‘ವಾಚಿಕ’ ಎಂಬ ಶೀರ್ಷಿಕೆಯ ಈ ಕೃತಿಯು ತಾಳಮದ್ದಳೆ ಅಧ್ಯಯನ-ಲೇಖನ ಸಂಚಯವಾಗಿ ಓದುಗರ ಕೈ ಸೇರಿದೆ. ಇದು ಮುದ್ರಣಗೊಂಡು ಪ್ರಕಟವಾದುದು 2009ರಲ್ಲಿ. ಅತ್ಯುತ್ತಮ ಸಂಗ್ರಹಯೋಗ್ಯ ಮಾಹಿತಿಗಳನ್ನೊದಗಿಸುವ ಕೃತಿಯು. ವಾಚಿಕ ಎಂಬ ಈ ಹೊತ್ತಗೆಯ ಸಂಪಾದಕರು ವಿದ್ವಾಂಸರುಗಳಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರುಗಳು. ಪ್ರಕಾಶಕರು ಕಲಾವಿದರೆಲ್ಲರ ಹೆಮ್ಮೆಯ ಕಲಾವಿದರ ಕ್ಷೇಮಕ್ಕಾಗಿ ಮೊತ್ತಮೊದಲು ಸ್ಥಾಪಿಸಲ್ಪಟ್ಟ ಸಂಸ್ಥೆಯಾದ ಯಕ್ಷಗಾನ ಕಲಾರಂಗ (ರಿ) ಉಡುಪಿ. ಸದ್ರಿ ಸಂಸ್ಥೆಯ ತಾಳಮದ್ದಳೆ ದಶಮಾನ ಸಂಭ್ರಮದಲ್ಲಿ ಈ ಕೃತಿಯು ಲೋಕಾರ್ಪಣೆಗೊಂಡಿತ್ತು. ಪುಸ್ತಕವೊಂದನ್ನು ಪ್ರಕಟಿಸುವ ಮೂಲಕ ದಶಮಾನೋತ್ಸವವನ್ನು ಅರ್ಥಪೂರ್ಣಗೊಳಿಸಬೇಕೆಂದು ಡಾ. ಎಂ. ಪ್ರಭಾಕರ ಜೋಷಿಯವರು ಸೂಚಿಸಿದರೆಂದೂ ಸಂಪಾದಕತ್ವದ ಹೊಣೆ ಹೊತ್ತು ಶ್ರೀಯುತರೂ ಡಾ. ಪಾದೇಕಲ್ಲು ವಿಷ್ಣು ಭಟ್ಟರೂ ಈ ಯೋಜನೆಯನ್ನು ಯಶಸ್ವಿಗೊಳಿಸಿದರೆಂದೂ ಪ್ರಕಾಶಕರು ತಮ್ಮ ಲೇಖನದಲ್ಲಿ ತಿಳಿಸಿರುತ್ತಾರೆ. ತಾಳಮದ್ದಳೆ ಕ್ಷೇತ್ರದ ಕಲಿಕಾಸಕ್ತರಿಗೆ ಖಂಡಿತಾ ಇದು ಒಂದು ಕೈಪಿಡಿಯಾಗಿ ಸಹಕರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಮೊದಲಾಗಿ ‘ಕಲಾರಂಗ ಮತ್ತು ತಾಳಮದ್ದಳೆ ಸಪ್ತಾಹ’ ಎಂಬ ಶೀರ್ಷಿಕೆಯಡಿಯ ಲೇಖನದಲ್ಲಿ ಪ್ರೊ|ಎಂ. ನಾರಾಯಣ ಹೆಗಡೆಯವರು ಯಕ್ಷಗಾನ ಕಲಾರಂಗ ಸಂಸ್ಥೆಯ ಹುಟ್ಟು, ಬೆಳವಣಿಗೆ, ಕೈಗೊಂಡ ಯೋಜನೆ, ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಿರುತ್ತಾರೆ. ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರು ‘ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಈ ಕೃತಿಯು ಲೇಖನ ಸಂಚಯ, ಸಂವಾದ ಸಾಂಚ್ಯಾ, ಅಭಿಪ್ರಾಯ ಸಂಚಯ, ವಿಮರ್ಶಾ ಸಂಚಯ, ಎಂಬ ನಾಲ್ಕು ವಿಭಾಗಗಳಿಂದಲೂ ಅನುಬಂಧಗಳು ಎಂಬ ಪೂರಕ ವಿಭಾಗದಿಂದಲೂ ಕೂಡಿದೆ. ಮೊದಲ ವಿಭಾಗದಲ್ಲಿ ಇಪ್ಪತ್ತೊಂಬತ್ತು ಲೇಖನಗಳಿವೆ. ಎರಡನೆಯ ವಿಭಾಗದಲ್ಲಿ ಇಪ್ಪತ್ತೊಂದು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ. ನಾಲ್ಕನೆಯ ವಿಭಾಗದಲ್ಲಿ ಏಳು ಲೇಖನಗಳನ್ನು ನೀಡಲಾಗಿದೆ. ಪೂರಕ ವಿಭಾಗದಲ್ಲಿ ಮೂರು ಲೇಖನಗಳನ್ನೂ ಎಲ್ಲಾ ಲೇಖಕರ ವಿಳಾಸಗಳನ್ನೂ ನೀಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ