Friday, September 20, 2024
Homeಯಕ್ಷಗಾನಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 2)

ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 2)

(ಕಳೆದ ಸಂಚಿಕೆ ಭಾಗ-1ರಿಂದ) 

ಯಕ್ಷಗಾನ ಕೇಂದ್ರ, ಉಡುಪಿ:

ಯಕ್ಷಗಾನಕ್ಕೊಂದು ತರಬೇತಿ ಸಂಸ್ಥೆಯೋ ಅಥವಾ ಶಿಕ್ಷಣ ಶಾಲೆಯೋ ಇಲ್ಲದ ಕೊರತೆಯನ್ನು ಹೋಗಲಾಡಿಸುವ ಪ್ರಯತ್ನವೋ ಎಂಬಂತೆ ಹಾಗೂ ಇದಕ್ಕೊಂದು ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಯಕ್ಷಗಾನ ವಿದ್ವಾಂಸರಿಂದ ವ್ಯಾಪಕ ಚರ್ಚೆಗಳಾದುವು. ಸಮಾಲೋಚನೆಗಳನ್ನು ನಡೆಸಿದರು. ಅಲ್ಲಲ್ಲಿ ಯಕ್ಷಗಾನ ಕಲಿಕಾ ಕೇಂದ್ರಗಳು ಜನ್ಮ ತಾಳಿದುವು. ಇವೆಲ್ಲದರ ಫಲಶೃತಿಯೋ ಎಂಬಂತೆ ಡಾ. ಕೆ.ಶಿವರಾಮ ಕಾರಂತ ಮತ್ತು ಪ್ರೊ| ಕೆ.ಎಸ್. ಹರಿದಾಸ ಭಟ್ಟರ ಆಸಕ್ತಿಯಲ್ಲಿ ಹಾಗೂ ಇನ್ನಿತರ ಮಹನೀಯರ ಸಹಕಾರದಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಬಡಗು ತಿಟ್ಟು ಯಕ್ಷಗಾನದ ಕಲಿಕಾ ಕೇಂದ್ರವಾದ ‘ಯಕ್ಷಗಾನ ಕೇಂದ್ರ, ಉಡುಪಿ’. ಯಕ್ಷಗಾನ ಕೇಂದ್ರ ಷ್ಠಾಪನೆಯಾದದ್ದು 1971ರಲ್ಲಿ. ಆಗ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿದ್ದ  ಪ್ರೊ|  ಕೆ.ಎಸ್. ಹರಿದಾಸ ಭಟ್ಟರ ಪ್ರಯತ್ನದಿಂದ ಅದೇ ಕಾಲೇಜಿನ ಹೊರಗಿನ ಕಟ್ಟಡವೊಂದರಲ್ಲಿ ‘ಯಕ್ಷಗಾನ ಕೇಂದ್ರ, ಉಡುಪಿ’ ಎಂಬ ಯಕ್ಷಗಾನ ತರಬೇತಿ ಶಾಲೆ ತಲೆಯೆತ್ತಿ ನಿಂತಿತು.

ಈ ಕೇಂದ್ರದ ಮೊದಲ ಗುರು ಮತ್ತು ಮುಖ್ಯಸ್ಥರಾಗಿದ್ದವರು ಬಡಗುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ದಿ| ವೀರಭದ್ರ ನಾಯಕ್. ಕಲಾವಿದರಾಗಿ ನಲುವತ್ತಕ್ಕೂ ಹೆಚ್ಚು ತಿರುಗಾಟಗಳನ್ನು ನಡೆಸಿ ಯಕ್ಷಗಾನದಿಂದ ನಿವೃತ್ತರಾಗಿದ್ದವರು. ಹಿಮ್ಮೇಳ ಗುರುಗಳಾಗಿದ್ದವರು ಭಾಗವತರಾದ ದಿ| ನೀಲಾವರ ರಾಮಕೃಷ್ಣಯ್ಯ ಮತ್ತು ಮದ್ದಳೆಗಾರರಾದ ಹಿರಿಯಡಕ ಗೋಪಾಲ ರಾವ್. ಭಾರತ ಸರಕಾರದ ಸಂಸ್ಕೃತಿ ಇಲಾಖೆಯಿಂದ ತಿಂಗಳಿಗೆ ರೂಪಾಯಿ ಐನೂರರಂತೆ ಮುಖ್ಯಸ್ಥರಾದ ವೀರಭದ್ರ ನಾಯಕರಿಗೆ ಗೌರವಧನ ಲಭಿಸುತ್ತಿತ್ತು. ಹಿಮ್ಮೇಳ ಗುರುಗಳ ವೇತನವನ್ನು ಎಂ.ಜಿ.ಎಂ ಕಾಲೇಜು ಟ್ರಸ್ಟ್ ಪಾವತಿಸುತ್ತಿತ್ತು. ಪ್ರಾರಂಭದ ವರ್ಷಗಳಲ್ಲಿ 10 ವಿದ್ಯಾರ್ಥಿಗಳಿರುವ ಒಂದು ತಂಡವನ್ನು ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಉಡುಪಿಯ ಶ್ರೀಕೃಷ್ಣ ಮಠದಿಂದ ಉಚಿತ ಆಹಾರ ವ್ಯವಸ್ಥೆಯನ್ನು ಮಾಡಲಾಯಿತು. ಕರ್ನಾಟಕ ಸರಕಾರದ ವತಿಯಿಂದ 10 ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಮಂಜೂರು ಮಾಡಲಾಯಿತು. ಡಾ. ಶಿವರಾಮ ಕಾರಂತರೂ ಕೇಂದ್ರದ ಯಕ್ಷಗಾನ ಗುರುಗಳೂ ಸೇರಿ ರಚಿಸಿದ ಯಕ್ಷಗಾನ ಪಠ್ಯದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಈ ಪಠ್ಯವು ಸುಧಾರಣೆಗೊಂಡು ಈಗ ಸುಧಾರಿತ ಪಠ್ಯವನ್ನು ಅನುಸರಿಸಲಾಗುತ್ತಿದೆ. ಸುಮಾರು 350 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿಗೊಂಡು, ಕಲಿತು ವಿವಿಧ ಮೇಳಗಳಲ್ಲಿ ಹಾಗೂ ಹವ್ಯಾಸಿ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದಾರೆ. ಈ ಕೇಂದ್ರವು ವಿದೇಶಿಗರನ್ನು ಕೂಡ ಆಕರ್ಷಿಸಿದೆ. ಹಲವಾರು ವಿದೇಶಿ ಕಲಾಸಕ್ತ ವಿದ್ಯಾರ್ಥಿಗಳೂ ಇಲ್ಲಿ ಯಕ್ಷಗಾನವನ್ನು ಕಲಿತಿದ್ದಾರೆ ಇವರಲ್ಲಿ ಜರ್ಮನಿಯ ರಾಮಾ, ಆಸ್ಟ್ರೇಲಿಯಾದ ಜಾನ್ ಅಲೀ, ಅಮೆರಿಕಾದ ಶ್ರೀಮತಿ ಮಾರ್ಥಾ ಆಷ್ಟನ್, ಇಟಲಿಯ ಬ್ರೂನಾ ಸಿರಬೆಲ್ಲಾ ಸೇರಿದ್ದಾರೆ. ಈ ಕೇಂದ್ರದ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಕಾರ್ಯಕಾರಿ ಸಮಿತಿ ಇದೆ. ಕೇಂದ್ರದ ನಿರ್ವಹಣೆಯಲ್ಲಿ ಹೆಚ್ಚಿನ ಕೊಡುಗೆ ಡಾ. ಶಿವರಾಮ ಕಾರಂತ ಮತ್ತು ಕೆ.ಎಸ್. ಹರಿದಾಸ ಭಟ್ಟರದು. ಕೇಂದ್ರದ ಯಶಸ್ಸಿಗೆ ಕಾರಣರಾದವರಲ್ಲಿ ಇಲ್ಲಿ ಗುರುಗಳಾಗಿ ವಿದ್ಯಾಧಾರೆಯೆರೆದ ವೀರಭದ್ರ ನಾಯಕ್, ನೀಲಾವರ ಲಕ್ಷ್ಮೀನಾರಾಯಣಯ್ಯ, ಮಹಾಬಲ ಕಾರಂತ್, ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಕಾಮತ್, ಸಂಜೀವ ಸುವರ್ಣ ಮೊದಲಾದವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪ್ರಸ್ತುತ ಈ ತರಬೇತಿ ಕೇಂದ್ರದಲ್ಲಿ  ಶ್ರೀ ಸಂಜೀವ ಸುವರ್ಣರು ಗುರುಗಳಾಗಿ ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಬಡಗು ತಿಟ್ಟು ಯಕ್ಷಗಾನದಲ್ಲಿ ಮುಂಚುತ್ತಿರುವ ಹಲವಾರು ಕಲಾವಿದರು ಯಕ್ಷಗಾನ ಕೇಂದ್ರ, ಉಡುಪಿಯ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಗಮನಾರ್ಹ. (ಮುಂದಿನ ಸಂಚಿಕೆ ಭಾಗ – 3ರಲ್ಲಿ ಮುಂದುವರಿಯುವುದು)

ಲೇಖನ:ಮನಮೋಹನ್ ವಿ. ಎಸ್. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments