ದಾಸವರೇಣ್ಯ ಶ್ರೀ ಪುರಂದರದಾಸರ ಕೀರ್ತನೆಗಳು ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದು ಎಡನೀರು ಶ್ರೀ ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ನುಡಿದರು.
ಪೂಜ್ಯ ಶ್ರೀಗಳವರು ದಿನಾಂಕ 11-02-2021 ನೇ ಗುರುವಾರದಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸರ ಆರಾಧನೋತ್ಸವದಲ್ಲಿ ಆಶೀರ್ವಚನ ನೀಡಿದರು. ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಧುಸೂದನ ಪುಣಿಂಚಿತ್ತಾಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಂದರದಾಸರ ಆರಾಧನೆಯನ್ನು ಆಸ್ತಿಕ ಶ್ರದ್ಧಾಳುಗಳ ಉಪಸ್ಥಿತಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಭಜನಾ ಗುರು, ಸಂಕೀರ್ತನಾ ಸಾಧಕರೂ ಆದ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರ ಕೆಲಸ ಕಾರ್ಯಗಳನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿದರು.









ಧಾರ್ಮಿಕ ಕ್ಷೇತ್ರದ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಬಳಿಕ ವೇದಿಕೆಯಲ್ಲಿ ಪೂಜ್ಯ ಶ್ರೀಗಳು ಬಂದ ಭಜಕರಿಗೆ ಭಗವದ್ಭಕ್ತ ಸಮೂಹಕ್ಕೆ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವಚನವನ್ನಿತ್ತರು.
13ನೇ ವರ್ಷದ ‘ಶ್ರೀ ಪುರಂದರದಾಸರ ಆರಾಧನಾ ಉತ್ಸವ’ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ‘ಶ್ರೀ ಮದ್ಭಾಗವತ ಸಪ್ತಾಹ’ದ ಶುಭ ಸಮಯದಲ್ಲಿ ಮೊದಲಿಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು.
ತದನಂತರ ಶ್ರೀ ಪುರಂದರ ದಾಸರ ವೇದಿಕೆಯ ಮುಂಭಾಗ ಪ್ರಧಾನ ಅರ್ಚಕರು, ವೇದಮೂರ್ತಿ ಬ್ರಹ್ಮ ಶ್ರೀ ರಾಮಭಟ್ ನೀರ್ಚಾಲು – ಕಾಟುಕುಕ್ಕೆ , ಭಜನಾ ಗುರುಗಳು, ಹಾಗೂ ಪ್ರಮುಖರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಾಸ ವೇದಿಕೆಯಲ್ಲಿ ನೂತನ ಭಜನಾ ಮಂಡಳಿ ಅವರಿಗೆ ದಾಸರ ಕೀರ್ತನೆಗಳನ್ನು ಹಾಡುವ ಅವಕಾಶ ಕಲ್ಪಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳಿಂದ ನೃತ್ಯ ಗುರು ಭಜನಾಕರ ಶ್ರೀ ರಮೇಶ್ ಕಲ್ಮಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು ದಾಸರ ಆರಾದನೆ ಹಾಗೂ ಶ್ರೀ ಮದ್ಭಾಗವತ ಪ್ರವಚನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಂತರ ಭಜನಾ ಗುರುಗಳಿಂದ ದಾಸ ಶ್ರೇಷ್ಠರ ಸಮೂಹ ಗಾಯನವೂ ನಡೆಯಿತು.
ಆ ನಂತರ ರಾಜ್ಯ ಮಟ್ಟದ ವಿಜೇತ ತಂಡ, ಕುಂದಾಪುರದ ಕುಣಿತ ಭಜನಾ ತಂಡದವರಿಂದ ಹೊಸಬಗೆಯ ಕುಣಿತ ಭಜನೆಯ ಪ್ರಾತ್ಯಕ್ಷಿಕೆಯನ್ನು ಕಣ್ತುಂಬಿಕೊಂಡೆವು. ಭೋಜನದ ವಿರಾಮದ ನಂತರ ವೇದಮೂರ್ತಿ ಬ್ರಹ್ಮ ಶ್ರೀ ರಾಮ ಭಟ್ಟ ಅವರಿಂದ ಭಾಗವತ ಪಾರಾಯಣ ಪ್ರವಚನದ ಕೊನೆಯ ದಿನದ ಪ್ರವಚನ ನಡೆಯಿತು.