Saturday, January 18, 2025
Homeಯಕ್ಷಗಾನಕಲೆ ಬೆಳಗಿಸುವ ಕಲಾಪೋಷಕರು - ಮುಳಿಯ ಶ್ಯಾಮ ಭಟ್

ಕಲೆ ಬೆಳಗಿಸುವ ಕಲಾಪೋಷಕರು – ಮುಳಿಯ ಶ್ಯಾಮ ಭಟ್

ಯಾವುದೇ ಒಂದು ಕಲಾಪ್ರಕಾರವಿರಲಿ, ಅದು ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ ಅಥವಾ ಇನ್ನುಳಿದ ಯಾವುದೇ ಪ್ರಸಿದ್ಧ ಕಲಾಪ್ರಾಕಾರಗಳೇ ಆಗಿರಲಿ. ಕಲೆಯನ್ನು ಉಳಿಸಿ ಬೆಳೆಸುವ ಹತ್ತು ಹಲವು ಕೈಗಳು ಇರಲೇ ಬೇಕು. ಕಲಾವಿದನಿಂದ ಮಾತ್ರ ಕಲೆ ಉಳಿಯಲಾರದು. ಪ್ರೇಕ್ಷಕನಿಂದ ಮಾತ್ರವೂ ಕೂಡಾ ಅಲ್ಲ.

ಆ ಕಲೆಗೆ ಪ್ರೋತ್ಸಾಹಿಸುವ ಪ್ರೇಕ್ಷಕ, ಸಂಘಟಕರಲ್ಲದೆ ಕಲಾಪೋಷಕರ ಪಾತ್ರವೂ ಕಲೆಯ ಉಳಿವಿನಲ್ಲಿ, ಬೆಳವಣಿಗೆಯಲ್ಲಿ ಮಹತ್ತರವಾದುದು. ನಮ್ಮ ನಡುವೆ ಅಂತಹ ಕಲಾಪೋಷಕರು ಹಲವಾರು ಮಂದಿ ಇದ್ದಾರೆ. ಅಂತಹಾ ಮಹನೀಯರ ಅಗ್ರಗಣ್ಯರ ಸಾಲಿನಲ್ಲಿ ಶ್ರೀ ಮುಳಿಯ ಶ್ಯಾಮ ಭಟ್ ಅವರೂ ಒಬ್ಬರು. ಸರಾಫ್ ಮುಳಿಯ ಶ್ಯಾಮ ಭಟ್ ಅವರ ಹೆಸರು ಊರ ಪರವೂರ ಕಲಾಭಿಮಾನಿಗಳಿಗೆ ಮತ್ತು ಕಲಾವಿದರಿಗೆ ಚಿರಪರಿಚಿತ. ಮಾತ್ರವಲ್ಲದೆ ಸ್ವರ್ಣೋದ್ಯಮಿಯಾಗಿ ಸಾಕಷ್ಟು ಹೆಸರನ್ನು ಮಾಡಿದವರು. ಅವರು ಉದ್ಯಮಿಯಾಗಿ ಯಶಸ್ಸನ್ನು ಗಳಿಸುವುದರ ಜೊತೆಗೆ ತಾನು ಸಂಪಾದಿಸಿದ ಮೊತ್ತದಲ್ಲಿ ಒಂದಂಶವನ್ನು ದಾನ ಧರ್ಮಾದಿಗಳಿಗೆ ವಿನಿಯೋಗಿಸಿದವರು. ಕಲೆ, ಸಂಸ್ಕೃತಿ, ವಿದ್ಯಾಭ್ಯಾಸ ಮೊದಲಾದ ಕ್ಷೇತ್ರಗಳಿಗೆ ಸಹಾಯಹಸ್ತ ನೀಡಿದವರು.

ಶ್ರೀ ಮುಳಿಯ ಶ್ಯಾಮ ಭಟ್

ಮುಳಿಯ ಶ್ಯಾಮ ಭಟ್ಟರು ಉದ್ಯಮಿಯಾಗಿ ಹೇಗೆ ಅಥವಾ ಅವರ ಉದ್ಯಮ, ವ್ಯವಹಾರಗಳ ಬಗ್ಗೆ ಹೇಳುವುದು ಇಲ್ಲಿ ನನ್ನ ಉದ್ದೇಶವಲ್ಲ. ಆ ಬಗ್ಗೆ ಇನ್ನೊಮ್ಮೆ ಇನ್ನೊಂದು ಮಾಧ್ಯಮದಲ್ಲಿ ಬರೆಯುವೆ.  ಹೌದು. ಮುಳಿಯ ಶ್ಯಾಮ ಭಟ್ಟರು ಸಂಗೀತಾದಿ ರಂಗ ಕಲೆಗಳಲ್ಲಿ ಅತೀವ ಆಸಕ್ತಿ ಉಳ್ಳವರು. ತಾನು ಸ್ವತಃ ಸಾಹಿತಿಯಾಗಿ ಹಲವಾರು ಲೇಖನಗಳನ್ನೂ ಬರೆದವರು. ಹೆಚ್ಚಿನೆಲ್ಲಾ ಕಲಾ ಪ್ರದರ್ಶನಗಳಲ್ಲಿ ಮೊದಲ ಸಾಲಿನ ಪ್ರೇಕ್ಷಕರು. ಪುತ್ತೂರಿನ ಕಲಾ ಸಂಬಂಧಿತ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಅಧ್ಯಕ್ಷರಾಗಿಯೋ ಅಥವಾ ಮುಖ್ಯ ಅತಿಥಿಗಳಾಗಿಯೋ ಇವರಿಗೊಂದು ಸ್ಥಾನ ಇದ್ದೇ ಇರುತ್ತದೆ. ಅದರಲ್ಲಿಯೂ ಯಕ್ಷಗಾನವೆಂದರೆ ಇವರಿಗೆ ಬಲು ಪ್ರೀತಿ. ಎಷ್ಟೋ ಯಕ್ಷಗಾನದ ಪ್ರದರ್ಶನಗಳಿಗೆ ಇವರ ಸಹಾಯಹಸ್ತ ಇರುತ್ತಿತ್ತು. ಎಷ್ಟೋ ಬಾರಿ ಆಟ ಆಡಿಸುವ ಸಂಘಟಕರು ಮತ್ತು ಕಲಾವಿದರು ಇವರಿಂದ ಅಥವಾ ಇವರ ವ್ಯವಹಾರ ಸಂಸ್ಥೆಯಿಂದ ಸಹಾಯವನ್ನು ಪಡೆದ ಪ್ರಸಂಗಗಳಿವೆ.

ಜಾಹೀರಾತು

ಪುತ್ತೂರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳ ಸಪ್ತಾಹಗಳಲ್ಲಿ ಆಟ ಆಡಿಸುವ ಮಹನೀಯರಲ್ಲಿ ಶ್ಯಾಮ ಭಟ್ ಅವರೂ ಒಬ್ಬರು. ಹೆಚ್ಚಿನ ಸಪ್ತಾಹಗಳಲ್ಲಿ ಒಂದು ದಿನದ ಸೇವಾಕರ್ತರಾಗಿ ಮುಳಿಯ ಶ್ಯಾಮ ಭಟ್ಟರ ಹೆಸರಿರುತ್ತಿತ್ತು.  ಹಲವಾರು ಬಾರಿ ಸಂಘಟಕರು ಯಕ್ಷಗಾನದ ಪ್ರದರ್ಶನ ನಿಗದಿಪಡಿಸಿದ ನಂತರ ಇವರಿಂದ ಅಥವಾ ಇವರ ಉದ್ಯಮ ಸಂಸ್ಥೆಯಿಂದ ಉದಾರವಾದ ಸಹಾಯಧನವನ್ನು ಪಡೆಯಲು ಸಂಪರ್ಕಿಸಿದಾಗ ಶ್ರೀಯುತರು ಸಂತೋಷದಿಂದಲೇ ಪ್ರೋತ್ಸಾಹಿಸಿದ್ದಾರೆ. ಹೀಗೆ ಒಂದು ಕಲೆ ಉಳಿಯಬೇಕಾದರೆ ಅದಕ್ಕೆ ಪ್ರೋತ್ಸಾಹಿಸುವ ಹಲವಾರು ಕೈಗಳು ಬೇಕಾಗುತ್ತದೆ. ಅಂತಹಾ ಕಲಾಪೋಷಕ ಮಹನೀಯರಿಂದ ಇಂದು ಯಕ್ಷಗಾನ ಶ್ರೀಮಂತವಾಗಿದೆ. ಶ್ರೀ ಮುಳಿಯ ಶ್ಯಾಮ ಭಟ್ಟರಂತಹಾ ಹಲವಾರು ಕಲಾಪೋಷಕರು ಕೂಡಾ ಕಲೆಯ ಒಂದು ಅಂಗವಾಗಿ ಈ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments