Saturday, January 18, 2025
Homeಯಕ್ಷಗಾನಬಡಗು ತಿಟ್ಟಿನ ಕಲಾ ತಪಸ್ವಿ ಕೊಳಗಿ ಅನಂತ ಹೆಗಡೆ (Kolagi Anantha Hegade)

ಬಡಗು ತಿಟ್ಟಿನ ಕಲಾ ತಪಸ್ವಿ ಕೊಳಗಿ ಅನಂತ ಹೆಗಡೆ (Kolagi Anantha Hegade)

ಬಡಗು ತಿಟ್ಟಿನ ಹಿರಿಯ ಕಲಾಭಿಮಾನೀ ಪ್ರೇಕ್ಷಕರಿಂದ ಪ್ರೀತಿ ಗೌರವಗಳ ಸಂಕೇತವಾಗಿ ‘ಅನಂತಣ್ಣಾ’ ಎಂದೇ ಕರೆಸಿಕೊಂಡವರು ಕೊಳಗಿ ಅನಂತ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾವಿದರಾಗಿ ಮೆರೆದವರಿವರು. ಮಾಧ್ಯಮಗಳೂ ವಾಹನಗಳೂ ಇಲ್ಲದ ಕಾಲ ಅದು. ಯಕ್ಷಗಾನ ಪ್ರದರ್ಶನಗಳಿಗೆ  ನಡೆದೇ ಸಾಗಬೇಕಾಗಿತ್ತು. ಆದರೂ ಅನೇಕ ಕಲಾವಿದರು ರಂಗದಲ್ಲಿ ಚೆನ್ನಾಗಿ ಅಭಿನಯಿಸಿ, ರಂಗವನ್ನೇ ಮಾಧ್ಯಮವಾಗಿ ತಮ್ಮ ಪ್ರತಿಭೆಯನ್ನು ಮೆರೆಸಿ ಪ್ರೇಕ್ಷಕರ ಮನವನ್ನು ಗೆದ್ದಿದ್ದರು.

ಅಂತಹಾ ಶ್ರೇಷ್ಠ ಕಲಾವಿದರಲ್ಲೊಬ್ಬರು ಕೊಳಗಿ ಅನಂತ ಹೆಗಡೆಯವರು. ಯಾವ ಪಾತ್ರಗಳನ್ನೂ ಮಾಡಬಲ್ಲ ಸಾಹಸಿಯಾಗಿದ್ದರು. ಆದರೂ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನಗತ್ಯ ಎನಿಸುವಷ್ಟು ಸಪ್ಪೆ ಆಗಿರುತ್ತಿದ್ದ ಪೋಷಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದು ಇವರ ಹೆಚ್ಚುಗಾರಿಕೆ. ಸಾಧನೆಯೂ ಹೌದು. ಅನಂತಣ್ಣ ಮಾಡುವುದಾದರೆ ಆ ಪಾತ್ರ ಬೇಕೇ ಬೇಕು ಎಂದು ಮುಖ್ಯ ಪಾತ್ರವನ್ನು ನಿರ್ವಹಿಸುವ ಕಲಾವಿದರು ಹೇಳುತ್ತಿದ್ದರು ಎಂದಾದರೆ ಕೊಳಗಿ ಅವರ ಪ್ರತಿಭೆ ಅದೆಷ್ಟು ಅಗಾಧವಾದುದು ಎಂಬುದನ್ನು ನಾವು ಊಹಿಸಬಹುದು. ಕೊಳಗಿ ಅನಂತ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಪರಮೇಶ್ವರ ಹೆಗಡೆ ಮತ್ತು ಜಾನಕಿ ದಂಪತಿಗಳಿಗೆ ಮಗನಾಗಿ 1938 ಜುಲೈ 7ರಂದು ಜನಿಸಿದರು. ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಸವಳಿದರು. ವಿದ್ಯಾರ್ಜನೆಗೂ ಹೆಚ್ಚಿನ ಅವಕಾಶ ಇರಲಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಓದದಿದ್ದರೂ ಕೊಳಗಿ ಅನಂತ ಹೆಗಡೆಯವರು ವಿಶ್ವವೆಂಬ ವಿದ್ಯಾನಿಲಯದಲ್ಲಿ ಚೆನ್ನಾಗಿಯೇ ಓದಿ ಅತ್ಯುನ್ನತ ಪದವಿಯನ್ನು ಪಡೆದಿದ್ದರು. ಇವರಿಗೆ ದಿ| ಕೊಳಗಿ ಸೀತಾರಾಮ ಭಾಗವತರೇ ಗುರುಗಳಾಗಿ ಒದಗಿ ಬಂದಿದ್ದರು. ಅವರಿಂದ ನಾಟ್ಯ ಮಾತುಗಾರಿಕೆ ಕಲಿತು ತನ್ನ 16ನೆಯ ವಯಸ್ಸಿನಲ್ಲಿ 1954ನೇ ಇಸವಿಯಲ್ಲಿ ರಂಗ ಪ್ರವೇಶ ಮಾಡಿದರು.

1958ರಲ್ಲಿ ಬಾಲ್ಯ ಸ್ನೇಹಿತ, ಒಡನಾಡಿ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಜತೆ ಸೇರಿ ಕೊಳಗಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾ ಸಂಘ, ಶಿರಳಗಿ ಎಂಬ ತಂಡವನ್ನೇ ಕಟ್ಟಿದ್ದರು. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡರೂ ಧೈರ್ಯಗುಂದದೆ, ಮಾನಸಿಕ ದೃಢತೆಯನ್ನು ಹೊಂದಿ ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೊಳಗಿ ಅನಂತ ಹೆಗಡೆಯವರು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿ ಮೆರೆದವರು. ಪಾತ್ರದ ಚೌಕಟ್ಟು, ಔಚಿತ್ಯಗಳನ್ನು ಮೀರಿ ವ್ಯವಹರಿಸಿದವರಲ್ಲ. ಎಂತಹ ಶ್ರೇಷ್ಠ ಕಲಾವಿದನಾದರೂ ಒಮ್ಮೊಮ್ಮೆ ಮೇರೆ ಮೀರಿ ವ್ಯವಹರಿಸಿದ್ದುಂಟು. ಅದಕ್ಕೆ ಕಾರಣಗಳು ಹಲವಿರಬಹುದು. ಉತ್ಸಾಹದಲ್ಲಿ ನಟಿಸುವ ಭರದಲ್ಲಿ  ತಮಗೆ ಅರಿಯದೇ ಪಾತ್ರದ ಮೇರೆ ಮೀರಿ ಅಭಿನಯಿಸುವುದೂ ಇದೆ. ಮತ್ತೆ ಅದು ಅವರ ಅರಿವಿಗೆ ಬಂದು ಎಚ್ಚರ ವಹಿಸುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರನ್ನು ಸೆಳೆಯುವ ಕಾರಣದಿಂದಲೂ ಹೀಗಾಗುತ್ತದೆ. ಬಹುಬೇಗನೆ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೂ ಪಾತ್ರದ ಸ್ವಭಾವವನ್ನು ಮೀರಿ ಅಭಿನಯಿಸುವ ಕಲಾವಿದರಿರುತ್ತಾರೆ. ಆದರೆ ಕೊಳಗಿ ಅನಂತ ಹೆಗಡೆಯವರು ಅಪ್ಪಿತಪ್ಪಿ ಒಂದು ಬಾರಿಯೂ ಪಾತ್ರದ ಔಚಿತ್ಯವನ್ನು ಮೀರಿ ಅಭಿನಯಿಸಿದವರಲ್ಲ ಎಂಬುದು ಅವರ ವೇಷಗಳನ್ನು ನೋಡಿದ ಹಿರಿಯ ಪ್ರೇಕ್ಷಕರ ಅನುಭವದ ಮಾತುಗಳು.

ಸಂದರ್ಭಕ್ಕೆ ತಕ್ಕ ಮಾತುಗಳನ್ನು ಆಡುವ ತನ್ನ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರ ಮನಸ್ಸನ್ನು ಬಹುಬೇಗನೆ ಗೆದ್ದಿದ್ದರು. ಗದಾಯುದ್ಧದಲ್ಲಿ ಕೌರವ ಮತ್ತು ಭೀಮನ ಪಾತ್ರಗಳೇ ರಂಜಿಸುವುದು. ಕೊಳಗಿ ಅನಂತ ಹೆಗಡೆಯವರು ಧರ್ಮರಾಯನ ಪಾತ್ರವೂ ಹೊಳೆದು ಕಾಣಿಸಿಕೊಳ್ಳುವುದಕ್ಕಾಗುತ್ತದೆ ಎಂದು ತೋರಿಸಿಕೊಟ್ಟವರು. ಗದಾಯುದ್ಧ ಪ್ರಸಂಗದ ಸಂಜಯ, ಕಂಸವಧೆ ಪ್ರಸಂಗದ ಅಕ್ರೂರ ಮೊದಲಾದ ಪಾತ್ರಗಳಿಗೆ ಜೀವ ತುಂಬಿದ್ದರು. ಕೊಳಗಿ ಅನಂತ ಹೆಗಡೆಯವರು ಇದ್ದಷ್ಟು ಸಮಯ ಆ ಪಾತ್ರ ಬೇರೆ ಕಲಾವಿದರ ಪಾಲಾಗುತ್ತಿರಲಿಲ್ಲ. ಅಂದರೆ ಆ ಪಾತ್ರಗಳನ್ನೂ ಅವರೆಷ್ಟು ಸೊಗಸಾಗಿ ನಿರ್ವಹಿಸುತ್ತಿದ್ದಿರಬಹುದು?! ಕೃಶವಾದ ಶರೀರ, ನಿರಾಡಂಬರ ಬದುಕು, ಶುಭ್ರವಾದ ಉಡುಗೆ, ಸರಳ  ಜೀವನ, ಸೌಜನ್ಯಶೀಲ ಗುಣಗಳಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಕೊಳಗಿ ಅನಂತ ಹೆಗಡೆಯವರು ಗುಂಡಬಾಳಾ ಮೇಳದಲ್ಲಿ ಮೊದಲು ತಿರುಗಾಟ ನಡೆಸಿದ್ದು. ಬಳಿಕ ಇಡಗುಂಜಿ, ಅಮೃತೇಶ್ವರೀ, ಮುಲ್ಕಿ, ಪೆರ್ಡೂರು, ಸಾಲಿಗ್ರಾಮ, ಬಚ್ಚಗಾರು, ಶಿರಸಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಒಟ್ಟು 24 ವರ್ಷಗಳ ಕಾಲ ತಿರುಗಾಟ. ಬಳಿಕ ತಾವೇ ಸ್ಥಾಪಿಸಿದ ಕೊಳಗಿ ಶಿರಳಗಿ ಮೇಳದಲ್ಲಿ ಅಭಿನಯಿಸುತ್ತಿದ್ದರು. ಶ್ರೀರಾಮ, ಸಂಜಯ, ವಿದುರ, ಅಕ್ರೂರ, ಕನಕಾಂಗಿ ಕಲ್ಯಾಣದ ಬಲರಾಮ, ಋತುಪರ್ಣ, ನಾರದ, ಧರ್ಮರಾಯ, ಶಲ್ಯ, ಯೌಗಂಧರಾಯಣ ಮೊದಲಾದ ಪಾತ್ರಗಳು ಇವರಿಗೆ ಅಪಾರ ಖ್ಯಾತಿಯನ್ನು ತಂದು ಕೊಟ್ಟಿತ್ತು.

ಊರ ಪರವೂರ ತಾಳಮದ್ದಳೆಗಳಲ್ಲಿ ಭಾಗವಹಿಸಿದರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಲಾವಿದರೊಂದಿಗೆ ಆ ಕಾಲದಲ್ಲಿ ಅರ್ಥ ಹೇಳಿದ್ದರು. ಇವರು ನಿರ್ವಹಿಸಿದ ಪಾತ್ರಗಳು ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಕೆರೆಮನೆ ಮೇಳದಲ್ಲಿ ಶಂಭು ಹೆಗಡೆಯವರ ಎಲ್ಲಾ ಪಾತ್ರಗಳಿಗೂ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಶಂಭು ಹೆಗಡೆ ಅವರ ಕರ್ಣ, ಕೊಳಗಿ ಅನಂತ ಹೆಗಡೆ ಅವರ ಶಲ್ಯ. ಈ ಜೋಡಿಯನ್ನು ಕಲಾಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದರು. ಇನ್ನೂ ಅನೇಕ ಪ್ರಸಂಗಗಳಲ್ಲಿ ಇವರೀರ್ವರೂ ಜತೆಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಕೆರೆಮನೆ ಮೇಳದ ಪ್ರದರ್ಶನದ ಸಂದರ್ಭ ಬಹುಶಃ ಸಿದ್ಧಾಪುರದಲ್ಲೇ ಆಗಿರಬೇಕು. ಕೊಳಗಿ ಅನಂತ ಹೆಗಡೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಮಾತನಾಡುತ್ತಾ ಕೆರೆಮನೆ ಶಂಭು ಹೆಗಡೆಯವರು “ಓರ್ವ ನಟನಾಗಿ ಕೆರೆಮನೆ ಮೇಳದಲ್ಲಿ ದುಡಿದ ಅನಂತ ಹೆಗಡೆ ನನ್ನ ಕಷ್ಟ ಕಾಲದಲ್ಲಿ, ಅಣ್ಣ ಮರಣ ಹೊಂದಿದ ದುಃಖದ ಸಮಯದಲ್ಲಿ ಮಾನಸಿಕ ಬಲ ಕೊಟ್ಟವರು. ಕೇವಲ ಕಲಾವಿದನಾಗಿರದೆ ಕುಟುಂಬ ಮಿತ್ರನಂತಿದ್ದರು. ಚಾರಿತ್ರ್ಯ ಶುದ್ಧತೆ ಇವರ ಪ್ರಮುಖ ಅಂಶ. ನಮ್ಮ ಮೇಳದ ಕಲಾವಿದ ಕೊಳಗಿ ಅನಂತ ಹೆಗಡೆಯವರಿಗೆ ಇಂದು ಸನ್ಮಾನ ನಡೆಯುತ್ತಿರುವುದಕ್ಕೆ ಹೃದಯ ತುಂಬಿದೆ. ನನ್ನ ಜೊತೆ ಪಾತ್ರಗಳಲ್ಲಿ ಕರ್ಣನ ಪಾತ್ರಕ್ಕೆ ಅನಂತ ಹೆಗಡೆಯವರಷ್ಟು ಒಳ್ಳೆಯ ಪಾತ್ರಧಾರಿ ಬೇರಾರೂ ಸಿಕ್ಕಿಲ್ಲ” ಎಂದು ಹೇಳಿದ್ದರು.

ಹಿತಮಿತ ಮಾತುಗಾರಿಕೆ, ಅತ್ಯುತ್ತಮ ವೇಷಗಾರಿಕೆ, ಉತ್ತಮ ನಾಟ್ಯ ಅಭಿನಯಗಳಿಂದಲೇ ಕಲಾರಸಿಕರ ಮನಗೆದ್ದವರು ಕೊಳಗಿ ಅನಂತ ಹೆಗಡೆಯವರು. ಇವರು ಅಭಿನಯಿಸಿದ ದಕ್ಷಯಜ್ಞ, ಸುಧನ್ವಾರ್ಜುನ ಪ್ರಸಂಗಗಳು ಹೈದರಾಬಾದ್ ಮತ್ತು ಬೆಂಗಳೂರು ದೂರದರ್ಶನಗಳಲ್ಲಿ ಅನೇಕ ಬಾರಿ ಪ್ರಸಾರಗೊಂಡಿವೆ. ಸುಮಾರು ಹದಿನೈದಕ್ಕೂ ಅಧಿಕ ಧ್ವನಿಸುರುಳಿಗಳಲ್ಲೂ ಇವರ ಅರ್ಥಗಾರಿಕೆ ಮುದ್ರಿಸಲ್ಪಟ್ಟಿತ್ತು. ಸಂಗ್ರಹಕಾರರಲ್ಲಿ ಇದು ಈಗಲೂ ಇರಲೂ ಬಹುದು. ಕೊಳಗಿ ಅನಂತ ಹೆಗಡೆ ಅವರು ಈಗ ನಮ್ಮೊಡನೆ ಇಲ್ಲದಿದ್ದರೂ ಅವರ ನೆನಪುಗಳು ಶಾಶ್ವತ. ಅವರ ಪುತ್ರ ಕೊಳಗಿ ಕೇಶವ ಹೆಗಡೆ ಅವರು ಬಡಗು ತಿಟ್ಟಿನ ಖ್ಯಾತ ಭಾಗವತರಾಗಿ ಜನಪ್ರಿಯರಾಗಿರುವುದು ನಮಗೆಲ್ಲಾ ಸಂತಸ ತರುವ ವಿಚಾರ. ಬಡಗು ತಿಟ್ಟಿನ ಕಲಾತಪಸ್ವಿ ಕೊಳಗಿ ಅನಂತ ಹೆಗಡೆ ಅವರಿಗೆ ನುಡಿ ನಮನಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments