“ಕಲ್ಲಾಡಿ ಕೊರಗ ಶೆಟ್ಟರು ಕಲಾವಿದರ ಕಷ್ಟವನ್ನು ಕಂಡವರು ಮತ್ತು ನೋವನ್ನು ಉಂಡವರೂ ಆಗಿದ್ದರು. ಶೆಟ್ಟರು ಮೇಳದ ದಾರ್ಶನಿಕ ಯಜಮಾನರು ಮಾತ್ರವಲ್ಲ ಯಜಮಾನ ಶಬ್ದದ ಜೀವಂತ ಪ್ರತಿರೂಪರು. ಅವರು ನಿಷ್ಠಾವಂತ ಧನಿಯಾಗಿ ಯಕ್ಷಗಾನದ ಧ್ವನಿಯಾಗಿದ್ದರು” – ದಿ| ಶೇಣಿ ಗೋಪಾಲಕೃಷ್ಣ ಭಟ್
“ಕಲ್ಲಾಡಿ ಕೊರಗ ಶೆಟ್ಟರ ಸ್ಮರಣೆಯಲ್ಲಿ ಯಾವನಿಗೆ ಮೈಯಲ್ಲಿ ನವಿರೇಳುವುದಿಲ್ಲವೋ ಅವನು, ಅವರು ದಿವಂಗತರಾದ ಮೇಲೆಯೇ ಹುಟ್ಟಿರಬೇಕು. ಯಕ್ಷಗಾನದ ಕಲ್ಪನೆ, ವ್ಯವಸ್ಥಾ ಚಾತುರ್ಯ, ವ್ಯವಸ್ಥಾಪಕನಲ್ಲಿರಬೇಕಾದ ಗಾಂಭೀರ್ಯಗಳು ಅವರಲ್ಲಿದ್ದುವು. ತೆಂಗಿನಕಾಯಿಯ ಹೊರಗೆ ಒರಟು, ಒಳಗೆ ಮಧುರೋದಕ ಹೇಗೋ, ಹಾಗೆಯೇ ಅವರ ವ್ಯಕ್ತಿತ್ವ ಎಂದು ನನ್ನ ಅನಿಸಿಕೆ” – ದಿ| ಮಲ್ಪೆ ರಾಮದಾಸ ಸಾಮಗ
“ತೆಂಕುತಿಟ್ಟಿನಲ್ಲಿ ಡೇರೆ ಮೇಳಗಳ ಉಗಮ ಉಚ್ಛ್ರಾಯ ಕಾಲವೆನಿಸಿದ ೧೯೫೦-೧೯೯೦ರ ಅವಧಿಯ ಮೂಲ ಪ್ರವರ್ತಕರು ಕೊರಗ ಶೆಟ್ಟರು. ಅವರ ವ್ಯಕ್ತಿತ್ವವು ಯಕ್ಷಗಾನ ಕಲೆಯ ಚರಿತ್ರೆಯಲ್ಲಿ ಒಂದು ವರ್ಣಮಯ ಅಧ್ಯಾಯದ ವಸ್ತುವಾಗಿದೆ” – ಡಾ. ಎಂ. ಪ್ರಭಾಕರ ಜೋಶಿ
“ಎಲ್ಲಿಯ ವರೆಗೆ ಯಕ್ಷಗಾನ ಪ್ರದರ್ಶನವಿರುತ್ತದೋ ಅಲ್ಲಿಯ ತನಕ ಕೊರಗ ಶೆಟ್ಟರು ಮರೆಯಲಾಗದ ಮಹಾನುಭಾವರಾಗಿ ಉಳಿಯುತ್ತಾರೆ. ಯಕ್ಷಗಾನದಿಂದ ಕೊರಗ ಶೆಟ್ಟರಿಗೆ ಗೌರವ ಬಂತೋ ಅಥವಾ ಕೊರಗ ಶೆಟ್ಟರಿಂದಾಗಿ ಯಕ್ಷಗಾನಕ್ಕೆ ಗೌರವ ಬಂತೋ ಎಂದು ಪ್ರಶ್ನಿಸಿದರೆ ಎರಡೂ ಹೌದು ಎನ್ನುವುದೇ ಸರಿಯಾದ ಉತ್ತರವಾಗುತ್ತದೆ” – ಶ್ರೀ ಕುಂಬಳೆ ಸುಂದರ ರಾವ್
“ತೆಂಕಿನ ಯಕ್ಷಗಾನ ಕಲೆಯನ್ನೂ ಕಲಾವಿದರನ್ನೂ ಎತ್ತರಕ್ಕೇರಿಸಿದ ಯಜಮಾನ” – ಶ್ರೀ ಕೋಳ್ಯೂರು ರಾಮಚಂದ್ರ ರಾವ್
“ಕಲಾವಿದರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದ ಕಲ್ಲಾಡಿ ಕೊರಗ ಶೆಟ್ಟರ ಸಾಧನೆಯು ಯಕ್ಷಗಾನದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿಯು” – ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು
ಸಂಗ್ರಹ: ರವಿಶಂಕರ್ ವಳಕ್ಕುಂಜ