‘ಯಕ್ಷ ರಸ ಚೇತನ’ ಎಂಬ ಈ ಹೊತ್ತಗೆಯು ಪ್ರಕಟವಾದುದು 1994ರಲ್ಲಿ. ಕಲಾತಪಸ್ವಿ, ಶ್ರೇಷ್ಠ ಕಲಾವಿದ, ಮಹಾನ್ ಸಾಧಕ, ಪ್ರಸಂಗಕರ್ತರಾದ, ಶ್ರೀ ಕೀರಿಕ್ಕಾಡು ದಿ| ವಿಷ್ಣು ಭಟ್ಟರ ಕುರಿತಾದ ಪುಸ್ತಕವಿದು. ಶ್ರೀಯುತರು ಸ್ಥಾಪಿಸಿ ಬೆಳೆಸಿದ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ವರ್ಷವೇ ಈ ಪುಸ್ತಕವು ಪ್ರಕಟವಾಗಿತ್ತು. ಪ್ರಕಾಶಕರು ಸುವರ್ಣ ಮಹೋತ್ಸವ ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿ, ದೇಲಂಪಾಡಿ. ಸಂಪಾದಕರು – ಪ್ರಾಧ್ಯಾಪಕರೂ, ತಾಳಮದ್ದಳೆ ಅರ್ಥಧಾರಿಗಳೂ ಲೇಖಕರೂ ಆಗಿರುವ ಶ್ರೀ ವೆಂಕಟರಾಮ ಭಟ್ಟ ಸುಳ್ಯ. ಸಲಹೆ ಡಾ. ರಮಾನಂದ ಬನಾರಿ ಮತ್ತು ಚಂದ್ರಶೇಖರ ಏತಡ್ಕ. ‘ನಿಮ್ಮಲ್ಲಿ’ ಎಂಬ ಶೀರ್ಷಿಕೆಯಡಿ ಸಂಪಾದಕರಾದ ಶ್ರೀ ವೆಂಕಟರಾಮ ಭಟ್, ಸುಳ್ಯ. ಅವರು ಈ ಹೊತ್ತಗೆಯ ಬಗೆಗೆ ವಿವರಗಳನ್ನು ನೀಡಿರುತ್ತಾರೆ. ಬಳಿಕ ಸುವರ್ಣ ಮಹೋತ್ಸವ ಮತ್ತು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿಯ ಪದಾಧಿಕಾರಿಗಳಾಗಿದ್ದವರ ಹೆಸರುಗಳನ್ನು ನೀಡಲಾಗಿದೆ. ಕೀರಿಕ್ಕಾಡು ಮಾಸ್ತರರ ವಂಶಾವಳೀ ವಿವರವನ್ನು ಕೊಡಲಾಗಿದೆ.
ಈ ಪುಸ್ತಕದಲ್ಲಿ ಒಟ್ಟು ಮೂವತ್ತೊಂದು ಲೇಖನಗಳಿವೆ. ಪೆರ್ಲ ಕೃಷ್ಣ ಭಟ್, ಕಯ್ಯಾರ ಕಿಂಞಣ್ಣ ರೈ, ಮಂದಾರ ಕೇಶವ ಭಟ್, ರಾಮಚಂದ್ರ ಉಚ್ಚಿಲ, ಅಂಬೆಮೂಲೆ ಗೋವಿಂದ ಭಟ್, ಅಮೃತ ಸೋಮೇಶ್ವರ, ಅರ್ತಿಕಜೆ, ಕೆ.ಎಂ.ರಾಘವ ನಂಬಿಯಾರ್, ಪಟ್ಟಾಜೆ ವೆಂಕಟ್ರಮಣ ಭಟ್, ಎಂ. ಪ್ರಭಾಕರ ಜೋಶಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಕೆದಂಬಾಡಿ ಜತ್ತಪ್ಪ ರೈ, ಕುಂಬಳೆ ನಾರಾಯಣ ಗಟ್ಟಿ, ಕೆ. ವಿ. ಗೋವಿಂದ ಭಟ್ಟ, ವಿಚಿತ್ರ ಏತಡ್ಕ, ಹರಿನಾರಾಯಣ ಮಾಡಾವು, ಡಾ. ರಮಾನಂದ ಬನಾರಿ, ಉಡುಪುಮೂಲೆ ಗೋಪಾಲಕೃಷ್ಣ ಭಟ್, ಎಸ್.ವಿ. ಖಂಡಿಗೆ, ಗಣೇಶ್ ಕುತ್ಯಾಡಿ, ವೆಂಕಟರಾಜ ಪುಣಿಚಿತ್ತಾಯ,ತುದಿಯಡ್ಕ ವಿಷ್ಣ್ವಯ್ಯ, ಪ್ರೊ| ವೇಣುಗೋಪಾಲ ಕಾಸರಗೋಡು, ಕೇದಗಡಿ ಗುಡ್ಡಪ್ಪ ಗೌಡ, ಗಣಪತಿ ದಿವಾಣ, ಸೊಡಂಕೂರು ತಿರುಮಲೇಶ್ವರ ಭಟ್ಟ, ಡಾ. ಸೀ. ಹೊಸಬೆಟ್ಟು, ಅಡ್ಕ ಗೋಪಾಲಕೃಷ್ಣ ಭಟ್, ಡಾ. ಚಂದ್ರಶೇಖರ ದಾಮ್ಲೆ, ಬಿ.ಕೆ.ಭಟ್ ಇವರುಗಳು ಕೀರಿಕ್ಕಾಡು ಮಾಸ್ತರರ ಕುರಿತು ಬರೆದಿರುವ ಲೇಖನಗಳನ್ನು ನಮಗೆ ಇಲ್ಲಿ ಓದಬಹುದು. ಅಲ್ಲದೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಪ್ಪು ಬಿಳುಪಿನ ಛಾಯಾಚಿತ್ರಗಳೂ ಈ ಪುಸ್ತಕದಲ್ಲಿವೆ.
ಲೇಖನ: ರವಿಶಂಕರ್ ವಳಕ್ಕುಂಜ