‘ಚೆಂಡೆ ಮದ್ದಲೆಗಳ ನಡುವೆ’ ಎಂಬ ಈ ಕೃತಿಯು ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಗುರು ಶ್ರೀ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮ ಕಥನವಾಗಿ ಪ್ರಕಟವಾಗಿತ್ತು. ಇದು ಓದುಗರ ಕೈ ಸೇರಿದ್ದು 2004ರಲ್ಲಿ. ಪ್ರಕಾಶಕರು ಕಾಂತಾವರ ಕನ್ನಡ ಸಂಘ. “ತಮ್ಮ ನಿಡುಗಾಲದ ಬನ್ನ ಬವಣೆಯ ಜೀವನದ ಹಿನ್ನೆಲೆಯನ್ನು ಕಲಾವಿದನ ಕಣ್ಣಿನಿಂದ ಅವರು ಚಿತ್ರಿಸಿದ ಅವರ ಆತ್ಮಕತೆ ‘ಚೆಂಡೆ ಮದ್ದಲೆಗಳ ನಡುವೆ’ ಅಪರೂಪದ ಜೀವನ ದೃಷ್ಟಿಯಿಂದ, ಶ್ರದ್ಧೆ ಮತ್ತು ಸಾಹಸಗಳಿಂದ ರೋಪುಗೊಂಡ ಕಲಾವಿದನೊಬ್ಬನ ಬದುಕನ್ನು ಹೃದ್ಯವಾಗಿ ಅನಾವರಣಗೊಳಿಸುವ ಕೃತಿಯಾಗಿದೆ”. ಡಾ. ನಾ. ಮೊಗಸಾಲೆಯವರು ಈ ಆತ್ಮಕಥನದ ಬಗೆಗೆ ವ್ಯಕ್ತಪಡಿಸಿದ ಅನಿಸಿಕೆಯಿದು. ಇದು ಒಟ್ಟು ನೂರಾ ಐವತ್ತೆಂಟು ಪುಟಗಳನ್ನು ಹೊಂದಿದ ಪುಸ್ತಕವು.
ಮೊದಲಾಗಿ ಕನ್ನಡ ಸಂಘ ಕಾಂತಾವರ ಈ ಸಂಸ್ಥೆಯ ಪರಿಚಯ ಲೇಖನವನ್ನು ನೀಡಲಾಗಿದೆ. ಬಳಿಕ ‘ಲೇಖಕನ ಮಾತು’ ಎಂಬ ಶೀರ್ಷಿಕೆಯಡಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಈ ಕೃತಿಯನ್ನು ತಮ್ಮ ತಂದೆ ತಾಯಿಯರಿಗೆ ಅರ್ಪಿಸಿರುತ್ತಾರೆ. ಡಾ| ಸತ್ಯನಾರಾಯಣ ಮೈಸೂರು ಮತ್ತು ಹರಿದಾಸ ಮಲ್ಪೆ ರಾಮದಾಸ ಸಾಮಗರ ಸಂದೇಶಗಳನ್ನೂ ನೀಡಿರುತ್ತಾರೆ.
ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಶ್ರೇಷ್ಠ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ ‘ಚೆಂಡೆ ಮದ್ದಳೆಗಳ ನಡುವೆ’ ಎಂಬ ಈ ಹೊತ್ತಗೆಯನ್ನು ಮುದದಿಂದ ನಿನ್ನ, ನಿರೀಕ್ಷೆಯ ನೆರಳಲ್ಲಿ, ಗುರು ತೋರಿದ ದಾರಿ, ದುಡಿಮೆಯ ಬೆಟ್ಟದಲ್ಲಿ, ಯಕ್ಷಗಾನ ಮೇಳಕ್ಕೆ ಪ್ರವೇಶ, ಸ್ತ್ರೀ ವೇಷದ ಸೆಟ್ಟು, ತಿರುಗಾಟ, ಬೋಧಕನಾಗಿ ನಾನು, ಧರ್ಮಸ್ಥಳ ಮೇಳದಲ್ಲಿ, ಬರ್ಗುಳಕ್ಕೆ ಭೇಟಿ, ಹೊಂಗನಸು ನನಸಾಯಿತು, ಮನೆ ಕಟ್ಟಿ ನೋಡು, ಆಘಾತ-ಪರಿಹಾರ, ಸಂಗಾತಿಯ ಸಂಚಾರ, ಆಟದೊಳಗಿನ ಆಟ, ಮೊದಲ ಸನ್ಮಾನದ ಹಾದಿ, ನಡೆದಿದೆ ಬದುಕು, ಮುಂಬೈ ಹಿಮ್ಮೇಳ, ಮತ್ತೊಂದು ಮನೆ, ಸುತ್ತ ಮುತ್ತ, ಸೋಲು ಗೆಲುವಿನ ಉಯ್ಯಾಲೆ, ಭಾಗವತ ಎಂಬ ವಿಚಾರಗಳಡಿ ಕಟ್ಟಿ ಅನಾವರಣಗೊಳಿಸಲಾಗಿದೆ.
ತಮ್ಮ ಬಾಲ್ಯದ ಬದುಕು, ಯಕ್ಷಗಾನ ಕಲಿಕೆ, ವೃತ್ತಿ ಜೀವನ, ವೈಯುಕ್ತಿಕ ಬದುಕು, ಸಹಕಲಾವಿದರ ಒಡನಾಟ, ಹಿಂದಿನ ಕಾಲದ ಪ್ರದರ್ಶನಗಳು ಮೊದಲಾದ ವಿಚಾರಗಳ ಬಗ್ಗೆ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ತನ್ನ ಈ ಆತ್ಮಕಥನದಲ್ಲಿ ಸರಳವಾಗಿ ಮನಮುಟ್ಟುವಂತೆ ವಿವರಿಸಿರುತ್ತಾರೆ. ಬಳಿಕ ಸುಮಾರು ಇಪ್ಪತ್ತೆಂಟು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ನೂರಾ ಮೂವತ್ತೊಂಬತ್ತು ಪುಟಗಳಿಂದ ಕೂಡಿದ ಈ ಆತ್ಮಕಥನದ ಹೊರ ಆವರಣದಲ್ಲಿ ಡಾ| ನಾ. ಮೊಗಸಾಲೆ ಅವರು ಗೋಪಾಲಕೃಷ್ಣ ಕುರುಪ್ ಅವರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ