‘ಯಕ್ಷಗಾನಂ ವಿಶ್ವಗಾನಂ’ ಎಂಬ ಹೊತ್ತಗೆಯು ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲೆ (ನೊಂ) ಎಂಬ ಸಂಸ್ಥೆಯ ದಶಮಾನೋತ್ಸವ ಸಂಚಿಕೆಯಾಗಿ ಪ್ರಕಟವಾಗಿತ್ತು. ಈ ಸಂಚಿಕೆಯು ಓದುಗರ ಕೈ ಸೇರಿದ್ದು 2014ರಲ್ಲಿ. ಗಾನ ಸೌರಭ ಯಕ್ಷಗಾನ ಶಾಲೆಯ ನಿರ್ದೇಶಕರು ಖ್ಯಾತ ಸ್ತ್ರೀ ಪಾತ್ರಧಾರಿಯಾದ ಶ್ರೀ ಬೇಗಾರು ಶಿವಕುಮಾರ್ ಅವರು. ಉಭಯ ತಿಟ್ಟುಗಳ ಅನುಭವಿ. ಶ್ರೀ ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ಅತ್ಯುತ್ತಮವಾದ ನಾಟ್ಯ, ಭಾವನಾತ್ಮಕವಾದ ಅಭಿನಯ ಮತ್ತು ಮಾತುಗಾರಿಕೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಯಕ್ಷಗಾನದ ವೃತ್ತಿಜೀವನಕ್ಕೆ ಸ್ವಯಂ ನಿವೃತ್ತಿಯನ್ನು ಘೋಷಿಸಿ, ಸಿಲಿಕಾನ್ ಸಿಟಿಯನ್ನು ಸೇರಿಕೊಂಡರೂ, ಯಕ್ಷಗಾನದ ನಂಟನ್ನು ಬಿಡದೆ, ಆ ಶ್ರೇಷ್ಠ ಕಲೆಯ ಸಂಬಂಧವಿರಿಸಿಕೊಂಡೇ ತೊಡಗಿಸಿಕೊಂಡಿರುವುದು ಅಭಿನಂದನೀಯ ವಿಚಾರವು. ಬೆಂಗಳೂರಿನ ಗಾನ ಸೌರಭ ಶಾಲೆಯ ರೂವಾರಿ ಇವರು. ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುವುದರ ಜತೆಗೆ, ಸದ್ರಿ ಸಂಸ್ಥೆಯ ನಿರ್ದೇಶಕರಾಗಿ, ಗುರುವಾಗಿ ಕಲಿಕಾಸಕ್ತರಿಗೆ ತಾನು ಕಲಿತ ವಿದ್ಯೆಯನ್ನು ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅದೊಂದು ಸಾಧನೆಯೇ ಹೌದು. ಕಲಿಕಾಸಕ್ತರಿಗೆ ತರಬೇತಿ, ಪ್ರದರ್ಶನ, ಸಾಧಕರನ್ನು ಗುರುತಿಸಿ ಗೌರವಿಸುವುದು, ಪ್ರಶಸ್ತಿ ಪ್ರಧಾನ ಮೊದಲಾದ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳಲ್ಲಿ ಶ್ರೀಯುತರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಗಾನ ಸೌರಭ ಕಲಾ ಶಾಲೆಯ ದಶಮಾನೋತ್ಸವ ಸ್ಮರಣ ಸಂಚಿಕೆ ‘ಯಕ್ಷಗಾನಂ ವಿಶ್ವಗಾನಂ’ ಇದರ ಸಂಪಾದಕರು ಡಾ| ಆನಂದರಾಮ ಉಪಾಧ್ಯ ಅವರು. ಮೊದಲಾಗಿ ಗಾನ ಸೌರಭ ಯಕ್ಷಗಾನ ಶಾಲೆ ದಶಮಾನೋತ್ಸವ ಸಮಿತಿಯ, ಕಲಾಪೋಷಕ ಪ್ರಶಸ್ತಿ, ಪುರಸ್ಕೃತರ, ‘ಗಾನಸೌರಭ’ ಪ್ರಶಸ್ತಿ ಪುರಸ್ಕೃತರ ಗಾನಸೌರಭ ಅಭಿನಂದಿತರ ಚಿತ್ರಗಳನ್ನು ನೀಡಲಾಗಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳ ಭಾವಚಿತ್ರಗಳನ್ನೂ, ಟ್ರಸ್ಟಿಗಳ ಭಾವಚಿತ್ರಗಳನ್ನೂ ನೀಡಲಾಗಿದೆ. ಡಾ. ಆನಂದರಾಮ ಉಪಾಧ್ಯ ಅವರ ಸಂಪಾದಕೀಯ ಬರಹದೊಂದಿಗೆ ಈ ಸ್ಮರಣ ಸಂಚಿಕೆಯು ಮೂರು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಮೊದಲ ವಿಭಾಗದಲ್ಲಿ ಡಾ. ಪಿ. ದಯಾನಂದ ಪೈ, ಶ್ರೀ ರಮೇಶ್ಚಂದ್ರ ಹೆಬ್ರಿ, ನಾಗರಾಜ ಶೇರೆಗಾರ್, ಪಿ.ಆರ್. ನಾಯಕ್, ಬೇಗಾರ್ ಶಿವಕುಮಾರ್, ಗೋಪಾಲಕೃಷ್ಣ (ಸಂಗ್ರಹಿತ ಲೇಖನ) ಪ್ರಭಾಕರ ಆಚಾರ್ಯ(ಸಂಗ್ರಹ), ಸಂತೋಷ್ ಭಟ್, ಸೌರಭ್ ಕುಮಾರ್ (ಸಂಗ್ರಹ) ಇವರ ಲೇಖನಗಳನ್ನು ನೀಡಲಾಗಿದೆ. ಭಾಗ ಎರಡರಲ್ಲಿ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಡಾ. ಕೆ.ಎಂ. ರಾಘವ ನಂಬಿಯಾರ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕಡತೋಕಾ ಗೋಪಾಲಕೃಷ್ಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ತಾರಾನಾಥ ವರ್ಕಾಡಿ, ಪ್ರಸಾದ್ ಮೊಗೆಬೆಟ್ಟು, ಶಾಂತಾರಾಮ ಪ್ರಭು, ರಮೇಶ್ ಬೇಗಾರು, ಧನಂಜಯ ನೆಲ್ಯಾಡಿ, ರಾಜಗೋಪಾಲ ಕನ್ಯಾನ, ಡಾ| ಈಶ್ವರ್, ಡಾ| ಪುರುಷೋತ್ತಮ ಬಿಳಿಮಲೆ ಇವರುಗಳ ಲೇಖನಗಳಿವೆ. ಭಾಗ ಮೂರರಲ್ಲಿ ಛಾಯಾಚಿತ್ರಗಳನ್ನು ನೀಡಲಾಗಿದೆ. ಬೆಂಗಳೂರಿನ ಬೆಂಗಳೂರಿನ ‘ಗಾನ ಸೌರಭ ಕಲಾ ಶಾಲೆ’ ಎಂಬ ಕಲಾ ಸಂಸ್ಥೆಗೆ, ನಿರ್ದೇಶಕ ಶ್ರೀ ಬೇಗಾರು ಶಿವಕುಮಾರ್ ಅವರಿಗೆ ಅಭಿನಂದನೆಗಳು. ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ