ಯಕ್ಷಗಾನ ಮುಖವರ್ಣಿಕೆ ಎಂಬ ಈ ಹೊತ್ತಗೆಯು 2005ನೇ ಇಸವಿಯಲ್ಲಿ ಮುದ್ರಿಸಲ್ಪಟ್ಟು ಪ್ರಕಟವಾಗಿತ್ತು. ಈ ಪುಸ್ತಕದ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ. ಸಂಪಾದಕರು ಶ್ರೀ ಎಚ್. ಬಿ. ಎಲ್. ರಾವ್ ಅವರು.
ಡಾ.ಕೆ.ಎಂ.ರಾಘವ ನಂಬಿಯಾರ್, ಕೆ.ಎಲ್. ಕುಂಡಂತಾಯ ಟಿ. ನಾಗರಾಜ್ ಅವರುಗಳು ಸಂಪಾದಕ ಮಂಡಳಿಯಲ್ಲಿದ್ದು ಈ ಕೃತಿಯ ಪ್ರಕಟಣೆಗಾಗಿ ಶ್ರಮಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿಗಳನ್ನು ಲೇಖನ ರೂಪದಲ್ಲಿ ನೀಡಲಾಗಿದ್ದು, ಈ ವಿಚಾರದಲ್ಲಿ ಸಹಕರಿಸಿದವರು ಶ್ರೀ ಪ್ರೊ। ಎಂ.ಎಲ್.ಸಾಮಗರು. ಈ ಪುಸ್ತಕವನ್ನು ತಾಳಿಪಾಡಿ ನಾರಾಯಣ ಶಾಸ್ತ್ರಿಗಳಿಗೆ ಗೌರವಪೂರ್ವಕ ಅರ್ಪಿಸಲಾಗಿದೆ. ಮೊದಲಿಗೆ ಶ್ರೀ ಶ್ರೀ ಎಚ್. ಬಿ. ಎಲ್. ರಾಯರ ‘ಮುಖವರ್ಣಿಕೆ ಪ್ರಚೋದನೆ’ ಎಂಬ ಕನ್ನಡ ಲೇಖನವನ್ನೂ ‘Make up in Yakshagana’ ಎಂಬ ಇಂಗ್ಲಿಷ್ ಲೇಖನವನ್ನೂ ನೀಡಲಾಗಿದೆ. ಬಳಿಕ ವಿದ್ವಾಂಸರಾದ ಡಾ.ಕೆ.ಎಂ.ರಾಘವ ನಂಬಿಯಾರರು ಬರೆದ ‘ಯಕ್ಷಗಾನ ಮುಖವರ್ಣಿಕೆ’ ಎಂಬ ಬರಹವಿದೆ. ಯಕ್ಷಗಾನದ ಉಭಯ ತಿಟ್ಟುಗಳ ಬಣ್ಣಗಾರಿಕೆಯ ಬಗೆಗೆ ಶ್ರೀ ನಂಬಿಯಾರರು ವಿವರವಾಗಿ ತಿಳಿಸಿರುತ್ತಾರೆ. ಪರಿಶಿಷ್ಟ 1ರಡಿಯಲ್ಲಿ ವಿವಿಧ ಕಿರೀಟಗಳ ಬಗ್ಗೆ ಪರಿಶಿಷ್ಟ 2ರಲ್ಲಿ ಮುಖವರ್ಣಿಕೆಗೆ ಬಳಸುವ ಬಣ್ಣಗಳ ಬಗೆಗೆ, ಅಲ್ಲದೆ ವೇಷಕ್ಕೆ ಬಳಸುವ ಇನ್ನಿತರ ಪರಿಕರಗಳ ಬಗ್ಗೆ ವಿವರವನ್ನು ನೀಡಿರುತ್ತಾರೆ. ಪ್ರೊ| ಎಂ.ಎಲ್.ಸಾಮಗರು Yakshagana – A Brief Introduction ಎಂಬ ಲೇಖನವನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿರುತ್ತಾರೆ. ಯಕ್ಷಗಾನದ ಸೂತ್ರಧಾರಿಗಳು ಎಂಬ ವಿಚಾರದಲ್ಲಿ ಬಲಿಪ ನಾರಾಯಣ ಭಾಗವತರ, ನಾರ್ಣಪ್ಪ ಉಪ್ಪೂರರ, ನೆಡ್ಲೆ ನರಸಿಂಹ ಭಟ್ಟರ, ಹಿರಿಯಡಕ ಗೋಪಾಲ ರಾಯರ ಭಾವಚಿತ್ರಗಳನ್ನು ನೀಡಲಾಗಿದೆ. ಬಳಿಕ ಬಣ್ಣದ ವೇಷ, ಕಾಟು ಬಣ್ಣ, ಹೆಣ್ಣು ಬಣ್ಣ, ವಿಶಿಷ್ಟ ಬಣ್ಣಗಳು, ರಾಜವೇಷ, ಪುಂಡುವೇಷ, ಸ್ತ್ರೀ ವೇಷ, ಬಡಗುತಿಟ್ಟು, ಬಡಗುತಿಟ್ಟು ಬಣ್ಣದ ವೇಷ, ಬಡಗುತಿಟ್ಟು ಹೆಣ್ಣು ಬಣ್ಣ, ವಿದೂಷಕ ಪಾತ್ರಗಳ ಮುಖವರ್ಣಿಕೆಗಳನ್ನು ನೀಡಲಾಗಿದೆ. ಪ್ರಸಂಗ, ವೇಷದ ಹೆಸರು ಮತ್ತು ಕಲಾವಿದರ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಿದ್ದು ಅಧ್ಯಯನಾಸಕ್ತರಿಗೆ, ಕಲಾಭಿಮಾನಿಗಳಿಗೆ ಇದರಿಂದ ಖಂಡಿತಾ ಅನುಕೂಲವಾದೀತು. ಇದು ಒಟ್ಟು ಎಂಬತ್ತನಾಲ್ಕು ಪುಟಗಳಿಂದ ಕೂಡಿದ್ದು, ಪುಸ್ತಕದ ಹೊರ ಆವರಣದಲ್ಲಿ ಶ್ರೀ ಈಶ್ವರಯ್ಯ ಅವರು ಬರೆದ ಇಂಗ್ಲಿಷ್ ಭಾಷೆಯ ಲೇಖನವನ್ನು ಕೊಡಲಾಗಿದೆ.
ಲೇಖಕ: ರವಿಶಂಕರ್ ವಳಕ್ಕುಂಜ