ಯಕ್ಷಗಾನ ಒಂದು ಅಪೂರ್ವವಾದ ಪ್ರದರ್ಶನ ಕಲೆ. ಕರಾವಳಿಯಲ್ಲಿ ದೇವತಾರಾಧನೆಯ ರೂಪದಲ್ಲಿ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತದೆ. ಇದು ಪರಂಪರೆಯನ್ನು ಬೆಸೆಯುವ ಮಹತ್ವದ ಕಲೆಯಾಗಿ ಉಳಿದಿದೆ. ಬೊಂಡಾಲ ಕುಟುಂಬಿಕರು ತಲೆಮಾರುಗಳಿಂದ ಹರಕೆ ಬಯಲಾಟಗಳನ್ನು ಏರ್ಪಡಿಸುವ ಮೂಲಕ ಇದನ್ನು ಸತ್ಯವಾಗಿಸಿದ್ದಾರೆ’ ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ .
ಬಂಟ್ವಾಳ ತಾಲೂಕು ಶಂಭೂರಿನಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಎರಡು ದಿನಗಳ ಯಕ್ಷೋತ್ಸವದಲ್ಲಿ ದ್ವಿತೀಯ ದಿನ ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಕಟೀಲು ಮೇಳದಲ್ಲಿ 35 ವರ್ಷಗಳ ಕಲಾಸೇವೆ ಮಾಡಿದ ಶ್ರೀದೇವಿ ಪಾತ್ರಧಾರಿ ಬಾಯಾರಿನ ಸರವು ರಮೇಶ ಭಟ್ಟರಿಗೆ 2020 – 21 ನೇ ಸಾಲಿನ ‘ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸ್ಮಾರಕ ಯಕ್ಷಗಾನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಶಾಲು, ಸ್ಮರಣಿಕೆ, ಫಲತಟ್ಟೆ ಮತ್ತು ಗೌರವ ನಿಧಿಯನ್ನೊಳಗೊಂಡಿತ್ತು. ಕಲಾಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರು ಪ್ರತಿವಚನ ಹೇಳಿದರು.



ಬೊಂಡಾಲ ಸಂಸ್ಮರಣೆ : ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಕೀರ್ತಿಶೇಷ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಸ್ಮರಣಾ ಭಾಷಣ ಮಾಡಿ ಮಾತನಾಡುತ್ತಾ ‘ಊರಿನ ಪಟೇಲರಾಗಿ, ಆದರ್ಶ ಅಧ್ಯಾಪಕರಾಗಿ ಮತ್ತು ಪ್ರಗತಿಪರ ಕೃಷಿಕರಾಗಿ ಜನಾನುರಾಗಿಗಳಾಗಿದ್ದ ಬೊಂಡಾಲ ಜನಾರ್ದನಶೆಟ್ಟರು ಹಳೆಯ ತಲೆಮಾರಿನ ದಿಗ್ಗಜ ಅರ್ಥಧಾರಿಗಳೊಂದಿಗೆ ಸರಸ ಮಾತುಗಾರರಾಗಿ ಗುರುತಿಸಿಕೊಂಡಿದ್ದರು.
ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರು ಭೂಮಾಪನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸ್ವತ: ಯಕ್ಷಗಾನ ಕಲಾವಿದರಾಗಿ ಮತ್ತು ಸಂಘಟಕರಾಗಿ ಹೆಸರು ಪಡೆದಿದ್ದರು. ಇವರೀರ್ವರ ಸ್ಮರಣೆಗಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವವರಿಗಾಗಿಯೇ ವರ್ಷಂಪ್ರತಿ ನೀಡುತ್ತಿರುವ ಬೊಂಡಾಲ ಪ್ರಶಸ್ತಿ ವಿಶೇಷ ಮಹತ್ವ ಪಡೆದಿದೆ ‘ ಎಂದು ನುಡಿದರು.
ಶಂಭೂರಿನ ನಿವೃತ್ತ ಶಿಕ್ಷಕ ಎನ್. ಕೃಷ್ಣರಾಜ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ‘ನುಡಿನಮನ’ – ಕಾರ್ಯಕ್ರಮದಂದು ಮುಂಜಾನೆ ನಿಧನರಾದ ತೆಂಕುತಿಟ್ಟು ಯಕ್ಷರಂಗದ ಸಿಡಿಲಮರಿ, ಸುಪ್ರಸಿದ್ಧ ಪುಂಡು ವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು . ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿದರು.
ಇದರೊಂದಿಗೆ ಕಳೆದ ನಲವತ್ತೇಳು ವರ್ಷ ಎಡೆಬಿಡದೆ ಬೊಂಡಾಲ ಯಕ್ಷೋತ್ಸವದಲ್ಲಿ ದೇವಿಯ ಪೂಜಾವಿಧಿಗಳನ್ನು ನೆರವೇರಿಸುತ್ತಿದ್ದ ಮೇಳದ ಅರ್ಚಕ ಅನಂತರಾಮ ಭಟ್ ಕಾಂತಾವರ ಅವರ ನಿಧನಕ್ಕೂ ಸಂತಾಪ ಸೂಚಿಸಲಾಯಿತು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು . ಬೊಂಡಾಲ ದೇವಿಪ್ರಸಾದ ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಟೀಲು ಮೇಳದ ಕಲಾವಿದರಿಂದ ಮೊದಲ ದಿನ ಊರಿನ ಹತ್ತು ಸಮಸ್ತರ ಪರವಾಗಿ ‘ಸಮಗ್ರ ರಾವಣ’ ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ ಶ್ರೀದೇವಿ ಮಹಾತ್ಮೆ’ ಹರಿಕೆಯ ಬಯಲಾಟ ಜರಗಿತು.