ಸಹೃದಯೀ ಕಲಾವಿದ ಶ್ರೀ ಜಯೇಂದ್ರ ಕುಲಾಲ್ ಕಿದೂರ್ ಕನ್ನಡ ಮತ್ತು ತುಳು ಭಾಷೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಬಲ್ಲ ಸಮರ್ಥರು. ಸರಳ ಸಜ್ಜನ ವಿನಯವಂತ ಕಲಾವಿದರು. ತೆರೆದುಕೊಳ್ಳುವ ಸ್ವಭಾವವಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ತಾನು ಕಾಣಿಸಿಕೊಳ್ಳಬೇಕೆಂಬ ಬಯಕೆ ಇವರಿಗಿಲ್ಲ. ಯಕ್ಷಗಾನ ಕಲಾವಿದನಾಗಿ ರಂಗವೇರಬೇಕೆಂಬ ಬಯಕೆಯನ್ನು ಮಾತ್ರ ಇರಿಸಿಕೊಂಡವರು. ಕಳೆದ ಮೂವತ್ತಕ್ಕೂ ಹೆಚ್ಚು ವರುಷಗಳಿಂದ ವೃತ್ತಿ ಕಲಾವಿದರಾಗಿ ಅಭಿನಯಿಸುತ್ತಿದ್ದಾರೆ. ಶ್ರೀ ಜಯೇಂದ್ರ ಕುಲಾಲರು ಜನಿಸಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದ ತಂಜರಕಟ್ಟೆ ಎಂಬಲ್ಲಿ. ಇದು ಕುಂಬಳೆಯ ಸಮೀಪದಲ್ಲಿದೆ. ಶ್ರೀ ಫಕೀರ ಮೂಲ್ಯ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ 1972 ಏಪ್ರಿಲ್ 24ರಂದು ಜನನ. ಇಚ್ಲಂಪಾಡಿಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು.

ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಕಳತ್ತೂರು ಶಾಲೆಯ ಮೈದಾನದಲ್ಲಿ ಕರ್ನಾಟಕ, ಸುರತ್ಕಲ್, ಕದ್ರಿ ಮೊದಲಾದ ಮೇಳಗಳ ಆಟಗಳು ನಡೆಯುತ್ತಿತ್ತು. ಎಲ್ಲಾ ಆಟಗಳಿಗೂ ಜಯೇಂದ್ರರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಮನೆಯವರು ಕಳುಹಿಸುವುದಿಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ಮನೆಗೆ ಬಾರದೆ ಆಟ ನೋಡಿ ಮರುದಿನವೂ ಶಾಲೆಗೇ ಹೋಗಿ ಮತ್ತೆ ಮನೆಗೆ ಬಂದದ್ದೂ ಇದೆ. ತಂದೆ ತಾಯಿಯರು ಗದರಿಸಿ ಮನೆಗೆ ಕರೆದೊಯ್ದದ್ದೂ ಇದೆ. ಜಯೇಂದ್ರರಿಗೆ ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ಧರ್ಮಸ್ಥಳ ಮೇಳದ ಆಟಕ್ಕೆ ಮಾನ್ಯ, ನೀರ್ಚಾಲು ಎಂಬ ಸ್ಥಳಗಳಿಗೆ ಮನೆಯಿಂದ ನಡೆದೇ ಹೋಗುತ್ತಿದ್ದರು. ಎಳವೆಯಲ್ಲೇ ಇವರು ಅರುವ ಕೊರಗಪ್ಪ ಶೆಟ್ಟಿಯವರ ಅಭಿಮಾನಿಯಾಗಿದ್ದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಆಟ ನೋಡಿ ಬಂದ ಬಳಿಕ ಗೆಳೆಯರೊಂದಿಗೆ ಮನೆಯ ಸಮೀಪ ಅಣಕು ಯಕ್ಷಗಾನ ಪ್ರದರ್ಶನ. ಬೂದಿಯ ನಾಮ ಬಳಿದು, ಹಾಳೆಯಿಂದ ತಯಾರಿಸಿದ ಕಿರೀಟ, ಅಮ್ಮನ ಸೀರೆಯನ್ನೇ ವೇಷಭೂಷಣಗಳನ್ನಾಗಿ ಧರಿಸಿ ಎಲ್ಲರೂ ಕುಣಿದು ಸಂತೋಷಪಡುತ್ತಿದ್ದರು. ಮನೆಯಲ್ಲಿ ಹಿರಿಯರು ನಿದ್ರಿಸಿದ ನಂತರ ಗೆಳೆಯರೊಂದಿಗೆ ತೆರಳಿ ಆಟ ನೋಡಿದ್ದೂ ಇದೆ. ಹೀಗೆ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಶ್ರೀ ಜಯೇಂದ್ರ ಕುಲಾಲ್ ಅವರಿಗೆ ಹುಟ್ಟಿಕೊಂಡಿತ್ತು. ನಾನೂ ಒಬ್ಬ ಕಲಾವಿದನಾಗುವಂತೆ ಅನುಗ್ರಹಿಸು ಎಂದು ದೇವರಲ್ಲಿ ಪ್ರಾರ್ಥಿಸಿದ್ದರಂತೆ.

ಇಚ್ಲಂಪಾಡಿ ಶಾಲೆಯ ವಿದ್ಯಾರ್ಥಿಯಾಗಿರುವಾಗ ಶಾಲೆಯಲ್ಲಿ ಕೋಟಿ ಚೆನ್ನಯ ತುಳು ನಾಟಕದಲ್ಲಿ ಪಯ್ಯ ಬೈದ್ಯ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಇದು 7 ನೇ ತರಗತಿಯಲ್ಲಿ ಓದುತ್ತಿರುವಾಗ. ಅಲ್ಲದೆ ಮತ್ತೆರಡು ನಾಟಕಗಳಲ್ಲಿ ವೇಷ ಮಾಡಿದ್ದರು. ತಂದೆಯವರ ಅಸೌಖ್ಯದ ಕಾರಣದಿಂದ ಶಾಲೆ ಬಿಡಬೇಕಾಗಿ ಬಂದಿತ್ತು. ಜೀವನ ನಿರ್ವಹಣೆಗಾಗಿ ಒಂದು ವರ್ಷ ಹೋಟೆಲ್ ಕೆಲಸವನ್ನೂ ಮಾಡಿದ್ದರು. ತಂದೆಯವರ ಮರಣಾ ನಂತರ ಮನೆಯ ಹೊಣೆಗಾರಿಕೆ ಜಯೇಂದ್ರರ ಹೆಗಲ ಮೇಲೆ ಬಿದ್ದಿತ್ತು. ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿ ಸಂಪಾದಿಸಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದರು. ಈ ಸಂದರ್ಭಗಳಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಕಲಾವಿದನಾಗಬೇಕೆಂಬ ಆಸೆಯೂ ಅಧಿಕವಾಗಿತ್ತು. ಚೌಕಿಗೆ ಹೋಗಿ ಕಲಾವಿದರು ಬಣ್ಣ ಹಾಕುವುದನ್ನೂ ವೇಷ ಧರಿಸಿ ಸಿದ್ಧವಾಗುವುದನ್ನೂ ಆಸಕ್ತಿಯಿಂದ ಗಮನಿಸುತ್ತಲೇ ಬೆಳೆದವರರು ಜಯೇಂದ್ರರು. ಇದೆ ಸಂದರ್ಭದಲ್ಲಿ ನಾಟ್ಯ ಕಲಿಯುವ ಅವಕಾಶವು ಒದಗಿ ಬಂದಿತ್ತು. ಕಿದೂರು ದೇವಸ್ಥಾನದಲ್ಲಿ ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ನಾಟ್ಯ ತರಬೇತಿಯನ್ನು ನೀಡುತ್ತಿದ್ದರು. ಜಯೇಂದ್ರರು ತರಬೇತಿಗೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಶ್ರೀಕೃಷ್ಣ ಭಟ್ಟರಿಂದ ಕಲಿತರು. ತರಬೇತಿಯ ನಂತರ ಕಿದೂರು ದೇವಸ್ಥಾನದಲ್ಲಿ ಮೊದಲ ಪ್ರದರ್ಶನ. ಅಗ್ರಪೂಜೆ ಪ್ರಸಂಗದಲ್ಲಿ ಸೋಮದತ್ತನಾಗಿ ರಂಗ ಪ್ರವೇಶ.

ಉಂಡೆಮನೆಯವರು ವೇಷ ಮಾಡಲು ನಿರಂತರ ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಅಲ್ಲದೆ ನಿನಗೆ ಹಾಸ್ಯದ ವೇಷಗಳನ್ನು ಮಾಡಬಹುದು ಎಂಬ ಸೂಚನೆಯನ್ನೂ ನೀಡಿದರಂತೆ. ಬಳಿಕ ಕುಂಬಳೆ ಶ್ರೀ ಸೇಸಪ್ಪನವರ ಹೇಳಿಕೆಯ ಮೇರೆಗೆ ಉಪ್ಪಳ ಮೇಳಕ್ಕೆ. ಮೊದಲ ದಿನವೇ ಅನಿವಾರ್ಯವಾಗಿ ಹಾಸ್ಯ ಪಾತ್ರವನ್ನು ಮಾಡಬೇಕಾಗಿ ಬಂದಿತ್ತು. ಬಂಬ್ರಾಣ ಕಡಮಣ್ಣಾಯರ ಮನೆಯಲ್ಲಿ ನಡೆದ ಪ್ರದರ್ಶನ. ಶ್ರೀಕೃಷ್ಣ ಲೀಲೆ ಪ್ರಸಂಗದಲ್ಲಿ ವಿಜಯನಾಗಿ ಅಭಿನಯಿಸಿದ್ದರು. ಮೂರು ವರ್ಷಗಳ ಕಾಲ ಉಪ್ಪಳ ಮೇಳದಲ್ಲಿ ಕಲಾಸೇವೆ. ಜತೆಗೆ ಹಗಲು ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಬಳಿಕ ನೀರ್ಚಾಲು ಶ್ರೀ ಅಯ್ಯಪ್ಪ ಭಜನಾ ಮಂದಿರದ ಬಳಿ ನಡೆದ ಆಟದಲ್ಲಿ ಇವರ ವೇಷವನ್ನು ನೋಡಿ ಅಡ್ಯಾರು ಶ್ರೀ ಶಂಕರ ಆಳ್ವರು ಬಪ್ಪನಾಡು ಮೇಳಕ್ಕೆ ಆಹ್ವಾನಿಸಿದ್ದರು. ಕೊಕ್ಕಡ ಈಶ್ವರ ಭಟ್, ಕೊಳ್ಯೂರು ರಾಮಚಂದ್ರ ರಾವ್ ಮೊದಲಾದವರು ಸದ್ರಿ ಮೇಳಕ್ಕೆ ಅತಿಥಿ ಕಲಾವಿದರಾಗಿ ಬರುತ್ತಿದ್ದರು. ಸುಬ್ರಾಯ ಹೊಳ್ಳ, ಧರ್ಮೇಂದ್ರ ಆಚಾರ್ಯ, ತಿಂಬರೆ ತ್ಯಾಂಪಣ್ಣ, ತಿಂಬರೆ ರಾಮ ಮೊದಲಾದವರ ಒಡನಾಟವೂ ದೊರಕಿತ್ತು. ಕನ್ಯಾನ ಸುಂದರ ಅವರು ಹಾಸ್ಯಗಾರರಾಗಿದ್ದರು. ಜಯೇಂದ್ರರು ಒತ್ತು ಹಾಸ್ಯಗಾರರಾಗಿ ಕಾಣಿಸಿಕೊಂಡರು.

ರಂಗಸ್ಥಳದ ಕೆಲಸ, ಲೈಟಿಂಗ್ಸ್, ವೇಷಗಾರಿಕೆ ಹೀಗೆ ಎಲ್ಲಾ ಕೆಲಸಗಳನ್ನೂ ಮೇಳದ ತಿರುಗಾಟದಲ್ಲಿ ಮಾಡಿದ್ದರು. ಬಪ್ಪನಾಡು ಮೇಳದಲ್ಲಿ 5 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು. ಬಳಿಕ ಊರಲ್ಲಿ ವಿದ್ಯುತ್ ಲೈನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಳೆಗೆ ಕೆಲಸ ಮಾಡುತ್ತಿರುವಾಗ ಕಂಬದಿಂದ ಜಾರಿ ಎಡದ ಕೈಯ ನೋವನ್ನೂ ಒಂದು ವರ್ಷ ಅನುಭವಿಸಿದ್ದರು. ಬಳಿಕ ಕೂಡ್ಲು ಮೇಳ, ಹವ್ಯಾಸೀ ತಂಡಗಳಲ್ಲಿ ವೇಷ ಮಾಡುತ್ತಿದ್ದು, ಒಂದು ವರ್ಷ ದೇಂತಡ್ಕ ಮೇಳದಲ್ಲೂ ತಿರುಗಾಟ ನಡೆಸಿದ್ದರು. ಕಳೆದ ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಹಾಸ್ಯ ಅಲ್ಲದೆ ಖಳನಾಯಕ, ಪೋಷಕ ಪಾತ್ರಗಳನ್ನೂ ಜಯೇಂದ್ರ ಕುಲಾಲರು ಉತ್ತಮವಾಗಿ ನಿರ್ವಹಿಸುತ್ತಾರೆ. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಪೂಕಳ, ನಾವಡರು, ನರಹರಿ ಮಾಸ್ತರ್, ಪಾಲೆಚ್ಚಾರು ಅವರುಗಳ ಬಪ್ಪ ಬ್ಯಾರಿಯ ಪಾತ್ರಕ್ಕೆ ಉಸ್ಮಾನ್ ಆಗಿ ಅಭಿನಯಿಸುವ ಅವಕಾಶ ಆಗಿತ್ತು. ಅರುವ ಕೊರಗಪ್ಪ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ ಮೊದಲಾದವರ ಜೊತೆಗೂ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಜಯೇಂದ್ರ ಕುಲಾಲರನ್ನು ಸನ್ಮಾನಿಸಿ ಗೌರವಿಸಿವೆ. ಕುಲಾಲ ಸಂಘದವರು ‘ಕುಲಾಲ ಮುತ್ತು’ ಎಂಬ ಬಿರುದನ್ನೂ ನೀಡಿರುತ್ತಾರೆ. ಮೂಡಬಿದಿರೆಯಲ್ಲಿ ನಡೆದ ಸನ್ಮಾನದಲ್ಲಿ ‘ಕಿದೂರ್ದ ಮುತ್ತು’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳೂ ರಂಗಕ್ಕೆ ಅನಿವಾರ್ಯ. ಯಾವ ಪಾತ್ರವನ್ನೂ ನಗಣ್ಯ ಮಾಡುವಂತಿಲ್ಲ. ಎಲ್ಲಾ ಪಾತ್ರಗಳೂ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ. ಹಿರಿಯರನ್ನು ಗೌರವಿಸಿ ಕಿರಿಯರನ್ನು ಪ್ರೀತಿಸುವ ಗುಣವೂ ಕಲಾವಿದರಿಗೆ ಇದ್ದಾಗ ಮೇಳದಲ್ಲಿ ಒಂದು ಕೌಟುಂಬಿಕ ವಾತಾವರಣವು ನಿರ್ಮಾಣವಾಗುತ್ತದೆ. ಇದರಿಂದ ಪ್ರದರ್ಶನಗಳೂ ಯಶಸ್ವಿಯಾಗುತ್ತವೆ ಎಂಬ ಅಭಿಪ್ರಾಯವನ್ನು ಹೊಂದಿರುವ ಇವರು ಕಲಾಜೀವನದಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಪ್ರೇಮಾ. ಜಯೇಂದ್ರ ಕುಲಾಲ್ ಮತ್ತು ಪ್ರೇಮಾ ದಂಪತಿಗಳಿಗೆ ಐವರು ಹೆಣ್ಣು ಮಕ್ಕಳು. ಹಿರಿಯ ಪುತ್ರಿ ವಿದ್ಯಾಲಕ್ಷ್ಮಿ ವಿವಾಹಿತೆ. ದ್ವಿತೀಯ ಪುತ್ರಿ ಅಶ್ವಿನಿ ವಿವಾಹಿತೆ. ನಾಟ್ಯ ಕಲಿತು ವೇಷ ಮಾಡುತ್ತಿದ್ದರು. ತೃತೀಯ ಪುತ್ರಿ ಕು| ಹರ್ಷಿತಾ. ಚತುರ್ಥ ಪುತ್ರಿ ಕು| ಹರ್ಷಿಣಿ ಪಿಯುಸಿ ವಿಧ್ಯಾಭ್ಯಾಸವನ್ನು ಪೂರೈಸಿರುತ್ತಾಳೆ. ಪಂಚಮ ಪುತ್ರಿ ಕು| ಪಂಚಮಿ ಎಸ್.ಎಸ್.ಎಲ್.ಸಿ ಯಲ್ಲಿ 92 ಶೇಕಡಾ ಅಂಕಗಳನ್ನು ಗಳಿಸಿರುತ್ತಾಳೆ. ಕಿದೂರ್ದ ಮುತ್ತು ಶ್ರೀ ಜಯೇಂದ್ರ ಕುಲಾಲರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ.ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅವರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ