Saturday, January 18, 2025
Homeಪುಸ್ತಕ ಮಳಿಗೆಸ್ವಪ್ರಯತ್ನದ ಧೀಮಂತ ಲೇಖಕ - ಅಂಬಾತನಯ ಮುದ್ರಾಡಿ 

ಸ್ವಪ್ರಯತ್ನದ ಧೀಮಂತ ಲೇಖಕ – ಅಂಬಾತನಯ ಮುದ್ರಾಡಿ 

ಶೀರ್ಷಿಕೆಯೇ ಸೂಚಿಸುವಂತೆ ಇದು ಲೇಖಕ ಶ್ರೀ ಅಂಬಾತನಯ ಮುದ್ರಾಡಿ ಅವರ ಕುರಿತಾದ ಹೊತ್ತಗೆಯು. ಲೇಖಕರು ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು. ಪ್ರಧಾನ ಸಂಪಾದಕರು ಡಾ. ನಾ.ಮೊಗಸಾಲೆ ಅವರು. ಸಂಪಾದಕರು ಡಾ. ಬಿ.ಜನಾರ್ದನ ಭಟ್ ಅವರು. ಪ್ರಕಾಶಕರು ಕನ್ನಡ ಸಂಘ ಕಾಂತಾವರ.

ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದು ಒಟ್ಟು ನಲುವತ್ತನಾಲ್ಕು ಪುಟಗಳಿಂದ ಕೂಡಿದೆ. ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.

ಕಾರ್ಕಳ ತಾಲೂಕಿನ ಮುದ್ರಾಡಿ ಎಂಬಲ್ಲಿ 1935ರಂದು ಶ್ರೀ ಬೂಬ ಶೆಟ್ಟಿಗಾರ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಜನನ. ಶ್ರೀಯುತರು ಯಕ್ಷಗಾನಾಸಕ್ತರಾಗಿ ವೇಷಧಾರಿಯೂ  ತಾಳಮದ್ದಳೆ  ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು. ಅಂಬಾತನಯ ಮುದ್ರಾಡಿ ಅವರ ಹುಟ್ಟು, ಬಾಲ್ಯ, ಕಲಾವಿದನಾಗಿ ಸೇವೆ, ಲೇಖಕನಾಗಿ ಅವರು ಬೆಳೆದು ಬಂದ ರೀತಿ ಇತ್ಯಾದಿ ವಿಚಾರಗಳ ಬಗೆಗೆ ಈ ಪುಸ್ತಕದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಾಹಿತಿಗಳನ್ನು ನೀಡಿರುತ್ತಾರೆ.

ಮಾರ್ಗದಲ್ಲಿ ಹುಲಿ, ಕಾವ್ಯನಾಮದ ಕಾರಣ, ದನ ಕಾಯುವಲ್ಲಿಂದ ಶಾಲೆಗೆ, ಗುರುವೃಂದ, ಜೂನಿಯರ್ ಬೇಸಿಕ್ ಅಧ್ಯಾಪಕ, ಕವಿಯ ಸೆಳೆತ-ಹಿರಿಯ ಕವಿಗಳ ಸೆಳೆತ, ಯಕ್ಷಗಾನಾಸಕ್ತಿ-ಅರ್ಥಗಾರಿಕೆ, ಪ್ರಸಂಗ ಸಾಹಿತ್ಯ, ನಾಟಕಗಳು, ವಿಡಂಬನ ಸಾಹಿತ್ಯ, ಚಿಂತನ-ಅಮೃತವಚನ, ಭಜನೆಯ ಕವಿ, ಹರಿಕಥೆ-ಜಿನಕಥೆಗಳ ಕಡೆಗೆ, ಶಿಕ್ಷಕ ಸಂಘಟನೆ-ಸಂಪನ್ಮೂಲ ವ್ಯಕ್ತಿ, ತಾಯ್ನುಡಿ ತುಳು, ರವೀಂದ್ರ ಹೆಗ್ಗಡೆಯವರ ಆಪ್ತ,

ಸಾಹಿತ್ಯ ಪರಿಷತ್ತು-ಸಾಹಿತ್ಯ ಅಕಾಡೆಮಿ ಸಂಪರ್ಕ, ಸಮ್ಮೇಳನಾಧ್ಯಕ್ಷತೆ, ಸನ್ಮಾನ-ಪ್ರಶಸ್ತಿ, ಶಿಷ್ಯವೃಂದ, ಸಂಸಾರ, ಬ್ರಹ್ಮರಥ ಎಂಬ ವಿಚಾರಗಳಡಿ ವಿವರಗಳನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟರು ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಸಂಪಾದಕ ಡಾ. ಬಿ. ಜನಾರ್ದನ ಭಟ್ಟರು ಡಾ. ಪಾದೆಕಲ್ಲು ವಿಷ್ಣು ಭಟ್ಟರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments