ಯಕ್ಷಗಾನದಲ್ಲಿ ಭಾಗವತನ ನಂತರದ ಸ್ಥಾನ ಹಾಸ್ಯಗಾರನಿಗೆ. ಬೆಳಗಿನವರೇಗೂ ಪ್ರಸಂಗವನ್ನು ಮುನ್ನಡೆಸಬಲ್ಲ ಚತುರತೆ ಅವನಿಗಿರಬೇಕು. ಎರಡನೇ ವೇಷಧಾರಿಯಾಗಿ ಚೌಕಿಗೆ ನಿರ್ದೇಶಕನಾಗಿ, ಸೇವಾಕರ್ತರಿಂದ ವೀಳ್ಯವನ್ನು ಪಡೆದು, ಪ್ರಸಂಗ ಮುಗಿಯುವ ತನಕವೂ ವ್ಯವಹರಿಸುತ್ತಾ ಕಾಣಿಸಿಕೊಳ್ಳುತ್ತಾನೆ.
ಪ್ರಸ್ತುತ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಠ ಅಭಿನಯಗಳಿಂದ, ತಮ್ಮದೇ ಕಲ್ಪನೆಯಿಂದ, ಪಾತ್ರಗಳಿಗೆ ಜೀವತುಂಬಿ ರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಲ್ಲೊಬ್ಬರು. ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿ.
ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ನೇ ಇಸವಿ ಎಪ್ರಿಲ್ 12ರಂದು ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಇವರು ಅಜ್ಜನ ಮನೆಯಲ್ಲೇ ಬೆಳೆದವರು.
ನಾರಂಪಾಡಿ ಫಾತಿಮಾ ಎ.ಎಲ್.ಪಿ. ಶಾಲೆಯಲ್ಲಿ ನಾಲ್ಕನೇ ತರಗತಿಯ ವರೇಗೆ ಓದಿದರು. ಇವರ ಚಿಕ್ಕಪ್ಪನಾದ ಅಪ್ಪಯ್ಯ ಮಣಿಯಾಣಿಯವರು ಆಗ ಮಾರ್ಪನಡ್ಕದಲ್ಲಿ ನಾಟ್ಯ ತರಗತಿಯನ್ನು ನಡೆಸುತ್ತಿದ್ದರು. (ಅಪ್ಪಯ್ಯ ಮಣಿಯಾಣಿಯವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ). ಅವರಿಂದ ಯಕ್ಷಗಾನ ನಾಟ್ಯ ಕಲಿತು ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.
ಮುಂದಿನ ಮಳೆಗಾಲ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರಕ್ಕೆ ಸೇರಿ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು. ಮುಂದಿನ 5 ವರುಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.(ಕಟೀಲು 2 ಮೇಳ ಇದ್ದ ಸಂದರ್ಭ). ಆಗ ಇರಾ ಗೋಪಾಲಕೃಷ್ಣ ಭಾಗವತರು ನೆಡ್ಲೆ ನರಸಿಂಹ ಭಟ್ಟರು, ಕೇದಗಡು ಗುಡ್ಡಪ್ಪ ಗೌಡ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟ, ಪೂರ್ವರಂಗದಲ್ಲಿ, ಪ್ರಸಂಗದಲ್ಲಿ ತನಗೆ ಬಂದ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತಾ, ಹಂತ ಹಂತವಾಗಿ ಬೆಳೆಯುತ್ತಾ ಮವ್ವಾರು ಬಾಲಕೃಷ್ಣ ಮಣಿಯಾಣಿ ಕಲಾವಿದನಾಗಿ ಕಾಣಿಸಿಕೊಂಡರು.
ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಆದಿಸುಬ್ರಹ್ಮಣ್ಯ ಮೇಳದಲ್ಲಿ 6 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಮೂರು ವರ್ಷ, ಶ್ರೀ ರಾಧಾಕೃಷ್ಣ ನಾವಡರು ಸಂಚಾಲಕರಾಗಿದ್ದ ಮಧೂರು ಮೇಳದಲ್ಲಿ 3 ವರ್ಷ, ಶ್ರೀ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿ ಮೇಳದಲ್ಲಿ 5 ವರ್ಷ, ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ನೇತೃತ್ವದ ಮಂಗಳಾದೇವಿ ಮೇಳದಲ್ಲಿ 7 ವರ್ಷಗಳ ಕಾಲ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಕಲಾಸೇವೆಯನ್ನು ಮಾಡಿದರು. 14 ವರುಷ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ. ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಕಟೀಲು ಮೇಳದಲ್ಲಿ ಪುರಾಣ ಪ್ರಸಂಗಗಳ ಜ್ಞಾನವನ್ನು ಪಡೆದಿದ್ದ ಇವರು ನಂತರ ಹೆಚ್ಚಾಗಿ ತುಳು ಪ್ರಸಂಗಗಳಲ್ಲೇ ಅಭಿನಯಿಸಿ ಪ್ರಸಿದ್ಧರಾದರು. ನಂತರ ಎಡನೀರು ಮೇಳದಲ್ಲಿ ತಿರುಗಾಟ ನಡೆಸಿದ್ದು ಪುರಾಣ ಪ್ರಸಂಗಗಳ ಜ್ಞಾನ ಪ್ರಸಂಗನಡೆಗಳನ್ನು ತಿಳಿಯಲು ಅನುಕೂಲವಾಯಿತು. ತಿರುಗಾಟ ನಡೆಸಿದ ಎಲ್ಲಾ ಮೇಳಗಳ ಸಂಚಾಲಕರ ಸಹಕಾರ ನನಗಿತ್ತು. ಹಿರಿಯ ಕಿರಿಯ ಸಹಕಲಾವಿದರೆಲ್ಲಾ ಸಹಕರಿಸಿದ್ದಾರೆ. ಪ್ರೀತಿಸಿದ್ದಾರೆ.
ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಆಶೀರ್ವದಿಸಿದ್ದಾರೆ. ಚಿಕ್ಕವನಿದ್ದಾಗ ಬಡತನವಿತ್ತು. ಹೊಟ್ಟೆಪಾಡಿಗಾಗಿ ಯಕ್ಷಗಾನಕ್ಕೆ ಸೇರಿದೆ. ಈಗ ಏನೂ ತೊಂದರೆಯಿಲ್ಲ. ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ. ಕಲಾಭಿಮಾನಿಗಳ ಹಾರೈಕೆಯೂ ಇದೆ. ಇನ್ನೇನು ಬೇಕು? ನಾನು ಸಂಪೂರ್ಣ ತೃಪ್ತ ಎಂದು ಹಾಸ್ಯಗಾರ ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಮನತುಂಬಿ ಹೇಳುತ್ತಾರೆ.
ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿಯವರಿಗೆ ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿಯ ಪಾತ್ರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಯಲ್ಲಿ ಎಡನೀರು ಮೇಳದಲ್ಲಿ ಅವರು ರಂಜಿಸಿದರು. ಪೂಕಳ ಲಕ್ಷ್ಮೀನಾರಾಯಣ ಭಟ್, ರವಿರಾಜ್ ಪನೆಯಾಲ ಅವರ ಕೈಲಾಸ ಶಾಸ್ತ್ರಿ ಅಲ್ಲದೆ ಮಳೆಗಾಲದಲ್ಲಿ ಖ್ಯಾತ ಹಾಸ್ಯಗಾರರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರ ಕೈಲಾಸ ಶಾಸ್ತ್ರಿ ಜತೆ ಮಣಿಯಾಣಿಯವರ ಕಾಶೀಮಾಣಿ ಪಾತ್ರ ರಂಜಿಸಿತ್ತು.
ಭಕ್ತ ಕುಚೇಲ ಪ್ರಸಂಗದ ಸುಧಾಮನ ಪಾತ್ರವೂ ಮವ್ವಾರು ಅವರಿಗೆ ಹೆಸರನ್ನು ತಂದುಕೊಟ್ಟಿತು. ಬೈರಾಗಿ, ವಿಜಯ, ದಾರುಕ, ಮಾಲಿನಿದೂತ ಮೊದಲಾದವು ಇವರಿಗೆ ಅತಿಪ್ರಿಯವಾದ ಪಾತ್ರಗಳು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ’ ತಂಡದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಭಾಗವಹಿಸಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ