ಕೆ. ಗೋವಿಂದ ಭಟ್ (ಫೋಟೋ: ಶ್ರುತಿ ಭಟ್ ಬಂಡ್ಯಡ್ಕ, ಬೋಸ್ಟನ್,ಯು. ಎಸ್. ಎ.)
ಯಕ್ಷಗಾನವೆಂಬ ಥಳಕು ಬಳುಕಿನ ಬಣ್ಣದ ಲೋಕದಲ್ಲಿ ಸೂರಿಕುಮೇರಿ ಗೋವಿಂದ ಭಟ್ಟರು ಎಂಬ ಕೌತುಕ, ವೇಷ ಕಳಚಿ ಬಣ್ಣ ತೊಳೆದು ನಿಜ ವ್ಯಕ್ತಿಯಾದಾಗ ಎಲ್ಲರಿಗೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲಾಗದ ವ್ಯಕ್ತಿರೂಪವಾಗಿ ಉಳಿಯುತ್ತಾರೆ. ಕೆಲವೊಮ್ಮೆ ಸ್ಥಿತಪ್ರಜ್ಞತೆ, ಇನ್ನು ಕೆಲವು ಸಂದರ್ಭಗಳಲ್ಲಿ ಕಾಡುವ ನಿರ್ಲಿಪ್ತತೆ ಮುಖದಲ್ಲಿ ಪ್ರತಿಫಲಿಸುವುದುಂಟು. ಕಾದ ಕಬ್ಬಿಣಕ್ಕೆ ಬಿದ್ದ ಪೆಟ್ಟುಗಳಂತೆ ಎಳವೆಯಲ್ಲಿ ನಲಿವಿಗಿಂತ ಹೆಚ್ಚಾಗಿ ಅನುಭವಿಸಿದ ಯಾತನೆಯ ಬದುಕನ್ನು ಸಹ್ಯವಾಗಿಸಿಕೊಂಡು ಪರಿಪಕ್ವವಾಗಿ ಹೇಗೆ ಬೇಕಾದರೂ ಉಪಯೋಗಿಸಬಲ್ಲ ಆಯುಧವಾಗಿದ್ದಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಎಳವೆಯಲ್ಲಿ ಧರ್ಮಸ್ಥಳ ಮೇಳದ ಚೌಕಿಗೆ ಹೋಗಿದ್ದಾಗಲೆಲ್ಲಾ ವೇಷದ ಪೆಟ್ಟಿಗೆಯ ಮೇಲೆ ಕುಳಿತು ಕೆ. ಗೋವಿಂದ ಭಟ್ ಎಂಬ ಅದ್ಭುತವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆಗಲೇ ನಮ್ಮ ದೃಷ್ಟಿಯಲ್ಲಿ ‘ಹೀರೋ’ ಆಗಿದ್ದ ವ್ಯಕ್ತಿತ್ವ. ಚಿಣ್ಣರಾಗಿದ್ದಾಗ ಕೆ. ಗೋವಿಂದ ಭಟ್ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ ಪಾತ್ರಗಳನ್ನು ಬಹುವಾಗಿ ಇಷ್ಟಪಟ್ಟಿದ್ದೆ. ನಿಜವಾಗಿಯೂ ಪಾತ್ರಧಾರಿಯಾಗಿ ಗೋವಿಂದ ಭಟ್ಟರು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವ ಬಹಳ ಗಾಢವಾದದ್ದು. ಆ ಪ್ರಭಾವ ಎಷ್ಟಿರುತ್ತದೆಂದರೆ ಅವರು ನಿರ್ವಹಿಸುವ ಪಾತ್ರಗಳಿಂದಾಚೆಗೆ ಯಕ್ಷಗಾನವೇ ಇಲ್ಲ ಎನ್ನುವಷ್ಟು.

ಕೆ. ಗೋವಿಂದ ಭಟ್ಟರ ಕುರಿತಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಪ್ರಕಾಶಿಸಿದ ಎರಡು ಪುಸ್ತಕಗಳು ಬಿಡುಗಡೆಯಾಗಿವೆ. ಮೊದಲನೆಯದು ಡಾ. ಬಿ. ಪ್ರಭಾಕರ ಶಿಶಿಲ ಅವರು ಬರೆದ ಗೋವಿಂದ ಭಟ್ಟರ ಆತ್ಮಕಥೆ ‘ಯಕ್ಷೋಪಾಸನೆ’ ಹಾಗೂ ಇನ್ನೊಂದು ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಕತ್ವದಲ್ಲಿ ಬಿಡುಗಡೆಗೊಂಡ ಸೂರಿಕುಮೇರಿ ಅವರ ಅಭಿನಂದನಾ ಗ್ರಂಥ ‘ಸವ್ಯಸಾಚಿ’.
ಮೊದಲನೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ 2008ರಲ್ಲಿ ಹೊರತಂದ ಪುಸ್ತಕ ‘ಯಕ್ಷೋಪಾಸನೆ’ ಡಾ. ಬಿ. ಪ್ರಭಾಕರ ಶಿಶಿಲರ ಅದ್ಭುತ ನಿರೂಪಣೆಯಿಂದ ಕೂಡಿದ್ದು ಪ್ರಾರಂಭದಿಂದ ಕೊನೆಯ ವರೆಗೂ ಓದಿಸಿಕೊಂಡು ಹೋಗುತ್ತದೆ. ಗ್ರಂಥದಲ್ಲಿ ಗೋವಿಂದ ಭಟ್ಟರ ಬಾಲ್ಯದಿಂದ ತೊಡಗಿ ಆ ಪುಸ್ತಕ ಪ್ರಕಟವಾಗುವ ವರೆಗಿನ ಅವರ ಜೀವನದ ವಿವಿಧ ಮಜಲುಗಳು, ಏಳುಬೀಳುಗಳನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ಮೊದಲ ಭಾಗವು ಕರುಣರಸದ ಭಾವಾಭಿವ್ಯಕ್ತಿಯ ಧಾರೆಯಲ್ಲಿ ಮಿಂದು ತೋಯಿಸಿದರೂ ಮುಂದುವರಿದಂತೆ ಅವರ ಸಾಧನೆಗಳ ಅಲೆಯಲ್ಲಿ ನಾವೂ ತೇಲಾಡುವಂತೆ ಅನಿಸುತ್ತದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
‘‘ಪಾತ್ರ ಯಾವುದೇ ಇರಲಿ, ತಕರಾರಿಲ್ಲದೆ ಕಲಾವಿದ ಒಪ್ಪಿಕೊಂಡರೆ ಕಲಾವಿದ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಕಲಾಮಾಧ್ಯಮ ಸೊರಗುತ್ತದೆ. ಯಕ್ಷಗಾನವು ಒಂದು ಸಾಮುದಾಯಿಕ ಭಾವಾಭಿವ್ಯಕ್ತಿಯೇ ಹೊರತು ಏಕವ್ಯಕ್ತಿ ಪ್ರದರ್ಶನವಲ್ಲ. ಇಡೀ ತಂಡವಾಗಿ ಕಲಾವಿದರು ದುಡಿದರೆ ಎಂತಹ ಪ್ರಸಂಗವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದು ನಾನು ಕಂಡುಕೊಂಡ ಸತ್ಯ.’’
ಗೋವಿಂದ ಭಟ್ಟರು ಈ ಮಾತಿನಂತೆಯೇ ನಡೆದುಕೊಂಡರು. ಅಗತ್ಯ ಬಿದ್ದಾಗ ಯಾವುದೇ ಪಾತ್ರವನ್ನು, ಎಷ್ಟೇ ಸಣ್ಣ ಪಾತ್ರವನ್ನಾದರೂ ನಿರ್ವಹಿಸಿದ ಉದಾಹರಣೆಗಳು ಕಣ್ಣಮುಂದೆ ಹೇರಳವಾಗಿವೆ.
ಇನ್ನೊಂದು ಪುಸ್ತಕ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರೇ ಹೊರತಂದ ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಿತ ‘ಸವ್ಯಸಾಚಿ’. ಹೆಸರೇ ಹೇಳುವಂತೆ ಯಕ್ಷರಂಗದ ನಿಜ ಸವ್ಯಸಾಚಿಯ ಬಗ್ಗೆ ಕಲಾಪೋಷಕ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್‍ರಿಂದ ಮೊದಲ್ಗೊಂಡು ಅನೇಕ ಗಣ್ಯರು ಬರೆದ ಅನಿಸಿಕೆಗಳಿವೆ.
ಟಿ. ಶ್ಯಾಮ್ ಭಟ್ ಅವರು ಈ ಪುಸ್ತಕದಲ್ಲಿ ‘‘ಅವರ ವೇಷಗಳು ರಂಗಸ್ಥಳವನ್ನು ತುಂಬಿ ಕೊಳ್ಳುವ ಪರಿ ಅನುಪಮವಾದುದು. ಗೋವಿಂದ ಭಟ್ಟರಿಗೆ ಗೋವಿಂದ ಭಟ್ಟರೇ ಸರಿ. ಯಾರ ಅನುಕರಣೆಯೂ ಇಲ್ಲದೆ, ಯಾರನ್ನೂ ಅನುಸರಿಸದೆ ತಮ್ಮದೇ ಆದ ಶೈಲಿಯಿಂದ ಮೆರೆದವರು…. ಸಾಮಾಜಿಕವಾದ ಕೆಲವು ವಿವಾದಗಳನ್ನು ಅವರು ಬಗೆಹರಿಸಿದ್ದಿದೆ. ಹೀಗೆ ಸಾಮಾಜಿಕ ಸೇವೆಗಳನ್ನು ಬಹುಕಾಲ ನಡೆಸಿದ್ದಾರೆ’’ ಎಂದು ಬರೆದಿದ್ದಾರೆ.

ಹೀಗೆ ಸಮಾಜಮುಖಿಯಾದ ಗೋವಿಂದ ಭಟ್ಟರು ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದರೂ ಅದನ್ನೆಲ್ಲಾ ಮೆಟ್ಟಿ ನಿಂತು ಛಲದಿಂದ ಬದುಕಿ ಈಗ ಸುದೃಢವಾದ ಆರ್ಥಿಕ ಬದುಕನ್ನು ಕಂಡುಕೊಂಡವರು.
‘ಸವ್ಯಸಾಚಿ’ ಹೊತ್ತಗೆಯ ಒಂದು ಭಾಗದಲ್ಲಿ ಯಕ್ಷಗಾನ ಕಲಾವಿದ ಕೆ. ವಿಶ್ವೇಶ್ವರ ಭಟ್, ಸುಣ್ಣಂಬಳ ಅವರು ತಮ್ಮ ಗುರುಗಳ ಬಗ್ಗೆ ಹೀಗೆ ಹೇಳುತ್ತಾರೆ. ‘‘ಗುರುಗಳ ಗದಾಯುದ್ಧದ ಕೌರವನ ಪಾತ್ರ. ನನ್ನದು ಕರ್ಣಪರ್ವದ ಕರ್ಣ. ವೇಷಭೂಷಣ ಒದಗಿಸುವವರು ಒಂದು ಬಿಳಿ ಬಣ್ಣದ ಸೋಗೆವಲ್ಲಿಯನ್ನು ಮಾತ್ರ ತಂದಿದ್ದರು. ನಾನು ವೇಷಧರಿಸುವಾಗ ಅದನ್ನು ಅವರ ಕೌರವನ ಪಾತ್ರಕ್ಕಾಗಿ ತೆಗೆದಿಟ್ಟು ಬೇರೆ ಬಣ್ಣದ ಸೋಗೆವಲ್ಲಿ ಹಾಕಿದೆ. ಅದನ್ನು ನೋಡಿದ ಅವರು ಬಂದು ‘ನೀನು ಅದನ್ನು ಹಾಕು’ ಎಂದು ಹೇಳಿ ಮೊದಲು ನಾನು ಹಾಕಿದ ಸೋಗೆವಲ್ಲಿಯನ್ನು ತೆಗೆಸಿದ್ದು ಮಾತ್ರವಲ್ಲ ಅಂದು ಅವರು ಕೌರವನಿಗೆ ಬೇರೆ ಯಾವುದೋ ಒಂದು ಸೋಗೆವಲ್ಲಿ ಹಾಕಿದರು. ಹೀಗೆ ತನ್ನ ವೇಷಭೂಷಣಕ್ಕೆ ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಎಷ್ಟು ಮಂದಿಗಳನ್ನು ನಾವಿಂದು ಕಾಣಬಹುದು?’’ ನಿಜವಾಗಿಯೂ ಅತಿಶಯೋಕ್ತಿಗಳಿಂದ ಕೂಡಿದ ಮಾತಲ್ಲ ಇದು. ಇಂತಹ ಎಷ್ಟೋ ಸಂದರ್ಭಗಳಲ್ಲಿ ಗೋವಿಂದ ಭಟ್ಟರನ್ನು ಹತ್ತಿರದಿಂದ ಬಲ್ಲವರು ಒಪ್ಪುವ ಮಾತೇ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಅವರು ರಂಗದಲ್ಲಿ ಪಾತ್ರವೇ ಆಗಿರುತ್ತಿದ್ದರು. ಪಾತ್ರ, ಸ್ವಭಾವಗಳನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತಿದ್ದ ರೀತಿ ಅನನ್ಯವಾದದ್ದು. ‘ಯಕ್ಷೋಪಾಸನೆ’ಯಲ್ಲಿ ಅವರೇ ಹೇಳುವಂತೆ ‘‘ದ್ರೌಪದಿ ವಸ್ತ್ರಾಪಹರಣದ ಉದ್ದೇಶ ಪ್ರತೀಕಾರ. ಆ ಪಾತ್ರವನ್ನು ನಾನು ನಿರ್ವಹಿಸುವಾಗ ಹಿಂದೆ ನನ್ನ ವೈಯುಕ್ತಿಕ ಜೀವನದಲ್ಲಾದ ಅಪಮಾನ ಗಳನ್ನು ನೆನಪಿಸಿಕೊಂಡು ಈಗ ಅದಕ್ಕೆ ಪರಿಮಾರ್ಜನೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ. ಕೌರವನ ಪಾತ್ರ ಸಹಜವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದರೆ, ಅದಕ್ಕೆ ಈ ಭಾವ ಕಾರಣ ವಾಗಿರಬೇಕು.’’ ಎಂತಹಾ ಮಾರ್ಮಿಕವಾದ ಮಾತು. ಅಷ್ಟೇ ಸತ್ಯವೂ ಕೂಡ. ‘ಯಕ್ಷೋಪಾಸನೆ’ ಮತ್ತು ‘ಸವ್ಯಸಾಚಿ’ ಎಂಬ ಈ ಎರಡೂ ಪುಸ್ತಕಗಳು ಕೂಡಾ ಮುಂದಿನ ಪೀಳಿಗೆಗೆ ಅಧ್ಯಯನ ಯೋಗ್ಯವೂ ಸಂಗ್ರಹಯೋಗ್ಯವೂ ಆಗಿವೆ.
ಲೇಖನ: ಮನಮೋಹನ್ ವಿ.ಎಸ್.