Saturday, January 18, 2025
Homeಯಕ್ಷಗಾನ'ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ'ಯ ಸಮಾಜಮುಖಿ ಕಾರ್ಯಕ್ರಮಗಳು 

‘ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ’ಯ ಸಮಾಜಮುಖಿ ಕಾರ್ಯಕ್ರಮಗಳು 

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು 2004 ನವಂಬರ್ ತಿಂಗಳಿನಲ್ಲಿ ಆರಂಭವಾಯಿತು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ತಮ್ಮ ಜೀವನ ಶೈಲಿಯಿಂದ, ಸಾಮಾಜಿಕ ಚಿಂತನೆಗಳಿಂದ, ಸಮಕಾಲೀನ ವ್ಯಾವಹಾರಿಕ, ಧಾರ್ಮಿಕ,ಸಾಂಸ್ಕೃತಿಕ ಮತ್ತು ಆರ್ಥಿಕ  ಪ್ರಜ್ಞೆಗಳನ್ನು ಇರಿಸಿಕೊಂಡು ಬಾಳಿ ಬದುಕಿದವರು.

ಕೀಲಾರು ಮನೆತನದ ಶ್ರೀ ರಾಮಚಂದ್ರಯ್ಯ ಗಂಗಮ್ಮ ದಂಪತಿಗಳಿಗೆ ಪುತ್ರನಾಗಿ ಫೆಬ್ರವರಿ 24, 1934ರಲ್ಲಿ ಈ  ಲೋಕದ ಬೆಳಕನ್ನು ಕಂಡ ಶ್ರೀಯುತರು ವೈದ್ಯಕೀಯ ವಿದ್ಯೆಯನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ  ಸ್ವೀಕರಿಸದೆ ಸಮಾಜ  ಸೇವೆಯನ್ನೇ ಗುರಿಯಾಗಿ  ಸ್ವೀಕರಿಸಿ ನಿಶ್ಯುಲ್ಕವಾಗಿ ಔಷಧೋಪಚಾರಗಳನ್ನು ಮಾಡುತ್ತಿದ್ದರು. ತಮ್ಮ ಭೂಮಿಯ ಹಲವು ಭಾಗಗಳನ್ನು ಅಲ್ಲಿಯೇ ವಾಸಿಸುತ್ತಿದ್ದವರಿಗೆ ಕರುಣಾ ದೃಷ್ಟಿಯಿಂದ ಕಾಯಿದೆಯನ್ನೂ, ಸರಕಾರವನ್ನೂ ಗೌರವಿಸಿ ಬಿಟ್ಟುಕೊಟ್ಟರು.


ಶ್ರೀಯುತರು ಮಂಗಳೂರು ಹೋಬಳಿಯ ಪಂಜ ಸೀಮೆಯ  ಹವ್ಯಕ ಮುಖಂಡರೂ, ಧಾರ್ಮಿಕ ಮುಂದಾಳುವೂ ಆಗಿದ್ದರು. ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಪರಮ ಭಕ್ತರಾಗಿದ್ದ ಡಾ| ಕೀಲಾರು ಗೋಪಾಲ ಕೃಷ್ಣಯ್ಯನವರು ದೇವಳದ ಜೀರ್ಣೋದ್ಧಾರಾದಿ  ಸಕಲಕಾರ್ಯಗಳಲ್ಲೂ  ಸಕ್ರಿಯರಾಗಿದ್ದರು. ಶ್ರೀ

ಕ್ಷೇತ್ರದಲ್ಲಿ “ಕೀಲಾರು ಉಗ್ರಾಣ” ಎಂಬ ಉಗ್ರಾಣವೇ ಇದಕ್ಕೆ ಸಾಕ್ಷಿ. ಕಲ್ಲುಗುಂಡಿ ಮತ್ತು ಸಂಪಾಜೆ ಗ್ರಾಮಗಳ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದ  ಶ್ರೀಯುತರು ಸಮಾಜಮುಖಿಯಾಗಿಯೇ ಚಿಂತಿಸುತ್ತಾ ಸಮಾಜಮುಖಿಯಾಗಿಯೇ ಬಾಳುತ್ತಿದ್ದರು. ತೋಡಿಕಾನ ಕಲ್ಲುಗುಂಡಿ ಪರಿಸರದಲ್ಲಿ ಇರುವ ದೇವಾಲಯ, ಶಾಲೆಗಳಲ್ಲಿ ವಿವಿಧ ಉದ್ದೇಶಗಳನ್ನಿರಿಸಿ ಕೊಂಡು ವಾರ್ಷಿಕ ವಿನಿಯೋಗಕ್ಕಾಗಿ ಅನೇಕ ಶಾಶ್ವತ ನಿಧಿಗಳನ್ನು ಸ್ಥಾಪಿಸಿದರು.

ಸಾಂಸಾರಿಕವಾಗಿಯೂ ಸಂತೃಪ್ತ ಜೀವನ ನಡೆಸಿ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಇವರೊಂದಿಗೆ ಆದರ್ಶ ಗೃಹಸ್ಥ ಜೀವನವನ್ನು ನಡೆಸಿ, ಶ್ರೀ ರಾಜಾರಾಮ ಮತ್ತು ಸುಮನಾ ಗೌರಿ ಎಂಬ ಇಬ್ಬರು ಮಕ್ಕಳನ್ನು ಪಡೆದರು. ಜುಲೈ  3, 2004ರಂದು ಜೀವನವನ್ನು ಪರಿಸಮಾಪ್ತಿಗೊಳಿಸಿ ಅನಂತದಲ್ಲಿ ಲೀನವಾದರು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಅವರಿಗಾಗಿ ಬದುಕದೆ ಪರರಿಗಾಗಿ ಬದುಕಿದರು.

ಡಾ. ಕೀಲಾರು ಗೋಪಾಲ ಕೃಷ್ಣಯ್ಯನವರ ಜೀವನಾದರ್ಶಗಳನ್ನು, ಸಮಾಜಸೇವೆಯನ್ನು  ಮುಖ್ಯ ಉದ್ದೇಶವಾಗಿರಿಸಿಕೊಂಡು ಶ್ರೀಯುತರ ಉತ್ತರಾಧಿಕಾರಿಗಳು, ಬಂಧುಗಳು, ಅಭಿಮಾನಿಗಳು ಸೇರಿ ಚಿಂತನೆಯನ್ನು ನಡೆಸಿ  ರೂಪಿಸಿದ  ಸಂಸ್ಥೆಯೇ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. ಜಾತಿ, ಪಂಥ, ಮತರಹಿತವಾಗಿ ಸಮಾಜಸೇವೆಯನ್ನು ಮಾಡುವುದೇ ಈ ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ. 

ಸಮಾಜದ ಸ್ವಾಸ್ಥ್ಯವನ್ನು ಕಾಪಿಡುವಲ್ಲಿ ಆರೋಗ್ಯವು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಈ ಪ್ರತಿಷ್ಟಿತ ಪ್ರತಿಷ್ಠಾನವು ಅಶಕ್ತರಿಗೆ ನೆರವನ್ನೀಯುವುದರ   ಜೊತೆಗೆ ಸಾಧಕರನ್ನೂ  ವಿದ್ಯಾರ್ಥಿಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುತ್ತಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಸಂಪಾಜೆ ಯಕ್ಷೋತ್ಸವ, ವೈದಿಕರಿಗೆ ಅಭಿನಂದನೆ, ಕಲಾವಿದರಿಗೆ ಸನ್ಮಾನ, ಶೇಣಿ ಪ್ರಶಸ್ತಿ ಪ್ರಧಾನ, ಡಾ. ಕೀಲಾರು ಗೋಪಾಲಕೃಷ್ಣಯ್ಯ ಮತ್ತು ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮಗಳನ್ನು 2004ರಿಂದ ಈ ಸಂಸ್ಥೆಯು ಪ್ರತಿ ವರುಷ ನಡೆಸಿಕೊಂಡು ಬರುತ್ತಿದೆ.

ಯಕ್ಷಗಾನ  ಸಂಬಂಧೀ  ಕೃತಿ ಗಳಾದ ‘ಪಾರ್ತಿಸುಬ್ಬನ ಯಕ್ಷಗಾನ ಕೃತಿಗಳು’ (ಎರಡನೆಯ ಮುದ್ರಣ), ಯಕ್ಷೋಪಾಸನೆ (ಶ್ರೀ ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ), ಯಕ್ಷಪಾತ್ರ ದೀಪಿಕಾ ಮೊದಲಾದ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಮೆ ಈ ಪ್ರತಿಷ್ಠಾನಕ್ಕೆ ಸಲ್ಲುತ್ತದೆ. ಡಾ| ಕೀಲಾರು ಗೋಪಾಲಕೃಷ್ಣಯ್ಯನವರ ಸಮಾಜ ಸೇವೆಯನ್ನು ಪ್ರತಿಷ್ಠಾನವು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹವಾದುದು.

ಕಳೆದ ವರ್ಷ ಸಂಪಾಜೆ ಯಕ್ಷೋತ್ಸವ ತನ್ನ ರಜತ ಸಂಭ್ರಮವನ್ನು ವೈಭವದಿಂದ ಆಚರಿಸಿತು. ಮೂರು ರಂಗಸ್ಥಳಗಳು  ಏಕಕಾಲಕ್ಕೆ ‘ದೇವೀಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃತಿಗಳ ಬಿಡುಗಡೆ,  ಸಾಧಕರಿಗೆ ಸನ್ಮಾನ, ಕಲಾವಿದರಿಗೆ ಸನ್ಮಾನ  ನಡೆಯಿತು. ಯಕ್ಷೋತ್ಸವವನ್ನು ಆಸ್ವಾದಿಸಲು ಬಂದ ಜನರಿಗೂ ಉಚಿತ ಊಟ ಉಪಚಾರಗಳ ವ್ಯವಸ್ಥೆ ಅಭಿನಂದನಾರ್ಹ.

ಶ್ರೀ ಟಿ. ಶ್ಯಾಮ ಭಟ್


ಈ ಸಂಪಾಜೆ ಯಕ್ಷೋತ್ಸವದ ರೂವಾರಿ ಯಕ್ಷಗಾನವನ್ನೂ, ಕಲಾವಿದರನ್ನೂ ಅತಿಯಾಗಿ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ಟರು. ಇಂತಹಾ ಅದ್ದೂರಿಯ ಗೊಂದಲಗಳಿಲ್ಲದ, ಯಾರ ಮನಸ್ಸಿಗೂ ನೋವನ್ನುಂಟುಮಾಡದೆ, ಶಿಸ್ತುಬದ್ಧವಾದ, ಒಮ್ಮೆ ನೊಡಿದರೆ ಮತ್ತೆ ಬಂದು ನೋಡಬೇಕೆನಿಸುವ ಮಹಾನ್ ಪ್ರದರ್ಶನವನ್ನು(ಸಂಪಾಜೆ ಯಕ್ಷೋತ್ಸವ) ನಡೆಸುವುದು ಸುಲಭದ ಕೆಲಸವಲ್ಲ. ಯಕ್ಷಗಾನ ಕಲೆಯ ಮೇಲೆ ಅಭಿಮಾನ ಪ್ರೀತಿ ಆಳವಾಗಿರಬೇಕು.

ಸಾಹಸ ಬೇರೆ, ಸಾಮರ್ಥ್ಯ ಬೇರೆ. ಸಾಹಸಕ್ಕೂ ಸಾಮರ್ಥ್ಯಕ್ಕೂ ಅಂತರವಿದೆ. ಸಾಹಸವು ಸಾಮರ್ಥ್ಯವನ್ನು ಹೊರಗೆಡಹುವುದಕ್ಕೆ  ಸಾಧನ. ಶ್ರೀ ಟಿ. ಶ್ಯಾಮ ಭಟ್ಟರು ಸಾಹಸಿಗರು. ಅವರು ಸಾಹಸ ಪಟ್ಟಷ್ಟೂ ಸಾಮರ್ಥ್ಯವನ್ನು ಹೊರಗೆಡಹಬಲ್ಲರು. ಲೌಕಿಕವಾಗಿ ಒಬ್ಬನೇ ಆಗಿ ಕಂಡರೂ ಅವರ ಮನದೊಳಗೆ ಅನೇಕ ಯೋಚನೆ ಹಾಗೂ ಯೋಜನೆಗಳಿವೆ. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲೆಯನ್ನೂ ಕಲಾವಿದರನ್ನೂ, ಪ್ರೇಕ್ಷಕರನ್ನೂ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ ಅವರು ಅಭಿನಂದನಾರ್ಹರು

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments