Saturday, January 18, 2025
Homeಯಕ್ಷಗಾನಯಾವ ಪಾತ್ರವನ್ನಾದರೂ ಮಾಡಬಲ್ಲ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಯಾವ ಪಾತ್ರವನ್ನಾದರೂ ಮಾಡಬಲ್ಲ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಎಲ್ಲಾ ವೇಷಗಳನ್ನು  ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಆದರೂ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯದಿಂದ ಕೆಲವು ಕಲಾವಿದರು ಎಲ್ಲಾ ವೇಷಗಳನ್ನು ಮಾಡಲು ಹಿಂಜರಿಯುತ್ತಾರೆ.  ಕೆಲವೊಮ್ಮೆ ಯಾವುದೇ ವೇಷಗಳನ್ನು ಮಾಡಲು ಸಿದ್ಧರಾಗಿ ಆಪದ್ಭಾಂಧವರೆನಿಸಿಕೊಳ್ಳುವ  ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ.  ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. 

ಬೇಬಿ ಶೆಟ್ಟಿ ಮತ್ತು ಸಂಪಾವತೀ ದಂಪತಿಗಳ ಪುತ್ರನಾಗಿ  ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯಲ್ಲಿ   ಪ್ರಜ್ವಲ್ ಕುಮಾರ್ ಅವರು ಜನಿಸಿದರು. ಗುರುವಾಯನಕೆರೆ ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ  ಮಾಡಿದರೂ ಮನೆಯಲ್ಲಿ ಕಡುಬಡತನವಿದ್ದುದರಿಂದ ಓದನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಸೇರಿ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿ, ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿದರು. 

ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ನಿರ್ವಹಿಸಿದರು.  ಆಮೇಲೆ ಮುಂದಿನ ವರ್ಷಗಳಲ್ಲಿ ಮುಖ್ಯ ಸ್ತ್ರೀ ವೇಷ.  ಅಲ್ಲದೆ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಇದರ ಪರಿಣಾಮವನ್ನು ಅವರು ಅನುಭವಿಸಿದ್ದಾರೆ. ತಾಳಜ್ಞಾನ, ಲಯಸಿದ್ಧಿ ಇರುವ ಕಲಾವಿದನೆನಿಸಿಕೊಂಡುದು ಈ ಕಾರಣದಿಂದಲೇ ಆಗಿರಬೇಕು.  5 ವರ್ಷಗಳ ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಕ್ಕೆ ಸೇರಿದ್ದರು.  ‘ರಂಗನಾಯಕ’ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಕಟೀಲು ಮೇಳದಲ್ಲಿ 1 ವರ್ಷ.

ಫೋಟೋ: ಅನಿಲ್ ಎಸ್. ಕರ್ಕೇರ 

ಬಳಿಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳದಲ್ಲಿ 2 ವರ್ಷ. ಈ ಸಂದರ್ಭದಲ್ಲಿ ಅನೇಕ ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು.  ಬಳಿಕ ‘ರಂಗದರಾಜ’ ಶ್ರೀ ರಾಧಾಕೃಷ್ಣ ನಾವಡರು ಪ್ರಜ್ವಲ್ ಅವರನ್ನು ಎಡನೀರು ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದರು. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ ತಿರುಗಾಟ ನಡೆಸಿದ್ದರು. ತದನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಹಾಸ್ಯಪಾತ್ರಗಳನ್ನೂ ಚೆನ್ನಾಗಿ ಮಾಡಬಲ್ಲ ಪ್ರಜ್ವಲ್ ಅವರು ಧರ್ಮಸ್ಥಳ ಮೇಳದಲ್ಲಿ ಹಾಸ್ಯರತ್ನ ನಯನಕುಮಾರರು ಚೆನ್ನಾಗಿ ಹೇಳಿಕೊಡುತ್ತಿದ್ದರು. ಅಲ್ಲದೆ ಎಲ್ಲಾ ಕಲಾವಿದರಿಂದ ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ. ‘ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಕಾಣಬಹುದು’ ಎಂಬಂತೆ ಧರ್ಮಸ್ಥಳ ಮೇಳದಲ್ಲಿ ಬಾಲಕಲಾವಿದನಾಗಿದ್ದಾಗಲೇ ಇವರ ಪ್ರತಿಭೆಯನ್ನು ಎಲ್ಲರೂ ಗುರುತಿಸಿದ್ದರು. ನಂತರ ತಿರುಗಾಟ ನಡೆಸಿದ ಎಲ್ಲಾ ಮೇಳಗಳಲ್ಲೂ (ಕಟೀಲು, ಎಡನೀರು, ಕುಂಟಾರು, ಹೊಸನಗರ, ಹನುಮಗಿರಿ ಮೇಳ) ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು.

ತನ್ನ ಸ್ವಯಂ ಪ್ರತಿಭೆ ಮತ್ತು ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡು ಬೆಳೆದ ಕಲಾವಿದ ಪ್ರಜ್ವಲ್ ಕುಮಾರ್.  ಪ್ರತ್ಯುತ್ಪನ್ನಮತಿಯಾದ ಇವರು ವಿಷಯಗಳನ್ನು ಬಲುಬೇಗನೇ ಗ್ರಹಿಸಬಲ್ಲರು. ಪ್ರಸಂಗಜ್ಞಾನ, ರಂಗನಡೆ, ಪಾತ್ರದ ಸ್ವಭಾವ ಇವುಗಳನ್ನು ಅರಿತು ವೇಷಗಳನ್ನು ನಿರ್ವಹಿಸಬಲ್ಲ ಸಮರ್ಥ ಮಾತುಗಾರಿಕೆಯೂ ಶುದ್ಧ ಮತ್ತು ಬಲುಚೊಕ್ಕ. ಎಲ್ಲಾ ವೇಷಗಳಿಗೂ ಬೇಕಾದಂತಹ ಆಳಂಗ ಹೊಂದಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಬಣ್ಣದ ವೇಷಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ.  ಮಾತುಗಾರಿಕೆಯಲ್ಲಿ ಪ್ರಭುತ್ವ ಹೊಂದಿರುವುದರಿಂದ ಮತ್ತು ಪಾತ್ರದ ಸ್ವಭಾವವರಿತು ಅಭಿನಯಿಸಬಲ್ಲ ಸಾಮರ್ಥ್ಯ ಇರುವುದರಿಂದ ಧರ್ಮರಾಯ ಮೊದಲಾದ ಒಡ್ಡೋಲಗ ವೇಷಗಳನ್ನೂ, ನಾರದ, ಅಕ್ರೂರ ಮೊದಲಾದ ಸಾತ್ವಿಕ ಪಾತ್ರಗಳನ್ನೂ ಕೊರತೆಯಾಗದಂತೆ ತುಂಬುತ್ತಾರೆ.

ಫೋಟೋ: ಅನಿಲ್ ಎಸ್. ಕರ್ಕೇರ 

ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಳಮದ್ದಳೆ ವೇದಿಕೆಯಲ್ಲೂ ಅಪರೂಪಕ್ಕೆ ಕಾಣಿಸಿಕೊಂಡಿದ್ದಾರೆ. ಪ್ರತಿಭೆ ಮತ್ತು ಸಾಮರ್ಥ್ಯ ಇವೆರಡೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದರೆ ಇವರೊಬ್ಬ ಗ್ರೇಟ್ ಆಲೌರೌಂಡರ್ ಕಲಾವಿದರಾಗಿ ಮೆರೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.  “ಯಕ್ಷಗಾನವೆಂಬ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಅಭಿನಯಿಸಲು ಸಿಕ್ಕಿದ್ದು ನನ್ನ ಭಾಗ್ಯ. ಈ ವಿಚಾರದಲ್ಲಿ ನನಗೆ ಸಂತೋಷವಿದೆ. ನಾನು ಕಲಾವಿದನಾಗುತ್ತೇನೆ ಎಂದಾಗ ಪ್ರೋತ್ಸಾಹಿಸಿದವಳು ನನ್ನ ಅಕ್ಕ. ಕಲಾವಿದನಾಗಲು ನನಗೆ ಅವಳೇ ಪ್ರೇರಕ ಶಕ್ತಿ. ವಿವಾಹಿತೆಯಾಗಿ ದೂರದ ಬಹ್ರೈನ್‍ನಲ್ಲಿ ಉದ್ಯೋಗಿಯಾಗಿದ್ದರೂ ಅವಳು ಸದಾ ಪ್ರೋತ್ಸಾಹಿಸುತ್ತಾಳೆ” ಎಂದು ಪ್ರಜ್ವಲ್ ಹೇಳುತ್ತಾರೆ. 

ಪ್ರಜ್ವಲ್ ಅವರು ಒಟ್ಟು 23 ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವಿ. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಪ್ರತಿಭಾನ್ವಿತ ಕಲಾವಿದ.  “ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಇದ್ದರೆ ಯಾವ ಪ್ರಸಂಗವನ್ನಾದರೂ ಆಡಬಹುದು’’. ಖ್ಯಾತ ಕಲಾವಿದ ಉಜಿರೆ ಅಶೋಕ ಭಟ್ಟರ ಮಾತುಗಳು ಇವರ ಪ್ರತಿಭೆಗೆ ಸಿಕ್ಕ ಪುರಸ್ಕಾರ.  ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲೇಬೇಕು. ಆ ನಿಟ್ಟಿನಲ್ಲಿ ಪ್ರಜ್ವಲ್ ಅವರೂ ಯೋಚಿಸಬೇಕು. ಭವಿಷ್ಯದಲ್ಲಿ ತಾನೊಬ್ಬ Star ಕಲಾವಿದನಾಗುವ ಎಲ್ಲ ಸಾಧ್ಯತೆಗಳೂ ತೆರೆದೇ ಇರುವಾಗ ಅನ್ಯ ಯೋಚನೆಗಳ ಅಗತ್ಯವೇ ಇಲ್ಲ. ಗುರಿಯತ್ತ ಸಾಗುವಲ್ಲಿ ತೊಡಗಿಸಿಕೊಳ್ಳಬೇಕು.   ಪ್ರಜ್ವಲ್ ಅವರು ಪ್ರಸ್ತುತ ತನ್ನ ತಾಯಿ ಮತ್ತು ಸೊಸೆ   ಕು| ಕುಶಿ (೬ನೇ ತರಗತಿ) ಅವರೊಂದಿಗೆ ಗುರುವಾಯನಕೆರೆಯಲ್ಲಿ ನೆಲೆಸಿರುತ್ತಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ  

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments