Saturday, January 18, 2025
Homeಯಕ್ಷಗಾನಮೋಹಕ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಶ್ರೀ ಭಾಸ್ಕರ ಜೋಷಿ ಶಿರಳಗಿ

ಮೋಹಕ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಶ್ರೀ ಭಾಸ್ಕರ ಜೋಷಿ ಶಿರಳಗಿ

ಯಕ್ಷಗಾನದಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಮೊದಲಿನಿಂದಲೂ ನಡೆದು ಬಂದ ರೀತಿ. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದಂತೂ ಸತ್ಯ. ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ಹೆಣ್ಣಾಗಿ ಹುಟ್ಟಿ ಗಂಡಾಗಿ ಅಭಿನಯಿಸುವುದೂ ಕಷ್ಟದ ಕೆಲಸ. ಸತತ ಸಾಧನೆಯಿಂದ ಮಾತ್ರ ಇದು ಸಾಧ್ಯ. ಹೀಗೆ ಅವಿರತ ಪರಿಶ್ರಮದಿಂದ ಶ್ರೇಷ್ಠ ಸ್ತ್ರೀಪಾತ್ರಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಗಳಿಸಿದವರನೇಕರು. ಅಂತವರಲ್ಲೋರ್ವರು ಶಿರಳಗಿ ಶ್ರೀ ಭಾಸ್ಕರ ಜೋಷಿ. ಬಡುಗುತಿಟ್ಟು ಯಕ್ಷಾಗಸದಲ್ಲಿ ಮನಮೋಹಕ ತಾರೆಯಾಗಿ ಮಿನುಗಿದವರು. ದೈವದತ್ತವಾದ ರೂಪ, ಸತತ ಅಧ್ಯಯನದಿಂದ ಸಿದ್ಧಿಸಿದ ಮಾತುಗಾರಿಕೆ, ಅಭಿನಯ ಚಾತುರ್ಯಗಳಿಂದ ಬಡಗಿನ ಯಕ್ಷಬೆಡಗಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ ಕಲಾವಿದರಿವರು.

ಪದ್ಮಶ್ರೀ ಪ್ರಶಸ್ತಿ ವಿಜೇತ ಬಡಗುತಿಟ್ಟಿನ ಮೇರುಕಲಾವಿದ ಚಿಟ್ಟಾಣಿಯವರ ಪುರುಷಪಾತ್ರಗಳಿಗೆ, ಸ್ತ್ರೀಪಾತ್ರಧಾರಿಯಾಗಿ ಸುಮಾರು 15 ವರ್ಷಗಳ ಕಾಲ ಅಭಿನಯಿಸಿದ ಕೀರ್ತಿ ಶಿರಳಗಿ ಭಾಸ್ಕರ ಜೋಷಿಯವರಿಗಿದೆ. ಕಲಾಬದುಕಿನುದ್ದಕ್ಕೂ ಬಡಗುತಿಟ್ಟಿನ ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರೊಂದಿಗೆ ಪಾತ್ರಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು. ಮೋಹಿನಿ, ಮೇನಕೆ, ದಾಕ್ಷಾಯಿಣಿ, ಚಂದ್ರಮತಿ, ದಮಯಂತಿ, ಸುಭದ್ರೆ, ನಾಗಶ್ರೀ, ಚಿತ್ರಾವತಿ, ಸೈರಂಧ್ರಿ, ರುಚಿಮತಿ, ಚಿತ್ರಾಂಗದೆ, ವಿಷಯೆ, ಶಾರದೆ ಮೊದಲಾದ ಪಾತ್ರಗಳನ್ನು ಶಿರಳಗಿ ಭಾಸ್ಕರ ಜೋಷಿಯವರು ಜನಮೆಚ್ಚುವಂತೆ ಚಿತ್ರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಶಿರಳಗಿ, ಭಾಸ್ಕರ ಜೋಷಿಯವರ ಹುಟ್ಟೂರು. 1956ನೇ ಇಸವಿ ಎಪ್ರಿಲ್ 30ರಂದು ಜನನ. ತಂದೆ ಶ್ರೀ ನಾರಾಯಣ ಜೋಷಿ, ತಾಯಿ ಶ್ರೀಮತಿ ಗಂಗಾ ನಾರಾಯಣ ಜೋಷಿ. ನಾರಾಯಣ ಜೋಷಿ, ಗಂಗಾ ದಂಪತಿಗಳ ಆರು ಮಂದಿ ಮಕ್ಕಳಲ್ಲಿ (4 ಹೆಣ್ಣು ಮತ್ತು 2 ಗಂಡು) ಭಾಸ್ಕರ ಜೋಷಿ ಅವರು ಹಿರಿಯರು. ಇವರದ್ದು ಪೌರೋಹಿತ್ಯ ಮನೆತನ. ನಾರಾಯಣ ಜೋಷಿಯವರು ಪುರೋಹಿತರಾಗಿದ್ದು ಕೃಷಿ ಚಟುವಟಿಕೆಗಳಲ್ಲೂ ಆಸಕ್ತರಾಗಿದ್ದರು. ಭಾಸ್ಕರ ಜೋಷಿಯವರು 7ನೇ ತರಗತಿ ವರೇಗೆ ಶಿರಳಗಿ ಶಾಲೆಯಲ್ಲೂ, 10ನೇ ತರಗತಿ ವರೇಗೆ ಸಿದ್ಧಾಪುರ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲೂ ಓದಿದ್ದರು. ಕುಟುಂಬದಲ್ಲಿ ಚಿಕ್ಕಪ್ಪನಾದ ಶಿವಾನಂದ ಹೆಗಡೆಯವರು ಯಕ್ಷಗಾನ ಕಲಾವಿದರಾಗಿದ್ದರು. ಹಳ್ಳಿಪ್ರದೇಶ. ಮನೋರಂಜನೆಗೆ ಯಕ್ಷಗಾನದ ಹೊರತಾಗಿ ಬೇರೆ ಮಾಧ್ಯಮಗಳಿಲ್ಲದ ಕಾಲ ಅದು. ಜೋಷಿಯವರಿಗೆ ಎಳವೆಯಲ್ಲೇ ಯಕ್ಷಗಾನ ಎಂದರೆ ಬಲುಪ್ರೀತಿ.

ಕೊಳಗಿ ಎಂಬುದು ಶಿರಳಗಿಯ ಹತ್ತಿರದ ಊರು. ಖ್ಯಾತ ಕಲಾವಿದರಾದ ಕೊಳಗಿ ಅನಂತ ಹೆಗಡೆಯವರು ಮತ್ತು ಗೋಡೆ ನಾರಾಯಣ ಹೆಗಡೆಯವರ ನೇತೃತ್ವದಲ್ಲಿ ಕೊಳಗಿ ಮೇಳದ ಪ್ರದರ್ಶನಗಳು ನಡೆಯುತ್ತಿತ್ತು. ಕೊಳಗಿ ಲಕ್ಷ್ಮೀನರಸಿಂಗ ದೇವರ ಹೆಸರಿನ ಮೇಳ ಅದು. ಭಾಸ್ಕರ ಜೋಷಿಯವರು ಪರಿಸರದಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿ ಅಭಿನಯಿಸಿದ್ದರು. 10ನೇ ಕ್ಲಾಸ್ ಕಳೆದ ನಂತರ ಓದಿಗೆ ವಿದಾಯ ಹೇಳಿದ್ದರು. ನೆರೆಮನೆಯ ಹುಡುಗನಾದ ಭಾಸ್ಕರ ಜೋಷಿ ಅವರಲ್ಲಿರುವ ಕಲಾಸಕ್ತಿಯನ್ನು ಹುಲೀಮನೆ ಸೀತಾರಾಮ ಶಾಸ್ತ್ರಿಗಳು ಗಮನಿಸಿದ್ದರು. ಅವರು ನಾಟಕ ಕ್ಷೇತ್ರದ ಅಪ್ರತಿಮ ಸಾಧಕರು. ಪೌರಾಣಿಕ ನಾಟಕ ಕಲಾವಿದರೂ, ನಿರ್ದೇಶಕರೂ, ನಾಟಕ ತಂಡದ ನಾಯಕರೂ ಆಗಿದ್ದರು.

ಭಾಸ್ಕರ ಜೋಷಿ ಅವರ ಮನಮೋಹಕವಾದ ರೂಪವು ಕಲಾವಿದನಾಗಿ ಅವಕಾಶಗಳು ತಾನಾಗಿ ಒಲಿದು ಬರಲು ಕಾರಣವಾಗಿತ್ತು. ಸೀತಾರಾಮ ಶಾಸ್ತ್ರಿಗಳು ತಮ್ಮ ತಂಡದ ಐತಿಹಾಸಿಕ ನಾಟಕ ‘ಪನ್ನಾದಾಸಿ’ಯಲ್ಲಿ ಕಥಾನಾಯಕಿ ‘ಪನ್ನಾ’ ಪಾತ್ರವನ್ನೇ ನೀಡಿದ್ದರು. ರೂಪ ಮತ್ತು ಸ್ವಯಂ ಪ್ರತಿಭೆಯಿಂದಲೇ ಅಭಿನಯಿಸಿ ‘ಪನ್ನಾ’ ಪಾತ್ರವು ಮೆರೆಯುವಂತೆ ಮಾಡಿದ್ದರು ಜೋಷಿಯವರು. ಎಂ.ಜಿ.ಸಿ. ಕಾಲೇಜಿನ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ಹೊಸ್ತೋಟ ಮಂಜುನಾಥ ಭಾಗವತರು ಆಗ ತರಬೇತಿಯನ್ನು ನೀಡುತ್ತಿದ್ದರು. ಸ್ತ್ರೀಪಾತ್ರಗಳನ್ನು ನಿರ್ವಹಿಸಲು ಆಗ ಕಲಾವಿದರ ಕೊರತೆ ಇತ್ತು. ಭಾಸ್ಕರ ಜೋಷಿಯವರಿಗೆ ಕರೆಬಂದಿತ್ತು. ಹೀಗೆ ಹೊಸ್ತೋಟ ಮಂಜುನಾಥ ಭಾಗವತರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯುವ ಅವಕಾಶವು ಬಂದಿತ್ತು. ಡಿ. ಜಿ. ಹೆಗಡೆ ಮತ್ತಿಗಾರು ಅವರೂ ಹೊಸ್ತೋಟದವರ ಜತೆ ತರಬೇತಿ ನೀಡುತ್ತಿದ್ದರು.

ಸುಧನ್ವಾರ್ಜುನ ಪ್ರಸಂಗದ ಪ್ರಭಾವತಿಯಾಗಿ ಭಾಸ್ಕರ ಜೋಷಿಯವರು ಮೊತ್ತಮೊದಲು ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಅದೇ ವರುಷ ಇಡಗುಂಜಿ ಮೇಳದವರು ಸ್ತ್ರೀಪಾತ್ರಧಾರಿಗಳ ಅನ್ವೇಷಣೆಯಲ್ಲಿದ್ದರು. ಪನ್ನಾದಾಸಿ ನಾಟಕದ ಪನ್ನಾ ಪಾತ್ರದಲ್ಲಿ ಭಾಸ್ಕರ ಜೋಷಿ ಅವರ ಅಭಿನಯವನ್ನು ಕೆರೆಮನೆ ಗಜಾನನ ಹೆಗಡೆಯವರು ನೋಡಿ ಮೆಚ್ಚಿಕೊಂಡಿದ್ದರು. ಆ ಕಾರಣದಿಂದಲೇ ಇಡಗುಂಜಿ ಮೇಳಕ್ಕೆ ಕರೆಬಂದಿತ್ತು. ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಕೊಳಗಿ ಅನಂತ ಹೆಗಡೆ, ಗೋಡೆ ನಾರಾಯಣ ಹೆಗಡೆಯವರ ಕೇಳಿಕೆಯ ಮೇರೆಗೆ ಮನೆಯವರ ಸಮ್ಮತಿ ಸಿಕ್ಕಿತ್ತು. 1973ರಲ್ಲಿ ಕೆರೆಮನೆ ಇಡಗುಂಜಿ ಮೇಳಕ್ಕೆ ಸೇರಿದ್ದರು. ಗಜಾನನ ಹೆಗಡೆಯವರು ಸ್ತ್ರೀವೇಷ ಅಲ್ಲದೆ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಜೋಷಿಯವರು ಮುಖ್ಯ ಸ್ತ್ರೀವೇಷಗಳನ್ನೂ ಮಾಡಲಾರಂಭಿಸಿದ್ದರು.

ರಂಗದ ಅಳುಕು ಇವರಿಗಿರಲಿಲ್ಲ. ಸಾಹಿತ್ಯ ಆಸಕ್ತಿಯೂ ಇದ್ದಿತ್ತು. ನೆರೆಮನೆಯವರೆಲ್ಲ ಪುಸ್ತಕಗಳನ್ನು ಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ಓದುತ್ತಿದ್ದರು. ನಿದ್ದೆ ಮಾಡದೆ ಆಟ ವೀಕ್ಷಣೆ. ಗಜಾನನ ಹೆಗಡೆಯವರ ನಿರ್ದೇಶನ. ನೆಬ್ಬೂರು, ಕಪ್ಪೆಕೆರೆ ಸುಬ್ರಾಯ ಭಾಗವತರ ನಿರ್ದೇಶನ ಸಹಕಾರ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭುಹೆಗಡೆ, ಗಜಾನನ ಹೆಗಡೆ, ಹಳದೀಪುರ ಗಜಾನನ ಭಂಡಾರಿ ಮೊದಲಾದವರ ಒಡನಾಟ, ಸಹಕಾರವೂ ಸಿಕ್ಕಿತ್ತು. ಭಾಸ್ಕರ ಜೋಷಿಯವರು ಕಲಾವಿದನಾಗಿ ಕ್ಷಿಪ್ರ ಬೆಳವಣಿಗೆಯನ್ನೇ ಕಂಡಿದ್ದರು. ಕೋಟದಲ್ಲಿ ನಡೆದ ಪ್ರದರ್ಶನವನ್ನು ನೋಡಿ ಕೋಟ ಶಿವರಾಮ ಕಾರಂತರೂ ಜೋಷಿಯವರ ಪಾತ್ರನಿರ್ವಹಣೆಯನ್ನು ಮೆಚ್ಚಿಕೊಂಡಿದ್ದರು. ಶಿವರಾಮ ಕಾರಂತರ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕಲಿಕಾ ಕೇಂದ್ರವು ‘ಯಕ್ಷರಂಗ’ದ ಅಡಿ ಯಕ್ಷಗಾನ ಬ್ಯಾಲೆ ಕಾರ್ಯಕ್ರಮಗಳನ್ನು ನೀಡುತ್ತಿತ್ತು.

ಕಾರಂತರಿಂದ ಕರೆಯೂ ಬಂದಿತ್ತು. ಈ ತಂಡದ ಮುಖ್ಯ ಸ್ತ್ರೀವೇಷಧಾರಿಯಾಗಿ ಭಾರತದಾದ್ಯಂತ ನಡೆದ ಯಕ್ಷಗಾನ ಬ್ಯಾಲೆ ಪ್ರದರ್ಶನಗಳಲ್ಲಿ ಜೋಷಿಯವರು ಭಾಗವಹಿಸಿದ್ದರು. ಅಂಬೆ, ಚಿತ್ರಾಂಗದೆ, ಕನಕಾಂಗೀ ಕಲ್ಯಾಣ ಪ್ರಸಂಗದ ಸುಭದ್ರೆ ಮೊದಲಾದ ಪಾತ್ರಗಳನ್ನು ಈ ತಂಡದಲ್ಲಿ ನಿರ್ವಹಿಸಿದ್ದರು. ಅಭಿನಯ ಚಾತುರ್ಯವು ಸಿದ್ಧಿಸಿದ್ದು ಕಾರಂತರ ನಿರ್ದೇಶನದಲ್ಲಿ ಎಂದು ಜೋಷಿಯವರು ಸದಾ ಹೇಳುತ್ತಾರೆ. ಈ ತಂಡದ ಕಲಾವಿದನಾಗಿ ಜಪಾನ್, ರಷ್ಯಾ, ಇಟೆಲಿ, ಬಲ್ಗೇರಿಯಾ, ಹಂಗೇರಿ, ಬ್ಯಾಂಕಾಕ್, ಸಿಂಗಾಪುರ ಮೊದಲಾದ ದೇಶಗಳಲ್ಲೂ ಕಲಾಪ್ರದರ್ಶನವನ್ನು ನೀಡಿದ್ದರು. ಆರು ವರ್ಷಗಳ ಕಾಲ ಈ ತಂಡದ ಸದಸ್ಯನಾಗಿ ದೇಶ ವಿದೇಶಗಳನ್ನು ಸುತ್ತುವ ಸದವಕಾಶಗಳು ಸಿಕ್ಕಿತ್ತು.

ಇಡಗುಂಜಿ ಮೇಳದ ತಿರುಗಾಟದ ಬಳಿಕ ಭಾಸ್ಕರ ಜೋಷಿಯವರು ವ್ಯವಸಾಯ ಮಾಡಿದ್ದು ಸಾಲಿಗ್ರಾಮ ಮೇಳದಲ್ಲಿ. ಅದೇ ವರ್ಷ ಜಿ. ಆರ್. ಕಾಳಿಂಗ ನಾವಡರೂ ಸಾಲಿಗ್ರಾಮ ಮೇಳಕ್ಕೆ ಸೇರಿದ್ದರು. ಅದೇ ವರ್ಷ ಅವರ ಭಾಗವತಿಕೆಯಲ್ಲಿ ನಾಗಶ್ರೀ ಪ್ರಸಂಗವೂ ಜೋಷಿ ಅವರ ನಾಗಶ್ರೀ ಪಾತ್ರವೂ ರಂಜಿಸಿತ್ತು. ಮುಂದಿನ ವರುಷ ಚೆಲುವೆ ಚಿತ್ರಾವತಿ ಪ್ರಸಂಗದ ಚಿತ್ರಾವತಿ ಪಾತ್ರವೂ ಸಾಕಷ್ಟು ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಪುರಾಣ ಪ್ರಸಂಗಗಳೂ ನಡೆಯುತ್ತಿದ್ದುದು ಅನುಕೂಲವೇ ಆಗಿತ್ತು. “ನಾರ್ಣಪ್ಪ ಉಪ್ಪೂರರಂತೆ ಜಿ. ಆರ್. ಕಾಳಿಂಗ ನಾವಡರೂ ಸಾಹಸಿಯಾಗಿದ್ದರು. ಸೂಕ್ಷ್ಮಭಾವಗಳನ್ನು ಅರ್ಥೈಸಿ ಹಾಡುತ್ತಿದ್ದರು. ಇದು ವೇಷಧಾರಿಯ ಭಾವಪ್ರಕಟಣೆಗೆ ಅನುಕೂಲವಾಗಿರುತ್ತಿತ್ತು. ಅವರ ಭಾಗವತಿಕೆಯಲ್ಲಿ ನಾನು ನಿರ್ವಹಿಸಿದ ಪಾತ್ರಗಳು ರಂಜಿಸಿತು” ಕಾಳಿಂಗ ನಾವಡರ ಬಗೆಗೆ ಜೋಷಿಯವರ ಅಭಿಪ್ರಾಯವಿದು. ಅವರ ಭಾಗವತಿಕೆಯಲ್ಲಿ ಚಂದ್ರಹಾಸ ಪ್ರಸಂಗದ ವಿಷಯೆ ಪಾತ್ರವೂ ಜೋಷಿ ಅವರಿಗೆ ಹೆಸರನ್ನು ಕೊಟ್ಟಿತ್ತು.

4 ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಕಟ್ಟಾ ಶ್ರೀನಿವಾಸ ಆಚಾರ್ಯ, ಶಂಕರ ಭಾಗವತ ಯಲ್ಲಾಪುರ, ಜಲವಳ್ಳಿ, ಬಳ್ಕೂರು ಕೃಷ್ಣಯಾಜಿ, ಅರಾಟೆ ಮಂಜುನಾಥ, ರಾಮನಾೈರಿ, ಮುಖ್ಯಪ್ರಾಣ ಕಿನ್ನಿಗೋಳಿ, ತೀರ್ಥಹಳ್ಳಿ ಗೋಪಾಲಾಚಾರಿ ಮೊದಲಾದವರು ಸಾಲಿಗ್ರಾಮ ಮೇಳದ ಒಡನಾಡಿಗಳಾಗಿದ್ದರು. ಬಳಿಕ 4 ವರ್ಷಗಳ ತಿರುಗಾಟ ಅಮೃತೇಶ್ವರೀ ಮೇಳದಲ್ಲಿ. ಉಪ್ಪೂರರ ಭಾಗವತಿಕೆ. ದುರ್ಗಪ್ಪ ಗುಡಿಗಾರ, ಹೊಳೆಗದ್ದೆ ಗಜಾನನ ಭಂಡಾರಿ, ಕೊಳಗಿ ಅನಂತ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಲ್ಕೋಡು ಗಣಪತಿ ಹೆಗಡೆ, ನಗರ ಜಗನ್ನಾಥ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದರು. ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಅಮೃತೇಶ್ವರೀ ಮೇಳದಲ್ಲಿ ಜೋಷಿಯವರದು ಅಮೋಘ ನಿರ್ವಹಣೆ. ಈ ಸಂದರ್ಭದಲ್ಲಿ ಚಿಟ್ಟಾಣಿ ಮತ್ತು ಭಾಸ್ಕರ ಜೋಷಿ ಜೋಡಿಯು ಪ್ರೇಕ್ಷಕರ ಮನಸೂರೆಗೊಂಡಿತ್ತು.

ಮಳೆಗಾಲದ ಪ್ರದರ್ಶನಗಳಲ್ಲಿ ಬಡಗಿನ ಹೆಚ್ಚಿನ ಕಲಾವಿದರ ಜತೆ ವೇಷ ಮಾಡುವ ಸಂದರ್ಭಗಳೂ ಸಿಕ್ಕಿತ್ತು. “ಪ್ರತಿಯೊಂದು ಪಾತ್ರಗಳನ್ನು ಬೇರೆ ಬೇರೆ ಕೋನಗಳಿಂದ ನೋಡಬೇಕು ಮತ್ತು ವಿಮರ್ಶಿಸಬೇಕು. ಆಗ ಹೊಸ ಹೊಳಹುಗಳು ಹುಟ್ಟಿಕೊಳ್ಳುತ್ತದೆ”. ಇದು ಜೋಷಿಯವರಿಗೆ ಕೆರೆಮನೆ ಮಹಾಬಲ ಹೆಗಡೆಯವರಿಂದ ಸಿಕ್ಕಿದ ಪಾಠ. ಪಾತ್ರನಿರ್ವಹಣೆಗೆ ಇದು ಅನುಕೂಲವಾಗಿತ್ತು. ಇವರ ಪಾತ್ರನಿರ್ವಹಣೆಯನ್ನು ತೆಂಕಿನ ಖ್ಯಾತ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ಟರೂ ಮೆಚ್ಚಿ ಪ್ರಶಂಸಿಸಿದ್ದರು. ಸಿಟ್ಟು ಬಂದಾಗ ಗಯ್ಯಾಳಿ ಹೆಂಗುಸು ಇಡೀ ಸೆರಗನ್ನು ಸುತ್ತಿ ಎಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ. ಗರತಿ ಹೆಣ್ಣು ಸೆರಗಿನ ಒಂದು ತುದಿಯನ್ನು ಮಾತ್ರ ಸೆಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ ಎಂಬ ಸೂಕ್ಷ್ಮವನ್ನೂ ಪಾತಾಳದವರು ಜೋಷಿಯವರಿಗೆ ತಿಳಿಸಿದ್ದರಂತೆ. ಕೇವಲ ಒಂದು ಕ್ರಿಯೆಯಲ್ಲಿ ಪಾತ್ರದ ಸ್ವಭಾವವನ್ನು ತಿಳಿಸುವ ಕಲೆಯನ್ನು ಕರಗತ ಮಾಡಿದ್ದ ಪಾತಾಳದವರ ಚಾತುರ್ಯಕ್ಕೆ ಜೋಷಿ ಅವರು ಮನಸೋತಿದ್ದರು.

ಅಮೃತೇಶ್ವರೀ ಮೇಳದ ಬಳಿಕ ಮತ್ತೆ ಸಾಲಿಗ್ರಾಮ ಮೇಳದ 2 ವರ್ಷ ತಿರುಗಾಟ. ಕಾಳಿಂಗ ನಾವಡ ಮತ್ತು ನೆಲ್ಲೂರು ಮರಿಯಪ್ಪ ಆಚಾರ್ಯರ ಭಾಗವತಿಕೆ. 2 ವರ್ಷ ಬಚ್ಚಗಾರು ಮೇಳದಲ್ಲಿ. ಪುನಃ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ 3 ವರ್ಷ. ಶಿರಸಿ ಮಾರಿಕಾಂಬ ಮೇಳದಲ್ಲಿ 3 ವರ್ಷ. ಕೆರೆಮನೆ ಶಂಭು ಹೆಗಡೆಯವರ ಕಾಲಮಿತಿ ಪ್ರದರ್ಶನ ಗಳಲ್ಲಿ 2 ವರ್ಷ. 3 ವರ್ಷ ಪೆರ್ಡೂರು ಮೇಳದ ತಿರುಗಾಟ. ಸುಬ್ರಹ್ಮಣ್ಯ ಧಾರೇಶ್ವರ ಭಾಗವತಿಕೆ. ಶಿವಾನಿ-ಭವಾನಿ ಪ್ರಸಂಗವು ರಂಜಿಸಿತ್ತು. ಜೋಷಿ ಅವರ ಶಿವಾನಿ ಪಾತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ 2003ರಲ್ಲಿ ಸಿದ್ಧಾಪುರ ಶ್ರೀ ಭುವನಗಿರಿ ಮೇಳವನ್ನು ಹುಟ್ಟುಹಾಕಿ 2 ವರ್ಷ ನಡೆಸಿದ್ದರು. ಇದು ಕಾಲಮಿತಿಯ ಪ್ರದರ್ಶನದ ಮೇಳವಾಗಿತ್ತು. ಈ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು. 2ನೇ ವರ್ಷ ಪ್ರದರ್ಶನಕ್ಕೆ ತೆರಳುವಾಗ ಬೈಕ್ ಅಪಘಾತವಾಗಿ ಮೊಣಕಾಲ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಖ್ಯಾತ ವೈದ್ಯರೂ, ಯಕ್ಷಗಾನ ಕಲಾವಿದರೂ ಆದ ಡಾ. ಭಾಸ್ಕರಾನಂದ ಕುಮಾರ್ ಅವರಿಂದ ಚಿಕಿತ್ಸೆ ಪಡೆದು 3 ತಿಂಗಳಿನಲ್ಲಿ ಚೇತರಿಸಿಕೊಂಡಿದ್ದರು. 2 ವರ್ಷ ರಂಗದಿಂದ ದೂರ ಉಳಿದು ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. (2007). 2007ರಲ್ಲಿ ತೀರ್ಥರೂಪರ ನಿಧನದಿಂದಾಗಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.

1986ರಲ್ಲಿ ಚಂಪಕಮಾಲಿನಿ ಅವರು ಭಾಸ್ಕರ ಜೋಷಿಯವರ ಬಾಳಸಂಗಾತಿಯಾಗಿ ಮನೆ ತುಂಬಿದ್ದರು. ಕೆರೆಮನೆ ಶಂಭು ಹೆಗಡೆಯವರ ಬಾಹುಕ ಪಾತ್ರಕ್ಕೆ ದಮಯಂತಿಯಾಗಿ, ಹರಿಶ್ಚಂದ್ರ ಪಾತ್ರಕ್ಕೆ ಚಂದ್ರಮತಿಯಾಗಿ, ಕೆರೆಮನೆ ಮಹಾಬಲ ಹೆಗಡೆಯವರ ಜಮದಗ್ನಿಗೆ ರೇಣುಕೆಯಾಗಿ, ಭೀಷ್ಮನಿಗೆ ಅಂಬೆಯಾಗಿ, ಕೃಷ್ಣಾರ್ಜುನ ಕಾಳಗದ ಅರ್ಜುನನಿಗೆ ಸುಭದ್ರೆಯಾಗಿ, ಈಶ್ವರನಿಗೆ ದಾಕ್ಷಾಯಿಣಿಯಾಗಿ, ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ, ಚಿಟ್ಟಾಣಿಯವರ ಭಸ್ಮಾಸುರನಿಗೆ ಮೋಹಿನಿಯಾಗಿ, ಕೀಚಕನಿಗೆ ಸೈರಂಧ್ರಿಯಾಗಿ, ಉಗ್ರಸೇನನಿಗೆ ರುಚಿಮತಿಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು. ಸಾಲಿಗ್ರಾಮ ಮೇಳದಲ್ಲಿರುವಾಗ ಚಂದ್ರಹಾಸ ಪ್ರಸಂಗದಲ್ಲಿ ವಿಷಯೆ ಪಾತ್ರವೂ ರಂಜಿಸಿತ್ತು. ಆಗ ಜಲವಳ್ಳಿ ದುಷ್ಠಬುದ್ಧಿಯಾಗಿ, ಶಿರಿಯಾರ ಮಂಜು ನಾಯ್ಕರು ಚಂದ್ರಹಾಸನಾಗಿ, ಬಳ್ಕೂರು ಕೃಷ್ಣಯಾಜಿಯವರು ಮದನನಾಗಿಯೂ ಅಭಿನಯಿಸಿದ್ದರು. ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಚಂದ್ರಹಾಸನ ಪಾತ್ರಕ್ಕೆ ಒದಗಿದ್ದರು.

ಬಳ್ಕೂರು ಕೃಷ್ಣಯಾಜಿಯವರ ಸುಧನ್ವ ಮತ್ತು ಜೋಷಿ ಅವರ ಪ್ರಭಾವತಿ ಪಾತ್ರಗಳು ಪ್ರೇಕ್ಷಕರ ಮನವನ್ನು ಗೆದ್ದಿತ್ತು. ಒಟ್ಟು 40 ವರ್ಷಗಳಿಗಿಂತಲೂ ಹೆಚ್ಚಿನ ಕಲಾಸೇವೆ. 8000ಕ್ಕೂ ಮಿಕ್ಕಿದ ರಂಗಪ್ರದರ್ಶನ. ಸ್ತ್ರೀವೇಷದವರಿಗೆ ಕೊಡಮಾಡುವ ಹೆಚ್ಚಿನ ಎಲ್ಲಾ ಪ್ರಶಸ್ತಿಗಳನ್ನೂ ಇವರು ಪಡೆದುಕೊಂಡಿದ್ದಾರೆ. ಇವರು ಮುನ್ನಡೆಸಿದ್ದ ಶ್ರೀ ಭುವನಗಿರಿ ಮೇಳವು ಯಕ್ಷಗಾನದ ಇತಿಹಾಸದಲ್ಲಿ ಮೊದಲ ಪೂರ್ಣಚಂದ್ರಾಕೃತಿಯ ರಂಗಸ್ಥಳವಾಗಿತ್ತು. ಅನೇಕ ಸಂಘ-ಸಂಸ್ಥೆಗಳು ಜೋಷಿ ಅವರನ್ನು ಸನ್ಮಾನಿಸಿ ಗೌರವಿಸಿವೆ. ಪ್ರಸ್ತುತ ಮನೆವಾರ್ತೆ, ಕೃಷಿಕಾರ್ಯಗಳನ್ನು ನಿಭಾಯಿಸುತ್ತಾ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಪುರುಷ ವೇಷಗಳನ್ನೂ ಮಾಡಬಲ್ಲವರು. ಕಾರ್ತವೀರ್ಯಾರ್ಜುನ ಕಾಳಗದ ರಾವಣ, ಗದಾಯುದ್ಧ ಪ್ರಸಂಗದ ಕೌರವ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. ಪ್ರಸಂಗನಡೆ, ಮಾತುಗಾರಿಕೆಯ ಕಲೆ ತಿಳಿದವರಿಂದ ಮಾತ್ರ ಇದು ಸಾಧ್ಯ. ಶಿರಳಗಿ ಭಾಸ್ಕರ ಜೋಷಿ ಮತ್ತು ಚಂಪಕಮಾಲಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ಫೂರ್ತಿ MBA ಕಲಿತು ಉದ್ಯೋಗಸ್ಥೆಯಾಗಿದ್ದಾರೆ. ವಿವಾಹಿತೆ. ಅಳಿಯ ಶ್ರೀ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಉದ್ಯೋಗಿ. ಮೊಮ್ಮಗ ಧ್ರುವನಿಗೆ 4 ವರ್ಷ ಪ್ರಾಯ. ಪುತ್ರ ಶ್ರೀ ರಘುರಾಮ ಜೋಷಿ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ವಿವಾಹಿತ. ಸೊಸೆ ಸುಶ್ಮಾ ರಘುರಾಮ ಜೋಷಿ ಗಾಯನಕಲೆಯಲ್ಲಿ ಆಸಕ್ತರು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

1 COMMENT

  1. Chittaniyavara Keechakana edurinalli Sairandriyaagi
    Belthangadiyalli jaragida Sirasi melada kaaryakrama egaloo nenapide allade koodale vesha badalayisi prayojakara vattayadante yajiyavara eduru Prabhavatiyagi avara natane mechchugeyagityu

LEAVE A REPLY

Please enter your comment!
Please enter your name here

Most Popular

Recent Comments