ಮೊದಲಾಗಿಯೇ ಹೇಳಿಬಿಡುತ್ತೇನೆ. ಟೀಕೆ ಮಾಡುವುದು ಇಲ್ಲಿ ಉದ್ದೇಶವಲ್ಲ. ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಹೇಳುವುದು ಮಾತ್ರ ಉದ್ದೇಶ. ಅದರ ಬಗ್ಗೆ ನಿರ್ಣಯಿಸುವುದು ಆಸಕ್ತರಿಗೆ ಬಿಟ್ಟ ವಿಚಾರ. ನಾವು ಆಗಾಗ ಟಿವಿ ಚಾನೆಲುಗಳಲ್ಲಿ ಯಕ್ಷಗಾನದ ವೇಷಗಳನ್ನು ಧರಿಸಿ ಹುಚ್ಚು ಹುಚ್ಚಾಗಿ ಕರ್ಣಕಠೋರವಾದ ಸಿನಿಮಾ ಪದ್ಯಗಳಿಗೋ ಅಥವಾ ಪಾಶ್ಚತ್ಯ ಸಂಗೀತಕ್ಕೋ ನೃತ್ಯ ಮಾಡುವುದನ್ನು ಕಾಣುತ್ತೇವೆ ಅಥವಾ ಈ ಹಿಂದೆ ಕಂಡಿದ್ದೇವೆ. ಆಗೆಲ್ಲಾ ಬಹಳಷ್ಟು ಸಮಯಗಳಲ್ಲಿ ಆಕ್ಷೇಪ ಪ್ರತಿಭಟನೆಗಳಿಂದಾಗಿ ಟಿವಿ ಚಾನೆಲ್ ಕಾರ್ಯಕ್ರಮ ನಿರ್ಮಾಪಕರು ಕ್ಷಮೆ ಕೇಳಿದ ಪ್ರಕರಣಗಳೂ ಇದ್ದುವು.
ಆದರೆ ಎಷ್ಟೋ ಬಾರಿ ಇತರರಿಂದ ಕ್ಷಮೆ ಕೇಳಿಸುವ ನಾವು ನಾವೇ ಇಂತಹ ತಪ್ಪುಗಳನ್ನು ಹಲವಾರು ಬಾರಿ ಮಾಡುತ್ತೇವೆ. ಕೆಲವೊಂದು ಹಾಡುಗಳಿಗೆ ಯಕ್ಷಗಾನದ ವೇಷಭೂಷಣಗಳನ್ನು ಧರಿಸಿ ಮೈ ಕುಲುಕಿಸುತ್ತಾ ಚಿತ್ರ ವಿಚಿತ್ರ ಭಂಗಿಗಳಲ್ಲಿ ನೃತ್ಯ ಮಾಡುತ್ತೇವೆ.
ಪಾಶ್ಚಾತ್ಯ ಸಂಗೀತದ ಶೈಲಿಯ ಹಾಡಿನ ನೃತ್ಯಕ್ಕೂ ವೇಷಭೂಷಣಗಳು ಯಕ್ಷಗಾನದ್ದೇ ಆಗಬೇಕು. ಕೆಲವೊಂದು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಇಂತಹಾ ನೃತ್ಯಪ್ರದರ್ಶನಗಳು ವಿದ್ಯಾರ್ಥಿಗಳಿಂದ ನಡೆಯುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಮಾಹಿತಿಯ ಕೊರತೆಯಿರುವುದು ನಿಜ. ಅವರನ್ನು ಆಕ್ಷೇಪಿಸುವುದೂ ಅಷ್ಟು ಸಮಂಜಸವಾಗಲಾರದು. ಆದರೆ ಅವರಿಗೆ ಇಂತಹ ನೃತ್ಯಗಳಿಗೆ ನಿರ್ದೇಶನ ಮಾಡುವವರು ಯಾರು ಎಂಬುದೇ ಆಶ್ಚರ್ಯ!!!