Saturday, January 18, 2025
Homeಪುಸ್ತಕ ಮಳಿಗೆಕುತ್ಯಾಳ ಸಂಪದ - ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ

ಕುತ್ಯಾಳ ಸಂಪದ – ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ

‘ಕುತ್ಯಾಳ ಸಂಪದ ಎಂಬ ಈ ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಅನುಪಮವಾದ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ ಓದುಗರ ಕೈ ಸೇರಿದೆ. ಇದು ಪ್ರಕಟವಾದುದು 1997ರಲ್ಲಿ.  ಪ್ರಕಾಶಕರು, ಶ್ರೀ ಗೋಪಾಲಕೃಷ್ಣ ಪ್ರಕಾಶನ, ಕೂಡ್ಲು, ಕಾಸರಗೋಡು. ಸಂಪಾದಕರು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ. ಇದು ನೂರಾ ಐವತ್ತಮೂರು ಪುಟಗಳಿಂದ ಕೂಡಿದೆ. ಶೃಂಗೇರಿ ಜಗದ್ಗುರುಗಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ. ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮತ್ತು ಶ್ರೀ ಕೆ. ನಾರಾಯಣ ಶ್ಯಾನುಭಾಗರ ಶುಭ ಸಂದೇಶಗಳನ್ನೂ ನೀಡಿರುತ್ತಾರೆ.

‘ಕುತ್ಯಾಳ ಸಂಪದ’ ಎಂಬ ಈ ಆಕರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದವರು ಶ್ರೀ ವೆಂಕಟರಾಜ ಪುಣಿಂಚತ್ತಾಯರು. ‘ಪ್ರಕಾಶನದ ಪರವಾಗಿ’ ಎಂಬ ಬರಹವನ್ನು ನೀಡಲಾಗಿದೆ. ಸಂಪಾದಕ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ‘ಎರಡು ಮಾತು’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಈ ಆಕರ ಗ್ರಂಥವು ಮೂರು ವಿಭಾಗಗಳಿಂದ ಕೂಡಿದೆ. ಭಾಗ ಒಂದು-ಸಂಶೋಧನೆ. ಇಲ್ಲಿ ಕೂಡ್ಲು ಶ್ಯಾನುಭಾಗ ಮನೆತನದ ಇತಿಹಾಸವನ್ನು ನೀಡಲಾಗಿದೆ. ಭಾಗ ಎರಡು-ಸಂಪಾದನೆ. ಇಲ್ಲಿ ಮಿಂಚಿ ಮರೆಯಾದ ವೈವಿಧ್ಯಮಯ ಪ್ರತಿಭೆಗಳು, ಅವಿಸ್ಮರಣೀಯ ಘಟನೆಗಳು, ಧರ್ಮ-ಕಲೆ-ಸಂಸ್ಕೃತಿಗಳ ಬಗೆಗೆ ಮಾಹಿತಿಗಳನ್ನು ನೀಡಿದ್ದಾರೆ. ಭಾಗ ಮೂರು-ಸಂಸ್ಮರಣೆ. ಈ ವಿಭಾಗದಲ್ಲಿ ಕಲಾವಿದ ಶ್ರೀ ಗೋಪಾಲಕೃಷ್ಣ ಶ್ಯಾನುಭಾಗರ ಜೀವನ ಸಾಧನೆಗಳ ವಿವರಗಳಿವೆ. ಇಲ್ಲಿ ಒಟ್ಟು ಹನ್ನೊಂದು ಲೇಖನಗಳಿದ್ದು ಬರೆದವರು ಎಂ.ವಿ. ಬಳ್ಳುಳ್ಳಾಯ, ದೇಶಮಂಗಲ ಕೃಷ್ಣ ಕಾರಂತ, ಮಧೂರು ಗಣಪತಿ ರಾವ್, ಕೆ. ಎನ್. ಕೊಳ್ಕೆಬೈಲು, ಎಂ.ವ್ಯಾಸ, ಕೆ.ಸುಕುಮಾರನ್, ಕಲ್ಮಾಡಿ ಸದಾಶಿವ ಆಚಾರ್ಯ, ಎಚ್. ವಿಷ್ಣು ಭಟ್, ಎ. ಮಹಾಲಿಂಗ ಭಟ್, ಕೆ.ಪಿ.ತಿಮ್ಮಪ್ಪ ಶೆಟ್ಟಿ, ಮತ್ತು ವಿಠಲದಾಸ್ ಕೆ. ಅವರುಗಳು.

ವಿಭಾಗ ಎರಡರಲ್ಲಿ ಶ್ರೀ ಕಯ್ಯಾರ ಕಿಂಞಣ್ಣ ರೈ, ಸಿರಿಬಾಗಿಲು ವೆಂಕಪ್ಪಯ್ಯ, ಕೆ. ಗೋಪಾಲಕೃಷ್ಣ ಶ್ಯಾನುಭಾಗ, ಕೊರಕ್ಕೋಡು ಈಶ್ವರ ಭಾಗವತ, ಪಟ್ಟಾಜೆ ವೆಂಕಟ್ರಮಣ ಭಟ್ಟ, ಶಾನ್ ಕಾಸರಗೋಡು, ಮಾಯಾ ಕೇಶವ ಶ್ಯಾನುಭಾಗ್, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಚಂದ್ರಗಿರಿ ಅಂಬು, ಬಣ್ಣದ ಮಹಾಲಿಂಗ, ಕೂಡ್ಲು ಶಂಭು ಬಲ್ಯಾಯ, ಅಶೋಕ ಭಟ್ ಉಜಿರೆ, ಸುಬ್ರಾಯ ಅನಂತಪುರ, ಭಗವಾನ್ ದಾಸ್ ಕೂಡ್ಲು, ಗಂಗೆ ಬಾಬು ನಾಯ್ಕ್, ಯುಮುನಾ ಮೆರ್ಟ, ಪುರುಷೋತ್ತಮ ಪೈಕ, ವಿಜಯಲಕ್ಷ್ಮೀ ಶ್ಯಾನುಭಾಗ್, ರೇಖಾ ಮಂಜುನಾಥ್, ಕೂಡ್ಲು ಬಾಬು ಭಂಡಾರಿ, ಕಿರಣ ರವೀಂದ್ರನಾಥ್, ಡಿ. ಕೃಷ್ಣ ಕಾರಂತ, ಪೂಕರೆ ಮೋಹನ ನಾಯ್ಕ್, ಉಪ್ಪಳ ಕೃಷ್ಣ ಮಾಸ್ತರ್, ಕಸ್ತೂರಿ ಕೃಷ್ಣ ರಾವ್ ಇವರುಗಳ ಲೇಖನಗಳನ್ನು ನೀಡಲಾಗಿದೆ. ಮೊದಲ ಭಾಗ ಸಂಶೋಧನೆಯಲ್ಲಿ ಕೂಡ್ಲು ಮೇಳ, ಮೇಳದ ಪ್ರದರ್ಶನಗಳು, ಮೇಳದಲ್ಲಿ  ತಿರುಗಾಟ, ಕಲಾವಿದರುಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments