‘ಯಕ್ಷ ಶಾಂತಲಾ ಪಾತಾಳ’ ಇದು ಹಿರಿಯ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಕೃತಿ. ಈ ಕೃತಿಯು 2005ರಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಇದರ ಪ್ರಕಾಶಕರು ಶ್ರೀ ಪಾತಾಳ ಅಭಿನಂದನ ಕೃತಿ ಪ್ರಕಾಶನ ಸಮಿತಿ, ಪುತ್ತೂರು ಇವರು. ಸಂಪಾದಕರು ಶ್ರೀ ಮುಳಿಯ ಶಂಕರ ಭಟ್ಟರು. ಇದು ಒಟ್ಟು ಇನ್ನೂರ ಇಪ್ಪತ್ತೇಳು ಪುಟಗಳನ್ನು ಹೊಂದಿದ್ದು ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ಧರಿಸಿದ ವೇಷಗಳ ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ಎಡನೀರು ಮಠಾಧೀಶರಾಗಿದ್ದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ‘ನೆನಪಿನಾಳದಿಂದ’ ಎಂಬ ಶೀರ್ಷಿಕೆಯಡಿ ನೀಡಿದ ಅನುಗ್ರಹ ಸಂದೇಶವನ್ನು ನೀಡಲಾಗಿದೆ. ಸಂಪಾದಕ ಶ್ರೀ ಮುಳಿಯ ಶಂಕರ ಭಟ್ಟರು ‘ಓದುವ ಮುನ್ನ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀ ಮುಳಿಯ ಶಂಕರ ಭಟ್ ಮತ್ತು ಶ್ರೀ ನ. ಕಾರಂತ ಪೆರಾಜೆಯವರು ಬರೆದ ‘ಬದುಕಿನ ಬಣ್ಣ ಮತ್ತು ಬಣ್ಣದ ಬದುಕು’ ಎಂಬ ಲೇಖನವಿದ್ದು ಅದರಲ್ಲಿ ಪಾತಾಳ ವೆಂಕಟ್ರಮಣ ಭಟ್ಟರ ಬದುಕು, ಬಣ್ಣದ ಬದುಕು ಮತ್ತು ಸಂದರ್ಶನದ ವಿವರಗಳನ್ನು ನೀಡಲಾಗಿದೆ. ಬಳಿಕ ಪಾತಾಳದ ನೆನಹುಗಳು, ಸ್ವಾಭೀಮಾನಿ ಕಲಾವಿದ, ಅವಿಸ್ಮರಣೀಯ ಸನ್ನಿವೇಶಗಳು, ಪಾತಾಳದ ಆಳ, ಶಿಲ್ಪಗಳ ಸ್ಪೂರ್ತಿಯಿಂದ ಪಾತ್ರಗಳನ್ನು ತುಂಬಿದ ಪ್ರತಿಭಾವಂತ, ನಂಬರ್ 1 ಸ್ತ್ರೀ ಪಾತ್ರಧಾರಿ, ಸ್ತ್ರೀಪಾತ್ರಗಳೊಳಪ್ರತಿಮ ರತ್ನ, ಜೀವ ತಳೆದು ಬಂದ ಶಿಲಾಬಾಲಿಕೆ, ಸಜ್ಜನ ಒಡನಾಡಿ, ರೂಪಶ್ರೀ ನಾಗಾಂಗನೆ, ನಿಯತ್ತಿನ ಕಲಾವಿದ, ಕಲಾತಪಸ್ವಿ, ಅನನ್ಯ ಕೊಡುಗೆ – ಕೇಶಾಲಂಕಾರ, ಪಡುವಲಪಾಯ ಯಕ್ಷಗಾನ ಸ್ತ್ರೀವೇಷದಲ್ಲಿ ಸುಧಾರಣೆ ಮತ್ತು ಸೌಂದರ್ಯ, ಯಕ್ಷಗಾನ ಪೂರ್ವರಂಗ, ಯಕ್ಷಗಾನ ಅಂದು ಇಂದು, ಯಕ್ಷಗಾನ ಮುಖವರ್ಣಿಕಾ ಪರಂಪರೆ, ಪುರಾಣ ಪ್ರಜ್ಞಾವರ್ಧನ ಯಕ್ಷಗಾನ, ನಮ್ಮ ಯಕ್ಷಗಾನ ಬಯಲಾಟ ಎತ್ತ ಸಾಗುತ್ತಿದೆ, ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ, ಯಕ್ಷಗಾನ ರಂಗಭೂಮಿ ಮತ್ತು ಕೊರಿಯೋಗ್ರಫಿ, ಒಂದು ಅಪೂರ್ವ ಯಕ್ಷಗಾನ ಪ್ರಸಂಗ, ಆಟದೊಳಗಣ ಆಟ, ಪ್ರಸಂಗಗಳಲ್ಲಿ ಸ್ತ್ರೀಪಾತ್ರಗಳು, ಯಕ್ಷಗಾನಕ್ಕೆ ಶಕ್ತಿ ತುಂಬಿಸಿ, ಒಂದು ಮುನ್ನುಡಿ, ಪಾತಾಳದ ನಾಗಕನ್ಯೆ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನ, ಯಕ್ಷಗಾನ ಅರ್ಥಗಾರಿಕೆಯಲ್ಲಿ ಸ್ವಗತ, ಯಕ್ಷಗಾನದಲ್ಲಿ ಸ್ತ್ರೀ ವೇಷ ಎಂಬ ಬರಹಗಳಿವೆ.
ಲೇಖನಗಳನ್ನು ಬರೆದವರು ಕ್ರಮವಾಗಿ ರಾಜಗೋಪಾಲ ಕನ್ಯಾನ, ಕೆ, ಗೋವಿಂದ ಭಟ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ, ಕುಂಬಳೆ ಸುಂದರ ರಾವ್, ಕಡತೋಕಾ ಮಂಜುನಾಥ ಭಾಗವತರು, ಡಾ. ಗೋವಿಂದ ಭಟ್ ಅಂಬೆಮೂಲೆ, ಎಚ್. ಶ್ರೀಧರ ಹಂದೆ, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ರಾಮಚಂದ್ರ ರಾವ್, ಕಜೆ ಈಶ್ವರ ಭಟ್, ಪ್ರೊ| ಎಂ.ಎಲ್.ಸಾಮಗ, ಪುಚ್ಚೆಕೆರೆ ಕೃಷ್ಣ ಭಟ್, ಶತಾವಧಾನಿ ಡಾ. ಆರ್.ಗಣೇಶ್, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ, ಮಹಾಬಲ ಕಲ್ಮಡ್ಕ, ಪ್ರೊ| ಟಿ. ಕೇಶವ ಭಟ್ಟ, ತುದಿಯಡ್ಕ ವಿಷ್ಣ್ವಯ್ಯ, ವೆಂಕಟರಾಜ ಪುಣಿಂಚತ್ತಾಯ, ಕೆರೆಮನೆ ಶಂಭು ಹೆಗಡೆ, ಡಾ| ಕಮಲಾಕ್ಷ ಕೆ., ಮೂರ್ತಿ ನಾಯ್ಕಾಪು, ವಿ.ಬಿ.ಅರ್ತಿಕಜೆ, ಕೃಷ್ಣ ಭಟ್ ಪೆರ್ಲ, ತೇಜಸ್ವಿನಿ ಕೀರಿಕ್ಕಾಡು, ಸಂಜೀವ ಶೆಟ್ಟಿ ಅಳಿಕೆ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಗಣರಾಜ ಕುಂಬಳೆ. ಈ ಕೃತಿಯ ಕೊನೆಯಲ್ಲಿ ಶ್ರೀ ಪಾತಾಳರಿಗೆ ಸಂದ ಮಾನ-ಸನ್ಮಾನ, ಪಾತಾಳ ವಂಶವಾಹಿನಿ, ಲೇಖಕರ ವಿಳಾಸ, ಶ್ರೀ ಪಾತಾಳ ಅಭಿನಂದನ-ಕೃತಿ ಪ್ರಕಾಶನ ಸಮಿತಿ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ