Saturday, January 18, 2025
Homeಯಕ್ಷಗಾನಪಡುಪೆರಾರ ಲಕ್ಷ್ಮಣ ಕೋಟ್ಯಾನ್ - ಯಾವುದೇ ವೇಷಗಳನ್ನು ನಿರ್ವಹಿಸಬಲ್ಲ ಬಣ್ಣದ ವೇಷಧಾರಿ 

ಪಡುಪೆರಾರ ಲಕ್ಷ್ಮಣ ಕೋಟ್ಯಾನ್ – ಯಾವುದೇ ವೇಷಗಳನ್ನು ನಿರ್ವಹಿಸಬಲ್ಲ ಬಣ್ಣದ ವೇಷಧಾರಿ 

ಶ್ರೀ ಲಕ್ಷ್ಮಣ ಕೋಟ್ಯಾನ್ ಅವರು ಪ್ರಸ್ತುತ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಈಗ ಅವರಿಗೆ ವಯಸ್ಸು ಎಪ್ಪತ್ತು ಆದರೂ ಯುವಕರಂತೆ ಉತ್ಸಾಹದಿಂದ ರಂಗವೇರುತ್ತಾರೆ.

ಇವರು ಬಣ್ಣದ ವೇಷಧಾರಿ. ಮಹಿಷಾಸುರ, ವರಾಹ, ಮತ್ಸ್ಯ, ಕುಂಭಕರ್ಣ, ಕಿರಾತ, ತಾರಕಾಸುರ, ಶೂರಪದ್ಮ, ಅಲ್ಲದೆ ಹೆಣ್ಣು ಬಣ್ಣಗಳನ್ನು ನಿರ್ವಹಿಸಬಲ್ಲರು. ಇವರ ಕಿರೀಟ ವೇಷಗಳೂ ಆಕರ್ಷಕ. ನಾಟಕೀಯ ಪಾತ್ರಗಳನ್ನು ಕೂಡಾ ಮಾಡುತ್ತಾರೆ. ಇವರು 1949ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ತಾಲ್ಲೂಕು ಪಡುಪೆರಾರದ ಚಿನ್ನಯ್ಯ ಪೂಜಾರಿ ಮತ್ತು ಮುತ್ತು ಪೂಜಾರಿ ದಂಪತಿಗಳ ಮಗನಾಗಿ ಜನಿಸಿದರು. ಕಿನ್ನಿಕಂಬಳ ಶಾಲೆಯಲ್ಲಿ ಐದನೇ ತರಗತಿವರೇಗೆ ಓದಿದರು. ಆ ಸಂದರ್ಭದಲ್ಲಿ ಖ್ಯಾತ ಪುಂಡು ವೇಷಧಾರಿ ಕ್ರಿಶ್ಚನ್ ಬಾಬು ಅವರಿಂದ ನಾಟ್ಯ ಕಲಿತು ವೇಷ ಮಾಡಲು ಪ್ರಾರಂಭಿಸಿದರು.

ನಂತರ ಜೀವನೋಪಾಯಕ್ಕಾಗಿ ಮುಂಬೈ ನಗರವನ್ನು ಸೇರಿಕೊಂಡ ಲಕ್ಷ್ಮಣ ಕೋಟ್ಯಾನ್ ಹದಿನೆಂಟು ವರ್ಷಗಳ ಕಾಲ ಸಿಐಡಿ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿದ್ದರು. ಮುಂಬೈಯಲ್ಲಿ ಕಲಾಸೇವೆಯನ್ನು ಮುಂದುವರಿಸಲು ಅವಕಾಶಗಳು ಇದ್ದು, ಅನೇಕ ಮಂಡಳಿಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲೊಂದು ಶ್ರೀ ಗುರು ನಾರಾಯಣ ಮಂಡಳಿ. ವೇಷ ಮಾಡುವುದರ ಜತೆಗೆ ನಾಟ್ಯದ ತರಬೇತಿಯನ್ನು ನೀಡಿದರು. ಇವರು ಕ್ರೀಡೆಯಲ್ಲೂ ಆಸಕ್ತರು. ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ಹೊಂದಿ, ಆಟಗಾರನಾಗಿಯೂ, ತರಬೇತುದಾರನಾಗಿಯೂ ಕಾಣಿಸಿಕೊಂಡರು. ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ ಮನೆ ಸಮಸ್ಯೆಯಿಂದಾಗಿ ಊರಿಗೆ ಬರಬೇಕಾಯಿತು. ಜೀವನೋಪಾಯಕ್ಕಾಗಿ ತಾನು ಮೊದಲು ಕಲಿತ ಯಕ್ಷಗಾನವನ್ನೇ ಅವಲಂಬಿಸಬೇಕಾಯಿತು.
                         

ತಲಕಳ ಮತ್ತು ಕದ್ರಿ ಮೇಳಗಳಲ್ಲಿ ತಲಾ ಒಂದು ವರ್ಷ ತಿರುಗಾಟ ನಡೆಸಿ ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿಕೊಂಡ ಫುಟ್ಬಾಲ್ ನಂಟು ಊರಿಗೆ ಬಂದರೂ ಕೋಟ್ಯಾನ್‍ರನ್ನು ಬಿಡಲಿಲ್ಲ. ಸರಕಾರಿ ಕಾಲೇಜು ಮಂಗಳೂರು, ಕೆಎಂಸಿ ಫುಟ್ಬಾಲ್ ತಂಡ ಮತ್ತು ಸ್ಪೋರ್ಟಿಂಗ್ ಕ್ಲಬ್‍ನಲ್ಲಿ ಕೋಚ್ ಆಗಿ ತರಬೇತಿ ನೀಡಿದರು. ಅನೇಕ ಸನ್ಮಾನ ಗೌರವಗಳನ್ನು ಪಡೆದುಕೊಂಡರು. ಸದಾ ನಗುನಗುತ್ತಾ ಎಲ್ಲರನ್ನೂ ಮಾತನಾಡಿಸುವ ಶ್ರೀ ಲಕ್ಷ್ಮಣ ಕೋಟ್ಯಾನ್ ಸರಳ, ಸಜ್ಜನ, ನಿಗರ್ವಿ ಕಲಾವಿದ. ಯಾವ ವೇಷವನ್ನೂ ನಿರ್ವಹಿಸಬಲ್ಲರು.

ವರ್ಷವಿಡಿ ಒಂದೇ ಸೆಟ್ಟಿನಲ್ಲೇ ತಿರುಗಾಟ ಮಾಡುತ್ತೇನೆ ಎಂಬ ಹಟಕ್ಕೆ ಬೀಳುವವರಲ್ಲ. ಅನಿವಾರ್ಯವಾದರೆ ಸಂಚಾಲಕರ ಅಪ್ಪಣೆಯಂತೆ ಆರು ಮೇಳಗಳಲ್ಲಿ ಯಾವ ಮೇಳದಲ್ಲೂ ವೇಷ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಶ್ರೀ ಲಕ್ಷ್ಮಣ ಕೋಟ್ಯಾನ್ ಸಾಂಸಾರಿಕವಾಗಿಯೂ ಕಲಾವಿದನಾಗಿಯೂ ತೃಪ್ತರು. ಮಡದಿ ಶ್ರೀಮತಿ ಚಂದ್ರಾವತಿ ಗೃಹಣಿ. ಮಗಳು ಮಂಜುಳಾ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುತ್ತಾರೆ. ಪ್ರಸ್ತುತ ಪಾಂಪೈ ಕಾಲೇಜಿನಲ್ಲಿ ಉಪನ್ಯಾಸಕಿ. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments