Saturday, January 18, 2025
Homeಪುಸ್ತಕ ಮಳಿಗೆಏಳು ಯಕ್ಷಗಾನ ಪ್ರಸಂಗಗಳು - ಸಂಗ್ರಹ ಜಿ. ಎನ್. ಅನಂತವರ್ಧನ 

ಏಳು ಯಕ್ಷಗಾನ ಪ್ರಸಂಗಗಳು – ಸಂಗ್ರಹ ಜಿ. ಎನ್. ಅನಂತವರ್ಧನ 

ಶೀರ್ಷಿಕೆಯೇ ಸೂಚಿಸುವಂತೆ ಈ ಸಂಪುಟದಲ್ಲಿ ಏಳು ಯಕ್ಷಗಾನ ಪ್ರಸಂಗಗಳನ್ನು ನೀಡಲಾಗಿದೆ. ಎಲ್ಲವೂ ಪುರಾಣ ಪ್ರಸಂಗಗಳು. ಈ ಹೊತ್ತಗೆಯು ಪ್ರಕಟವಾದುದು 2012ನೇ ಇಸವಿ ಜುಲೈ 22ರಂದು. ಈ ಕೃತಿಯನ್ನು ಕೀರ್ತಿಶೇಷ ಶಿಕಾರಿಪುರ ಹರಿಹರೇಶ್ವರ ಅವರಿಗೆ ಅರ್ಪಿಸಲಾಗಿದ್ದು, ಶ್ರೀಯುತರು ವೈದಿಕರೂ ಜ್ಯೋತಿಷ್ಯರೂ ಆಗಿದ್ದು ಜತೆಗೆ ಸಾಹಿತ್ಯ, ಸಂಗೀತ, ಯಕ್ಷಗಾನಾಸಕ್ತರೂ ಆಗಿದ್ದರು. ಅವರ ಎರಡನೇ ಪುಣ್ಯತಿಥಿಯಂದು ಈ ಸಂಪುಟವು ಪ್ರಕಟವಾಗಿ ಓದುಗರ ಕೈ ಸೇರಿತ್ತು. ಯಕ್ಷಗಾನ ಪ್ರಿಯರಾಗಿದ್ದ ಹರಿಹರೇಶ್ವರರು ನೂರಕ್ಕೂ ಹೆಚ್ಚಿನ ಪ್ರಸಂಗ ಪುಸ್ತಕಗಳನ್ನು ಸಂಗ್ರಹಿಸಿ ಇರಿಸಿದ್ದರಂತೆ. ಇವುಗಳಲ್ಲಿ ಶ್ರೀ ಹರಿಹರೇಶ್ವರರಿಗೆ ಪ್ರಿಯವಾದ ಏಳು ಪ್ರಸಂಗಗಳನ್ನು ಆಯ್ಕೆಮಾಡಿ ಪುಸ್ತಕ ರೂಪದಲ್ಲಿ ಮುದ್ರಿಸಿ ಪ್ರಕಟಿಸಲಾಗಿತ್ತು. ಶ್ರೀ ಹರಿಹರೇಶ್ವರರು ಅಮೇರಿಕಾದಲ್ಲಿ ನೆಲೆಸಿರುವಾಗಲೂ ಅಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲು ಕಾರಣರಾಗಿದ್ದರು. ‘ಅಮೆರಿಕ ಕನ್ನಡ’ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಯಕ್ಷಗಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಿದ ಮಹನೀಯರಿವರು. ಈ ಎಲ್ಲಾ ವಿಚಾರಗಳನ್ನು ನಾಗಲಕ್ಷ್ಮಿ ಹರಿಹರೇಶ್ವರ ಮೈಸೂರು ಇವರು ‘ಪ್ರಸ್ತಾವನೆ’ ಎಂಬ ಲೇಖನದಡಿ ವಿವರವಾಗಿ ತಿಳಿಸಿರುತ್ತಾರೆ. ಈ ಪುಸ್ತಕದ ಸಂಪಾದಕರು ಶ್ರೀ ಜಿ.ಎನ್. ಅನಂತವರ್ಧನ ಅವರು. ಒಟ್ಟು ಇನ್ನೂರ ಐವತ್ತೆರಡು ಪುಟಗಳಿಂದ ಕೂಡಿದ ಪುಸ್ತಕ ಇದು. ಈ ಸಂಪುಟದಲ್ಲಿ ಗಣಪತಿ ಪ್ರತಾಪ ( ಉಜ್ರೆ ವಾಸುದೇವ ನಾಯ್ಕ) ನಾರದ ಪ್ರತಾಪ ( ಹೆಬ್ರಿ ಖಂಡಿಗೆ ಪದ್ಮನಾಭ ಜನ್ನೇರಿ), ಶಿವ ನಾಮ ಮಹಿಮೆ (ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್), ಅನಂತನ ವ್ರತ ಮಹಾತ್ಮೆ (ಪಂಡಿತರಿಂದ ಪರಿಶೋಧಿಸಲ್ಪಟ್ಟು ಪಾವಂಜೆ ಗುರುರಾಯರಿಂದ ಪ್ರಕಟಿತ), ಸಹದೇವ ದಿಗ್ವಿಜಯ (ಎಸ್. ಗಣಪಯ್ಯ ಶೆಟ್ಟಿ), ದ್ರೌಪದೀ ಪ್ರತಾಪ (ಕಡಂದಲೆ ಬಿ. ರಾಮರಾವ್) ಎಂಬ ಏಳು ಪೌರಾಣಿಕ ಪ್ರಸಂಗಗಳಿವೆ. ಎಲ್ಲಾ ಪ್ರಸಂಗಗಳ ಕಥಾಸಾರವನ್ನೂ ಪಾತ್ರಗಳ ವಿವರವನ್ನೂ ನೀಡಲಾಗಿದ್ದು ಇದರಿಂದ ಓದುಗರಿಗೆ ಕಲಾವಿದರಿಗೆ ಅನುಕೂಲವೇ ಆಗಲಿದೆ. ಆರ್ಥಿಕ ನೆರವನ್ನು ನೀಡಿದವರು ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಮತ್ತು ಶ್ರೀಮತಿ ವಿಜಯರಾಜ್ ಜೋಷಿ ಇವರುಗಳು. ಪುಸ್ತಕದ ಹೊರ ಆವರಣದಲ್ಲಿ  ನಾಗಲಕ್ಷ್ಮಿ ಹರಿಹರೇಶ್ವರರು ಬರೆದ ‘ಪ್ರಸ್ತಾವನೆ’ ಲೇಖನದ ಮುಖ್ಯ ವಿಚಾರಗಳನ್ನು ನೀಡಲಾಗಿದೆ. ಈ ಪ್ರಸಂಗ ಸಂಪುಟದ ಪ್ರಕಾಶಕರು ನವಭಾರತೀ ಪ್ರಕಾಶನ, ಸರಸ್ವತಿಪುರಂ, ಮೈಸೂರು.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments