ನೆನಪಿನುಂಗುರ- ಸತ್ಯಮೂರ್ತಿ ದೇರಾಜೆ ಈ ಕೃತಿಯು ಪ್ರಕಟವಾದುದು 2007ರಲ್ಲಿ. ದಿ| ಶ್ರೀ ಸತ್ಯಮೂರ್ತಿ ಅವರ ವ್ಯಕ್ತಿತ್ವವನ್ನು ಸಮರ್ಥವಾಗಿ ನಿರೂಪಿಸಿದ ನೆನಪಿನ ಸಂಚಿಕೆಯಾಗಿ ಈ ಹೊತ್ತಗೆಯು ಓದುಗರ ಕೈ ಸೇರಿತ್ತು. ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ ಚೊಕ್ಕಾಡಿ ಎಂಬ ಸಂಸ್ಥೆಯು ಚಿಗುರೊಡೆದುದು 1999ರಲ್ಲಿ. ಸದ್ರಿ ಸಂಸ್ಥೆಯಲ್ಲಿ ಸಕ್ರಿಯರಾಗಿ ಕಲಾ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಶ್ರೀ ಸತ್ಯಮೂರ್ತಿ ದೇರಾಜೆ ಅವರು. ಈ ಸಂಸ್ಥೆಯನ್ನು ಸರ್ವರ ಸಹಕಾರದಿಂದ ಶ್ರೀಯುತರು ಹುಟ್ಟುಹಾಕಿದ್ದರು. ಸಂಸ್ಕೃತಿ ರಂಗದ ರೂವಾರಿಯೇ ಆಗಿದ್ದರು. ತಾಳಮದ್ದಳೆ ಅರ್ಥಧಾರಿಯಾಗಿ, ಉತ್ತಮ ಬರಹಗಾರರಾಗಿ, ಕಲಾಸಂಘಟಕರಾಗಿ, ಸಹೃದಯೀ ಬಂಧುವಾಗಿ ಶ್ರೀ ಸತ್ಯಮೂರ್ತಿ ದೇರಾಜೆ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು. ವಿವಿಧ ಸಹಕಾರೀ ಸಂಸ್ಥೆಗಳಲ್ಲಿ, ಆಡಳಿತ ಮಂಡಳಿಗಳಲ್ಲಿ ಹೊಣೆಯರಿತು ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಶ್ರೀಯುತರ ಜೀವಿತಾವಧಿ 1952 – 2005. ಶ್ರೀ ಸತ್ಯಮೂರ್ತಿ ದೇರಾಜೆ ಅವರ ನೆನಪಿನ ಸಂಚಿಕೆ ‘ನೆನಪಿನುಂಗುರ’ ಇದರ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ,ಚೊಕ್ಕಾಡಿ. ಸಂಪಾದಕರು ಶ್ರೀ ಲಕ್ಷ್ಮೀಶ ತೋಳ್ಪಾಡಿ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಪುಸ್ತಕವಿದು. ಮೊದಲಾಗಿ ಸಂಸ್ಕೃತಿ ರಂಗದ ಅಧ್ಯಕ್ಷರು ಮತ್ತು ಸದಸ್ಯರ ಮನದ ಮಾತುಗಳನ್ನು ರಂಗದ ಅಂತರಂಗ ಎಂಬ ಬರಹದಡಿ ನೀಡಲಾಗಿದೆ. ಸಂಪಾದಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ‘ಮರಳಿ ಪಡೆಯುವ ತನಕ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಬಳಿಕ ಒಟ್ಟು ಮೂವತ್ತೊಂಬತ್ತು ಬರಹಗಳನ್ನು ನೀಡಲಾಗಿದೆ. ಶ್ರೀ ಸತ್ಯಮೂರ್ತಿ ದೇರಾಜೆಯವರ ಕುರಿತು ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ಟ, ವಿದ್ವಾನ್ ಗ. ನಾ. ಭಟ್ಟ, ಉಜಿರೆ ಅಶೋಕ ಭಟ್, ಪಾಲೆಪಾಡಿ ಗಣಪಯ್ಯ ಭಟ್, ಆನೆಕಾರ ಗಣಪಯ್ಯರು, ಕೋಟೆ ವಸಂತಕುಮಾರ, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಲಕ್ಷ್ಮೀನಾರಾಯಣ ಉಬರಡ್ಕ, ಎಂ.ಬಿ. ಸದಾಶಿವ, ಗಂಗಾಧರ ಬೆಳ್ಳಾರೆ, ಎನ್. ಪದ್ಮನಾಭ ಗೌಡ, ಎನ್. ಶೀನಪ್ಪ, ಎಂ.ಟಿ. ಶಾಂತಿಮೂಲೆ, ಪದ್ಯಾಣ ಗಣಪತಿ ಭಟ್, ಸುಬ್ರಾಯ ಚೊಕ್ಕಾಡಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಸ್. ಆರ್. ವಿಜಯಶಂಕರ, ಹರೀಶ್ ಕೇರ, ಡಾ. ಶ್ರೀಕೃಷ್ಣ ಚೊಕ್ಕಾಡಿ, ಪದ್ಯಾಣ ಪರಮೇಶ್ವರ ಭಟ್, ವೆಂಕಟರಾಮ ಭಟ್ಟ ಸುಳ್ಯ, ನಾರಾಯಣ ಕಂಜರ್ಪಣೆ, ಕೆ. ರಾಮ ಜೋಯಿಸ, ಜಿ. ಎಸ್. ಉಬರಡ್ಕ, ವತ್ಸಲಾ ಎಂ.ಎನ್, ಪ್ರಸಾದ್ ರಕ್ಷಿದಿ, ಡಾ. ಕೃಷ್ಣಮೂರ್ತಿ ಪಾರೆ, ಮೂರ್ತಿ ದೇರಾಜೆ, ಸತ್ಯನ್ ದೇರಾಜೆ, ಸಾವಿತ್ರಿ ಕೃಷ್ಣ ಬೆಂಗಳೂರು, ಸತ್ಯವತಿ ಉಬರಡ್ಕ, ರಾಧೆ ಯು. ಪ್ರಸಾದ್, ಸತ್ಯಪ್ರೇಮ ಪಾರೆ, ಜಯಂತಿ ದೇರಾಜೆ, ಸುಧನ್ವಾ ದೇರಾಜೆ ಇವರುಗಳು. ಬಳಿಕ ‘ಹಲವು ಚಿತ್ರ-ನೂರು ನೆನಪು’ ವಿಚಾರದಡಿ ಮೂವತ್ತೆರಡು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಿರುತ್ತಾರೆ. ಸಂಸ್ಕೃತಿ ರಂಗದ ಉಪಾಧ್ಯಕ್ಷರಾಗಿದ್ದ ಭಾಗವತ ಶ್ರೀ ಬೊಮ್ಮೆಟ್ಟಿ ಮೋಹನ ಭಟ್ ಅವರು 2006ರಲ್ಲಿ ನಿಧನರಾಗಿದ್ದು ಅವರ ವ್ಯಕ್ತಿತ್ವವನ್ನು ನೆನೆವ ಪದಗಳಾಗಿ ಈ ಸಂಪುಟದಲ್ಲಿ ಅಳವಡಿಸಲಾಗಿದೆ. ಅವರ ಬಗೆಗೆ ಕೆ.ವಿಶ್ವವಿನೋದ ಬನಾರಿ ಮತ್ತು ಸುಧನ್ವಾ ದೇರಾಜೆಯವರು ಬರೆದ ‘ನೆನಪ ನೇವರಿಸುವ ಮೋಹನ’ ಮತ್ತು ‘ಮೌನಕ್ಕೊಂದು ಮೋಹನ ರಾಗ’ ಎಂಬ ಲೇಖನಗಳನ್ನು ನೀಡಲಾಗಿದೆ. ಲೇಖನಗಳ ನಡುವೆ, ಶ್ರೀ ಸತ್ಯಮೂರ್ತಿ ದೇರಾಜೆಯವರು ತಾಳಮದ್ದಳೆ ಅರ್ಥಧಾರಿಯಾಗಿ ಸೃಜನಶೀಲತೆಯಿಂದ ಹೇಳುತ್ತಿದ್ದ ಸಂಭಾಷಣೆಗಳನ್ನು ನೀಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ