Friday, September 20, 2024
Homeಯಕ್ಷಗಾನಯಕ್ಷಗಾನ ಅರ್ಥಧಾರಿ, ಪ್ರಾಚಾರ್ಯ ತುಂಬೆ ಪೂವಪ್ಪ ಶೆಟ್ಟಿ ನಿಧನ

ಯಕ್ಷಗಾನ ಅರ್ಥಧಾರಿ, ಪ್ರಾಚಾರ್ಯ ತುಂಬೆ ಪೂವಪ್ಪ ಶೆಟ್ಟಿ ನಿಧನ

ಹಿರಿಯ ಯಕ್ಷಗಾನ ಅರ್ಥಧಾರಿ,ನಿವೃತ್ತ ಪ್ರಾಚಾರ್ಯ ಪಡ್ಯಾರಮನೆ ಪೂವಪ್ಪ ಶೆಟ್ಟಿ ತುಂಬೆ (83) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಜನವರಿ 31, 2021ರಂದು ಭಾನುವಾರ ಸಾಯಂಕಾಲ ತುಂಬೆ ಪೇರ್ಲಬೈಲಿನ ಸ್ವಗ್ರಹ ಅನುಗ್ರಹದಲ್ಲಿ ನಿಧನರಾದರು. ಸೋಮವಾರ ಬೆಳಿಗ್ಗೆ 11.00 ಗಂಟೆಗೆ ತುಂಬೆಯಲ್ಲಿ ಅವರ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಯಿತು.  

ಮೂಲತ: ಅಂಬ್ಲಮೊಗರು ಬಳಿಯ ಪ್ರತಿಷ್ಠಿತ ಪಡ್ಯಾರ ಮನೆ ಕುಟುಂಬದಲ್ಲಿ ಜನಿಸಿದ ಪ್ರೊ.ಪೂವಪ್ಪ ಶೆಟ್ಟಿ ಅವರು ಸುಮಾರು ನಾಲ್ಕು ದಶಕಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯವರ್ಗವನ್ನು ಪಡೆದವರು. ಬೆಂಜನ ಪದವು  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಅವರು ಪದೋನ್ನತಿ ಹೊಂದಿ ಕಾವೂರು ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.     

ಅತ್ಯುತ್ತಮ ವಾಗ್ಮಿಗಳಾಗಿದ್ದ ಪೂವಪ್ಪ ಶೆಟ್ಟರು ಎಳವೆಯಿಂದಲೇ ಯಕ್ಷಗಾನ ಕಲೆಯಲ್ಲಿ ಆಸಕ್ತರಾಗಿದ್ದರು. ತಮ್ಮ ವಿಶಿಷ್ಟ ಶೈಲಿಯ ಅರ್ಥಗಾರಿಕೆಯಿಂದ ಹವ್ಯಾಸಿ ಮತ್ತು ಹಿರಿಯರ ತಾಳಮದ್ದಳೆ ಕೂಟಗಳಲ್ಲಿ ಬಹು ಬೇಡಿಕೆಯ ಕಲಾವಿದರಾಗಿದ್ದರು. ಫರಂಗಿಪೇಟೆಯಲ್ಲಿ ದಿ.ಎಫ್.ಹೆಚ್.ಒಡೆಯರ್ ಅವರ ಶಿಷ್ಯ ಬಳಗದಲ್ಲಿ ಮುಂಚೂಣಿಯಲ್ಲಿದ್ದು ದಿ.ಎ.ಕೆ.ನಾರಾಯಣ ಶೆಟ್ಟಿ, ಎ.ಕೆ.ಮಹಾಬಲ ಶೆಟ್ಟಿ, ಧನಂಜಯ ಶೆಟ್ಟಿ ಹಾಗೂ ಶ್ರೀ ಮಹಾಬಲ ಆಳ್ವ, ಸಂಜೀವ ಶೆಟ್ಟಿ ಮೊದಲಾದವರೊಂದಿಗೆ ನೂರಾರು ಕೂಟಗಳಲ್ಲಿ ಭಾಗವಹಿಸಿದ್ದರು. ಶ್ರೀ ಜಗದಾಂಬಿಕಾ ಯಕ್ಷಗಾನ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಭೀಷ್ಮ, ಕರ್ಣ, ವಾಲಿ, ಮಾಗಧ, ರಾವಣ, ಕಂಸ,ಅರ್ಜುನ,ಹನುಮಂತ ಇತ್ಯಾದಿ ಪಾತ್ರಗಳಲ್ಲಿ ಅವರಿಗೆ ಅಪಾರ ಹಿಡಿತವಿತ್ತು. ಫರಂಗಿಪೇಟೆ ಗಣೇಶೋತ್ಸವದಲ್ಲಿ ಹಾಗೂ ಪಡ್ಯಾರ ಮನೆ ಕುಟುಂಬದ ವರ್ಷಾವಧಿ ನೇಮೋತ್ಸವದಂದು ಸಂಜೆ ಮನೋರಂಜನೆಗಾಗಿ ನಡೆಯುವ ಯಕ್ಷಗಾನ ತಾಳಮದ್ದಳೆಗಳಲ್ಲೂ ಅರ್ಥದಾರಿಯಾಗಿ ಭಾಗವಹಿಸುತ್ತಿದ್ದರು. ಕೌಟುಂಬಿಕವಾಗಿಯೂ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದ ಪೂವಪ್ಪ ಶೆಟ್ಟರು ಪತ್ನಿ ಶಾಂತಾ ಪಿ.ಶೆಟ್ಟಿ ತೋಕೂರು ಹಾಗೂ ಮಕ್ಕಳಾದ ರೇಖಾ ಬಾಬು ಆಳ್ವ, ಪ್ರಸಾದ್ ಪಿ.ಶೆಟ್ಟಿ, ಸರಿತಾ ಹರೀಶ್ ಮಲ್ಲಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಗಣ್ಯರ ಶೋಕ:     ಆದರ್ಶ ಶಿಕ್ಷಕ, ಯಕ್ಷಗಾನ ವಿದ್ವಾಂಸ ಪೂವಪ್ಪ ಶೆಟ್ಟರ ನಿಧನಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ, ಹಿರಿಯ ಅರ್ಥಧಾರಿ – ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ, ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್, ಜತೆ ಕಾರ್ಯದರ್ಶಿ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ, ಶ್ರೀಕೃಷ್ಣ ಯಕ್ಷಸಭಾದ ಸುಧಾಕರ ರಾವ್ ಪೇಜಾವರ, ಫರಂಗಿಪೇಟೆ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ, ನರಸಿಂಹ ಶೆಟ್ಟಿ ತುಪ್ಪೆಕಲ್, ಕಲಾಗಂಗೋತ್ರಿಯ ಸದಾಶಿವ ಮಾಸ್ತರ್,ಕಮ್ಮಾಜೆ ಮಹಾಬಲ ಆಳ್ವ, ಸಂಜೀವ ಶೆಟ್ಟಿ  ಬಿ.ಸಿ.ರೋಡ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments