ಯಕ್ಷಗಾನ ರಂಗದ ಅತ್ಯಂತ ಹಿರಿಯರಾದ ಬಡಗುತಿಟ್ಟಿನ ಖ್ಯಾತ ಮದ್ದಳೆಗಾರರಾದ ಯಕ್ಷಗಾನದ ದಂತಕತೆ, ಶತಾಯುಷಿ ಹಿರಿಯಡಕ ಗೋಪಾಲ ರಾವ್ ನಿಧನರಾಗಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರಿಗೆ 101 ವರ್ಷ ವಯಸ್ಸಾಗಿತ್ತು. 1919 ರಲ್ಲಿ ಜನಿಸಿದ್ದ ಹಿರಿಯಡಕ ಗೋಪಾಲ ರಾವ್ ಅವರು ಬಡಗುತಿಟ್ಟಿನಲ್ಲಿ ಏರು ಶ್ರುತಿಯ ಮದ್ದಳೆಯನ್ನು ಮೊದಲಾಗಿ ಪರಿಚಯಿಸಿದವರು ಮತ್ತು ಅದನ್ನು ನುಡಿಸುವುದರಲ್ಲಿ ನಿಷ್ಣಾತರಾಗಿದ್ದರು.
ಯಕ್ಷಗಾನದ ಹಲವು ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ನಿರತರಾಗಿದ್ದ ಡಾ. ಶಿವರಾಮ ಕಾರಂತರ ಜೊತೆ ಒಡನಾಡಿಯೂ ಆಗಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಮಾತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು. ಮೃತರ ಅಂತ್ಯಕ್ರಿಯೆ ಇಂದು ಹಿರಿಯಡಕದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.