ತೆಂಕುತಿಟ್ಟಿನ ಪುಂಡುವೇಷಕ್ಕೆತನ್ನಅಚ್ಚರಿಯ ಪ್ರತಿಭೆಯ ಮೂಲಕ ಛಾಪನ್ನು ಮೂಡಿಸಿದ, ಪುತ್ತೂರು ಶ್ರೀಧರ ಭಂಡಾರಿ (76ವರ್ಷ) ಇಂದು (19-02-2021) ದೈವಾಧೀನರಾದರು.
10ನೇ ವರ್ಷಕ್ಕೆ ವೃತ್ತಿಮೇಳ ಸೇರಿ ನಿರಂತರ 6 ದಶಕಗಳ ಕಾಲ ವೃತ್ತಿಕಲಾವಿದರಾಗಿ ಯಕ್ಷಲೋಕದಲ್ಲಿ ತನ್ನ ಚುರುಕಾದ ನೃತ್ಯದಿಂದ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಅಶ್ವತ್ಥಾಮ ಮುಂತಾದ ಪಾತ್ರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಕಲಾವಿದರಾಗಿದ್ದರು.
ಧರ್ಮಸ್ಥಳ ಮೇಳವೊಂದರಲ್ಲೇ 4 ದಶಕಗಳಿಗಿಂತಲೂ ಹೆಚ್ಚುಕಾಲ ವೇಷಧಾರಿಯಾಗಿ ಕಲಾ ಸೇವೆಗೈದ ಇವರು ಈ ಬಾರಿಯ ಧರ್ಮಸ್ಥಳದ ಸೇವೆಯಾಟದಲ್ಲಿ ಕೊನೆಯದಾಗಿ ಕೃಷ್ಣನ ವೇಷವನ್ನು ಸೊಗಸಾಗಿ ನಿರ್ವಹಿಸಿದ್ದರು.
ಪುತ್ತೂರು ಹಾಗೂ ಕಾಂತಾವರ ಮೇಳಗಳನ್ನು ಆರಂಭಿಸಿ ತಲಾ 3 ವರ್ಷಗಳ ಕಾಲ ಮೇಳವನ್ನು ಮುನ್ನಡೆಸಿದರು. ಮಳೆಗಾಲದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರದರ್ಶನ ನಡೆಸುತ್ತಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹೆಚ್ಚಿನ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಧರ ಭಂಡಾರಿಯವರಿಗೆ ಸಂಸ್ಥೆಯು ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.
ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಇವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.