ಮೆಹ್ತಾ ಅವರಿಗೂ, ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿಯನ್ನು ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರಿಗೂ, ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿಯನ್ನು ಶ್ರೀ ವಿದ್ಯಾಭೂಷಣ ಅವರಿಗೆ ಮತ್ತು ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ ಅವರಿಗೆ ನೀಡಲಾಗುವುದು.
ಕಾರ್ಯಕ್ರಮದ ಅನಂತರ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.
