ಶೀರ್ಷಿಕೆಯೇ ಸೂಚಿಸುವಂತೆ ಇದು ಯಕ್ಷಗಾನ ಕಲೆಯ, ಕನ್ನಡ ಸಾಹಿತ್ಯ ಲೋಕದ ಸಾಧಕರಾದ ರಸಋಷಿ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಬದುಕು ಮತ್ತು ಸಾಧನೆಗಳ ಕುರಿತಾಗಿ ಪ್ರಕಟಗೊಂಡ ಹೊತ್ತಗೆ. ಈ ಪುಸ್ತಕವು ಮೊದಲು ಮುದ್ರಣಗೊಂಡದ್ದು 1997ರಲ್ಲಿ. ಪ್ರಕಾಶಕರು ಕರ್ನಾಟಕ ಸಂಘ ಪುತ್ತೂರು. ಇದು ದ್ವಿತೀಯ ಮುದ್ರಣವಾದುದು 2014ರಲ್ಲಿ. ಇದರ ಪ್ರಕಾಶಕರು ಜ್ಞಾನಗಂಗಾ ಪ್ರಕಾಶನ ಪುತ್ತೂರು. ಈ ಹೊತ್ತಗೆಯ ಲೇಖಕರು ಶ್ರೀ ವಿಜಯ ಕುಮಾರ ಮೊಳೆಯಾರ, ಪುತ್ತೂರು. ಇದು ಒಟ್ಟು ನಲುವತ್ತು ಪುಟಗಳನ್ನು ಹೊಂದಿದ ಪುಸ್ತಕ. ಪ್ರಕಾಶಕರಾದ ಜ್ಞಾನಗಂಗಾ ಪ್ರಕಾಶನದ ಶ್ರೀ ಪ್ರಕಾಶ್ ಕೊಡೆಂಕಿರಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ.
1997ರಲ್ಲಿ ಬೋಳಂತಕೋಡಿ ಈಶ್ವರ ಭಟ್ಟರು ಪುತ್ತೂರು ಕರ್ನಾಟಕ ಸಂಘದ ಮೂಲಕ ಹೊರತಂದ ಪುಸ್ತಕ ಇದು. ಮೊದಲನೇ ಮುದ್ರಣದ ಪ್ರತಿಗಳು ಮುಗಿದಿದ್ದು, ಬಹು ಬೇಡಿಕೆ ಇರುವುದರಿಂದ ಇದನ್ನು ಮತ್ತೆ ಪ್ರಕಟಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಡಾ. ವಿಜಯ ಕುಮಾರ ಮೊಳೆಯಾರ ಅವರು ಸಂತೋಷದಿಂದ ಒಪ್ಪಿಕೊಂಡಿರುತ್ತಾರೆ. ಅವರ ಸೂಚನೆಯಂತೆ ಕೆಲವು ಬದಲಾವಣೆಗಳೊಂದಿಗೆ ಈ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ ಎಂದು ಶ್ರೀ ಪ್ರಕಾಶ್ ಕೊಡೆಂಕಿರಿಯವರು ತಮ್ಮ ಲೇಖನದಲ್ಲಿ ತಿಳಿಸಿರುತ್ತಾರೆ. ಲೇಖಕರಾದ ಡಾ. ವಿಜಯ ಕುಮಾರ ಮೊಳೆಯಾರ ಅವರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ದೇರಾಜೆ ಸೀತಾರಾಮಯ್ಯ – ಬದುಕು, ದೇರಾಜೆ ಸೀತಾರಾಮಯ್ಯ-ಬರಹ, ಯಕ್ಷಗಾನ ಸಂಬಂಧೀ ಕೃತಿಗಳು, ಇತರ ಕೃತಿಗಳು, ದೇರಾಜೆಯವರ ಲೇಖನಗಳು, ದೇರಾಜೆ ಸೀತಾರಾಮಯ್ಯ- ಅರ್ಥಧಾರಿಯಾಗಿ ಎಂಬ ವಿಚಾರಗಳಡಿಯಲ್ಲಿ ಶ್ರೀ ಡಾ. ವಿಜಯಕುಮಾರ ಮೊಳೆಯಾರ ಅವರು ದೇರಾಜೆಯವರ ಜೀವನ ಸಾಧನೆಗಳ ಬಗ್ಗೆ ವಿವರಣೆಯನ್ನು ಅಂದವಾಗಿ ನೀಡಿರುತ್ತಾರೆ. ಪುಸ್ತಕದ ಕೊನೆಯಲ್ಲಿ ಶ್ರೀ ದೇರಾಜೆಯವರು ಬರೆದ ಕೃತಿಗಳ ಬಗೆಗೆ ವಿವರಗಳನ್ನು ನೀಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ