Saturday, January 18, 2025
Homeಯಕ್ಷಗಾನಶೇಣಿ ವಾಗ್ವೈಭವ – ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 2

ಶೇಣಿ ವಾಗ್ವೈಭವ – ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 2

ಇತ್ತ ಶೋಣಿತಪುರದಿ ದೈತ್ಯ ಕುಲ ಪುಂಗವನು
ಮತ್ತೆ ಓಲಗದಲ್ಲಿ ಚಿತ್ತದುಮ್ಮಳದಿ ||


ಕುಲೋನ್ನತಿ ನಮಗೆ ಹುಟ್ಟಿನಿಂದಲೇ ಬಂದಿದೆ. ದೈತ್ಯಕುಲ. ಆದರೆ ಅಷ್ಟಕ್ಕೇ ವ್ಯಕ್ತಿಯಾದಂತಹ ನಾನು ನನ್ನ ಔನ್ನತ್ಯವನ್ನು ಬೌದ್ಧಿಕವಾಗಿ ಅಂಗೀಕರಿಸಲಿಲ್ಲ. ಸ್ವಪ್ರಯತ್ನದಿಂದ, ನನ್ನ ಸಾಧನೆಯಿಂದ ದೈತ್ಯಕುಲದಲ್ಲಿ ಉತ್ತುಂಗವಾದಂತಹ ಶ್ರೇಯಸ್ಸನ್ನು ಸಂಪಾದಿಸುವುದಕ್ಕಾಗಿ ದೈತ್ಯ ಕುಲದವನಾಗಿಯೂ ದೈತ್ಯ ಕುಲಪುಂಗವ ನಾಗಿಯೂ ತಲೆ ಎತ್ತಿದೆ. ಆವಾಗ ಹೇಗೆ? ಮಿಕ್ಕವರಿಗೆಲ್ಲಾ ಒಂದು ದಾರಿಯಾದರೆ ಮದ ಬಂದ ಆನೆಗೆ ಕಾಡಿನಲ್ಲಿ ಅದರದ್ದೇ ಆದ ಹಾದಿ. ನನ್ನ ಔನ್ನತ್ಯಕ್ಕೆ ಇದೇ ಸರಿ ಅಂತ ನಾನು ಹೋದದ್ದೇ ದಾರಿ, ನನಗೆ ಮಿಕ್ಕವರು ಹೋದ ಹಾದಿ ಅಲ್ಲ. ಇಷ್ಟು ಸಂಪಾದಿಸಿದ್ದೇನೆ. ಆದರೆ ಏನು ಮಾಡೋಣ? ಪರೋಕ್ಷವಾಗಿ ನನ್ನ ತಮ್ಮನನ್ನು ಕೊಲ್ಲುವುದರ ಮೂಲಕ ಆ ಹರಿ ಪಂಥಾಹ್ವಾನವನ್ನೇ ಕೊಟ್ಟ. ಅದೊಂದು ನೋವು ಸೇಡು ತೀರಿಸಲಾಗದೆ ಇದ್ದಂತಹಾ ಒಂದು ಕಳಕಳಿ. ಇದು ನನ್ನ ಹೊಟ್ಟೆಯಲ್ಲಿ ಉರಿಯುತ್ತಾ ಇತ್ತು.

ಆದರೆ ಆ ಉರಿ ನಂದಿ ಆನಂದದ ತಂಪು ಕೊಡುವುದಕ್ಕಾಗಿಯೇ ನನಗೊಬ್ಬ ಅಪರೂಪದ ಮಗ ಹುಟ್ಟಿದ. ಈ ಪುತ್ರೋತ್ಸವದಲ್ಲಿ ನನ್ನ ತಮ್ಮನನ್ನು ಕೊಂದಂತಹ ಹರಿಯನ್ನು ನಾನು ಮರೆತುಬಿಟ್ಟೆ. ಸ್ವಲ್ಪ ಕಾಲ ಮರೆತುಬಿಟ್ಟೆ. ಇನ್ನು ಮರೆಯುವುದೇ ಒಳ್ಳೆಯದು. ಯಾಕೆ? ಅವನನ್ನು ಮರೆಯುವುದಕ್ಕಾಗಿಯೇ ನನಗೊಬ್ಬ ಮಗ. ಇವನನ್ನು ಕಂಡಾವಾಗ ಅವನ ನೆನಪೇ ನನಗಿಲ್ಲದೆ ಹೋಗುತ್ತದೆ. ಇದು ನನ್ನದದ್ದಾದ ತಪಸ್ಸಿನ ಫಲ. ಈ ಹಿಂದೆ ನಾನು ಪುತ್ರವಂತನೇ. ಆದರೆ ಈ ಮಗನಿಂದ ನನ್ನ ಅಂತಃಕರಣದಲ್ಲಿ ಏನು ಅನುಭವವಾಯಿತೋ ಇದಕ್ಕೆ ಬೇರೆ ಶಬ್ದ ಸಿಕ್ಕದೆ ‘ಪ್ರಹ್ಲಾದ’ ಎಂದು ಹೆಸರಿಟ್ಟೆ. ಅಂದರೇನು? ಪ್ರಕರ್ಷೇಣ ಸಂತೋಷವನ್ನು ತಂದವ. ಈ ಮಗ ಹುಟ್ಟಿದ ಮೇಲೆ ಅವ ಯಾಕೆ ಬೇಗ ಬೆಳೆಯುವುದಿಲ್ಲ. ಅಂತಲೇ ನನ್ನ ಉತ್ಸಾಹ.

ಯಥಾರ್ಥಕ್ಕಾದರೆ ನಾನು ಬಿಟ್ಟುಹೋದ ಸ್ಥಾನವನ್ನು ತುಂಬಬೇಕಾಗಿದ್ದರೆ ಅವನೇ ಸರಿ. ವಯಸ್ಸಿನಲ್ಲಿ ಚಿಕ್ಕವನಾದರೇನು? ಆದಕಾರಣ ಅವಸರದಲ್ಲಿ ಐದನೇ ವಯಸ್ಸಿಗೆ ಉಪನಯನವನ್ನೂ ಮಾಡಿದೆ. ಹಾಗುಂಟು ಶಾಸ್ತ್ರದಲ್ಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಅಂತಃಕರಣದ ಬೆಳವಣಿಗೆಯನ್ನು ನೋಡಿ ವಯಸ್ಸನ್ನು ನಿರ್ಣಯಿಸಬೇಕೇ ಹೊರತು ದೇಹದ ಬೆಳವಣಿಗೆಯನ್ನು ನೋಡಿ ಅಲ್ಲ. ಹಾಗಾಗಿ ಐದು ವರ್ಷದಲ್ಲೇ ಉಪನಯನ ಸಂಸ್ಕಾರವನ್ನು ಮಾಡಿ ವಿದ್ಯಾಭ್ಯಾಸಕ್ಕೆಂದು ಗುರುವಿಗೆ ಒಪ್ಪಿಸಿಬಿಟ್ಟಿದ್ದೇನೆ. ಮಾತೃದೇವೋಭವ, ಪಿತೃದೇವೋಭವ ಎಂದು ಮನೆಯಲ್ಲೇ ಅವನಿಗೆ ಪಾಠವಾಗಿದೆ. ಆಚಾರ್ಯ ದೇವೋಭವವಾಗಿ ನನ್ನ ಹಾಗೆ ಅವನಿಗೂ ಗೊತ್ತಾಗಬೇಕು. ಹೊರಗೆ ದೇವರಿಲ್ಲ. ಇದ್ದರೆ ನಾನೇ. ಅಹಂ ಬ್ರಹ್ಮಾಸ್ಮಿ ಎಂದು. ಹಾಗೆ ಹುಡುಗ ಹೋಗಿದ್ದಾನೆ.

ಹುಡುಗ ಹತ್ತಿರ ಇದ್ದರೆ ಅವನ ವಿದ್ಯೆಗೆ ಪೆಟ್ಟು ಬರುತ್ತದೆಯಲ್ಲ ಎಂದು ನಾನು ಕಳಿಸಿದೆ. ಹುಡುಗ ಇಲ್ಲದಿದ್ದರೆ ತುತ್ತು ಅನ್ನ ನನಗೆ ರುಚಿಸುವುದಿಲ್ಲ. ಅಂತೂ ನಾವು ಬಹಳ ಪ್ರೀತಿಯನ್ನು ಇರಿಸಿದರೂ ನಮಗೆ ನೋವೇ. ವಿರೋಧವನ್ನು ಸಾಧಿಸಿದರೂ ನೋವೇ. ನನ್ನ ಹಣೆಬರಹ ಹೀಗಾಯಿತಲ್ಲಾ. ಈ ಹುಡುಗ ಹುಟ್ಟುವಲ್ಲಿಯ ವರೆಗೆ ಹರಿ ದ್ವೇಷದಲ್ಲಿಯೇ ನಾನು ತಿಂದ ಅನ್ನ ನನಗೆ ರುಚಿಯಾಗಲಿಲ್ಲ. ಈಗ ಇಮ್ಮಡಿ ಮೋಹ ಈ ಬಾಲಕನಲ್ಲಿ ಆದ ದೆಸೆಯಿಂದ ಈಗಲೂ ಸುಖವಿಲ್ಲ. ಆದರೆ ಒಂದು, ನಾರಾಯಣನನ್ನು ಹುಡುಕಿದೆ. ಹುಡುಕಿದೆ. ಹುಡುಕಿದೆ. ಆದರೆ ಗೋಚರವಾಗಲಿಲ್ಲ. ನನ್ನ ಮಗನನ್ನು ನಾನು ಹುಡುಕುವುದಕ್ಕೇನುಂಟು? ಒಮ್ಮೆ ಕಾಣಬೇಕು ಮಗನನ್ನು. ‘ಮಗ ಬರಲಿ’ ಎಂದು ಹೇಳಿದರೆ ಬರುವುದಲ್ಲವೇ? ಬರ್ತಾನೆ. ಬರ್ತಾನೆ… ಆದ ಕಾರಣ ಗುರುಗಳಿಗೆ ಹೇಳಿ ಕಳುಹಿಸಿದ್ದೇನೆ. ಸಂದರ್ಭ ಇದ್ದರೆ ಒಂದು ಘಳಿಗೆ ನಮ್ಮ ಮಗ ಬಂದು ಹೋಗಲಿ. ಬಂದಾನು… ಬಂದಾನು… ನೋಡೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments