ಊರಿನ ಪಟೇಲರಾಗಿ, ಜನಪ್ರಿಯ ಶಿಕ್ಷಕರಾಗಿ ಹಾಗೂ ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿಯಾಗಿ ಪ್ರಸಿದ್ಧರಾದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ಹಿರಿಯ ಅರ್ಥಧಾರಿ, ನಿವೃತ್ತ ಭೂಮಾಪನ ಅಧಿಕಾರಿ ದಿ. ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಹೆಸರಾಂತ ವೇಷಧಾರಿ ರಮೇಶ ಭಟ್ ಬಾಯಾರು ಆಯ್ಕೆಯಾಗಿದ್ದಾರೆ.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗಾಗಿ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ನೀಡುತ್ತಿರುವ ಈ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2020-21ನೇ ಸಾಲಿನಲ್ಲಿ ರಮೇಶ ಭಟ್ಟರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ಶಾಲು, ಸ್ಮರಣಿಕೆ ಮತ್ತು ಗೌರವ ನಿಧಿಯನ್ನೊಳಗೊಂಡಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ರಮೇಶ್ ಭಟ್ ಬಾಯಾರು: ಕಾಸರಗೋಡು ಬಾಯಾರು ಗ್ರಾಮದ ಸರವು ನಾರಾಯಣ ಭಟ್ಟ ಮತ್ತು ಪಾರ್ವತಿ ಅಮ್ಮ ದಂಪತಿಗೆ 1967 ನವೆಂಬರ್ 17 ರಂದು ಜನಿಸಿದ ರಮೇಶ್ ಭಟ್ ಹತ್ತನೇ ತರಗತಿವರೆಗೆ ಕಲಿತು ಬಳಿಕ ಯಕ್ಷಗಾನ ರಂಗವನ್ನು ಪ್ರವೇಶಿಸಿದರು. ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ ಮಾಡಿ 1984 ರಲ್ಲಿ ಕುಂಬಳೆ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರ ನಿರ್ದೇಶನದಂತೆ 1985 ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೇರಿಕೊಂಡ ಅವರು ಕಳೆದ 35 ವರ್ಷಗಳಿಂದ ಅದೇ ಮೇಳದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ‘ದೇವಿಮಹಾತ್ಮೆ’ ಯ ಶ್ರೀದೇವಿ ಪಾತ್ರಕ್ಕೆ ಅವರು ಪ್ರಸಿದ್ಧರು.
ಬಹುತೇಕ ಪೌರಾಣಿಕ ಪ್ರಸಂಗಗಳಲ್ಲೇ ಪಾತ್ರ ನಿರ್ವಹಿಸುತ್ತಿರುವ ರಮೇಶ್ ಭಟ್ಟರ ಸೀತೆ, ದಮಯಂತಿ, ಕಯಾದು, ಮೋಹಿನಿ, ದ್ರೌಪದಿ, ಮೀನಾಕ್ಷಿ, ಶಶಿಪ್ರಭೆ, ಯಶೋಮತಿ ಮೊದಲಾದ ಸ್ತ್ರೀಭೂಮಿಕೆಗಳು ಜನಪ್ರಿಯ. ರಕ್ತಬೀಜ, ಅರುಣಾಸುರ, ಹಿರಣ್ಯಕಶಿಪು ಮೊದಲಾದ ದೈತ್ಯ ಪಾತ್ರಗಳಲ್ಲೂ ಅವರು ಪರಿಣತರು. ಮೇಳದ ತಿರುಗಾಟವಲ್ಲದೆ ಮುಂಬಯಿ, ಚೆನ್ನೈ, ಹೈದರಾಬಾದ್, ಸಿಂಗಾಪುರಗಳಲ್ಲೂ ಕಾರ್ಯಕ್ರಮ ನೀಡಿದ ಅನುಭವ ಅವರಿಗಿದೆ. ವೃತ್ತಿಪರ ಯಕ್ಷಗಾನ ಕಲಾವಿದರಾಗಿ ಸರಿಸುಮಾರು ಮೂರೂವರೆ ದಶಕಗಳ ಅನುಭವ ಹೊಂದಿರುವ ಬಾಯಾರು ರಮೇಶ ಭಟ್ಟರು ಪತ್ನಿ ಗೀತಾ ಮತ್ತು ಪುತ್ರ ಶ್ರೀರಾಮರೊಂದಿಗೆ ಬಾಯಾರು ಗ್ರಾಮದ ಸರವು ಎಂಬಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಫೆ.19 ಕ್ಕೆ ಪ್ರಶಸ್ತಿ ಪ್ರದಾನ: ಫೆಬ್ರವರಿ 18 , 2021ರಂದು ರಾತ್ರಿ ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಸ್ಥಳೀಯ ಹತ್ತು ಸಮಸ್ತರ ವತಿಯಿಂದ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ‘ಸಮಗ್ರ ರಾವಣ’ ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ. ಈ ಸಂದರ್ಭ ದಿನಾಂಕ 19 ರಂದು ಶುಕ್ರವಾರ ಏರ್ಪಡಿಸಲಾದ ‘ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭ’ ದಲ್ಲಿ ಕಟೀಲು ಕ್ಷೇತ್ರದ ಅರ್ಚಕರು ಮತ್ತು ವಿವಿಧ ಗಣ್ಯರು ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು. ಕಟೀಲು ಮೇಳದ ರಂಗಸ್ಥಳದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಲಾವಿದ ರಮೇಶ್ ಭಟ್ಟರಿಗೆ ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮತ್ತು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.