Thursday, November 21, 2024
Homeಯಕ್ಷಗಾನಭಾಗವತ ಹಂಸ - ಶ್ರೀ ಪುತ್ತಿಗೆ ರಘುರಾಮ ಹೊಳ್ಳ

ಭಾಗವತ ಹಂಸ – ಶ್ರೀ ಪುತ್ತಿಗೆ ರಘುರಾಮ ಹೊಳ್ಳ


ತೆಂಕುತಿಟ್ಟಿನ ಖ್ಯಾತ, ಅಗ್ರಮಾನ್ಯ ಭಾಗವತರುಗಳಲ್ಲಿ ಪುತ್ತಿಗೆ ಶ್ರೀ ರಘುರಾಮ ಹೊಳ್ಳರೂ ಒಬ್ಬರು. ಪದವೀಧರರಾದ ಇವರು ಯಕ್ಷಗಾನ ಪ್ರಪಂಚದಲ್ಲೂ ಉನ್ನತ ಪದವಿಯನ್ನು ಹೊಂದಿ ಕಲಾಭಿಮಾನಿಗಳನ್ನು ರಂಜಿಸುತ್ತಿರುವುದು ಸಂತೋಷದ ವಿಚಾರ. ಪುತ್ತಿಗೆ ರಘುರಾಮ ಹೊಳ್ಳರ ತೀರ್ಥರೂಪರು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರು ಶ್ರೀ ಧರ್ಮಸ್ಥಳ ಮೇಳವನ್ನು ಶ್ರೀ ಕ್ಷೇತ್ರದ  ಧರ್ಮಾಧಿಕಾರಿಗಳ ನಿರ್ದೇಶನದಲ್ಲಿ ನಾಲ್ಕು ವರ್ಷಗಳ ಕಾಲ ನಡೆಸಿದವರು. ತೀರ್ಥರೂಪರು ಮುನ್ನಡೆಸಿದ ಪ್ರಸಿದ್ಧ ಮೇಳದಲ್ಲಿ ಪ್ರಧಾನ ಭಾಗವತರಾಗಿ ವ್ಯವಸಾಯ ಮಾಡುವ ಅವಕಾಶವು ದೊರೆತ ಪುತ್ತಿಗೆ ರಘುರಾಮ ಹೊಳ್ಳರು ನಿಜಕ್ಕೂ ಭಾಗ್ಯವಂತರು.

ಕದ್ರಿ ಮೇಳದಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟ, ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹಾಗೂ ಹಿರಿಯ ಕಲಾವಿದರ ಒಡನಾಟವು ನನಗೆ ಬೆಳೆದು ಕಾಣಿಸಿಕೊಳ್ಳಲು ಅವಕಾಶವಾಗಿತ್ತು ಎಂಬ ವಿಚಾರವನ್ನು ಶ್ರೀ ಹೊಳ್ಳರು ಪ್ರಾಮಾಣಿಕರಾಗಿ ಒಪ್ಪಿಕೊಳ್ಳುತ್ತಾರೆ.   ಯಕ್ಷ ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಹುಟ್ಟೂರಿನ ಬಗೆಗೆ ಕಲಾಭಿಮಾನಿಗಳು ಪ್ರಶ್ನಿಸುವುದುಂಟು. ಒಂದೇ ಹೆಸರಿನ ಊರುಗಳು ಹಲವು ಇದ್ದಾಗ ಆಗುವ, ಹುಟ್ಟಿಕೊಳ್ಳುವ ಸಂಶಯ ಇದು. ಕಾಸರಗೋಡು ಪ್ರದೇಶದ ಕುಂಬಳೆ ಸಮೀಪದ ಪುತ್ತಿಗೆಯೇ ಭಾಗವತರ ಹಿರಿಯರೆಲ್ಲಾ ವಾಸಿಸಿದ್ದ ಊರು. ಇವರು ಜ್ಯೋತಿಷ್ಯ ಮನೆತನದವರು. ಶ್ರೀ ರಘುರಾಮ ಹೊಳ್ಳರ ತೀರ್ಥರೂಪರು ತೆಂಕುತಿಟ್ಟಿನ ಖ್ಯಾತ ಭಾಗವತರು. ಪುತ್ತಿಗೆ ಜೋಯಿಸರೆಂದೇ ಅವರನ್ನು ಕಲಾಭಿಮಾನಿಗಳು ಗುರುತಿಸಿದ್ದರು. ಶ್ರೀಯುತರ ಮನೆ ಪುತ್ತಿಗೆಯಲ್ಲಿದ್ದುದು.

ಬಳಿಕ ಅವರು ಬೋವಿಕ್ಕಾನ ಎಂಬಲ್ಲಿ ನೆಲೆಸಿದ್ದರು. ಇದು ಕಾಸರಗೋಡು ಮತ್ತು ಮುಳ್ಳೇರಿಯಗಳ ಮಧ್ಯೆ ಸಿಗುವ ಸ್ಥಳ. ಪುತಿಗೆ ರಾಮಕೃಷ್ಣ ಜೋಯಿಸ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ರಘುರಾಮ ಹೊಳ್ಳರು ಈ ಲೋಕದ ಬೆಳಕನ್ನು ಕಂಡವರು. ಪ್ರಾಥಮಿಕ ವಿದ್ಯಾಭ್ಯಾಸ ಬೋವಿಕ್ಕಾನ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸ ಎಡನೀರು ಸ್ವಾಮೀಜಿಸ್ ಹೈಸ್ಕೂಲಿನಲ್ಲಿ. ಎಳವೆಯಲ್ಲಿ ಶ್ರೀ ಹೊಳ್ಳರು ಕರ್ನಾಟಕ ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದರು. ಶ್ರೀಕೃಷ್ಣ ಶರ್ಮ ಎಂಬವರಿಂದ ಸಂಗೀತ ಕಲಿತಿದ್ದರು. ಮುಂದುವರಿಸಲು ಅನಾನುಕೂಲವಾದರೂ ಯಕ್ಷಗಾನ ಭಾಗವತಿಕೆಗೆ ಇದರಿಂದ ಅನುಕೂಲವಾಗಿತ್ತು. ಬಾಲ್ಯದಲ್ಲಿ ಇವರು ಮೊದಲು ಕಲಿತುದು ಮದ್ದಳೆಗಾರಿಕೆಯನ್ನು.

ಮವ್ವಾರು ಕಿಟ್ಟಣ್ಣ ಭಾಗವತರು ಇವರ ಬೋವಿಕ್ಕಾನ ಮನೆಗೆ ಬಂದು ರಘುರಾಮ ಹೊಳ್ಳರ ಅಣ್ಣಂದಿರಾದ ಶ್ರೀ ಚಂದ್ರಶೇಖರ ಹೊಳ್ಳರಿಗೆ ಭಾಗವತಿಕೆಯನ್ನೂ ಶ್ರೀ ವಾಸುದೇವ ಹೊಳ್ಳರಿಗೆ ಚೆಂಡೆ, ಮದ್ದಳೆ ವಾದನವನ್ನೂ ಕಲಿಸುತ್ತಿದ್ದರು. ಮವ್ವಾರು ಕಿಟ್ಟಣ್ಣ ಭಾಗವತರಿಂದ ರಘುರಾಮ ಹೊಳ್ಳರು ಅಣ್ಣನ ಜತೆಯಲ್ಲಿಯೇ ಚೆಂಡೆ ಮದ್ದಳೆಗಾರಿಕೆಯನ್ನು ಅಭ್ಯಸಿಸಿದ್ದರು.

ಅಣ್ಣ ಚಂದ್ರಶೇಖರ ಹೊಳ್ಳರಿಗೆ ಕಿಟ್ಟಣ್ಣ ಭಾಗವತರು ಪಾಠ ಮಾಡುವುದನ್ನು ನೋಡಿ, ಕೇಳಿಯೇ ಭಾಗವತಿಕೆಯನ್ನು ಮನನ ಮಾಡಿಕೊಂಡಿದ್ದರು. ಭಾಗವತಿಕೆಯನ್ನು ಪ್ರತ್ಯಕ್ಷವಾಗಿ ಯಾರಿಂದಲೂ ಕಲಿತವರಲ್ಲ. ಆದರೂ ಯಕ್ಷಗಾನದ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದು, ತೊಡಗಿಸಿಕೊಂಡು ಶ್ರೇಷ್ಠ ಭಾಗವತರಾಗಿ ಕಾಣಿಸಿಕೊಂಡದ್ದು ಒಂದು ಸಾಧನೆಯೇ ಹೌದು. ಆಸಕ್ತಿ, ಆಳವಾದ ಅಧ್ಯಯನ, ಅರ್ಪಣಾ ಭಾವಗಳೆಂಬ ಕ್ರಿಯೆಗಳು ಈ ಸಾಧನೆಯೊಳಗೆ ಅಡಗಿವೆ ಎಂಬುದಂತೂ ಸತ್ಯ. ಮಗನು ಯಕ್ಷಗಾನದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೆ, ಶಿಕ್ಷಣವನ್ನು ಮುಂದುವರಿಸಿ, ಉನ್ನತ ಹುದ್ದೆಗೇರಬೇಕೆಂಬುದು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರ ಬಯಕೆಯಾಗಿತ್ತು. ಮಕ್ಕಳನ್ನು ಆದಷ್ಟು ಯಕ್ಷಗಾನದಿಂದ ದೂರವಿಡಲು ಪ್ರಯತ್ನಿಸುತ್ತಿದ್ದರಂತೆ. ಮಕ್ಕಳು ಕಷ್ಟ ಬರುವುದು ಬೇಡ ಎಂಬ ಸದುದ್ದೇಶವೇ ಇದಕ್ಕೆ ಕಾರಣವು. ಹಾಗಾಗಿಯೇ ಪಿಯುಸಿ ವಿದ್ಯಾರ್ಜನೆಗೆ ರಘುರಾಮ ಹೊಳ್ಳರನ್ನು ಧಾರವಾಡದ ಕಾಲೇಜಿಗೆ ಕಳುಹಿಸಿದ್ದರು.

ಆದರೂ ಪದವಿ ಶಿಕ್ಷಣಕ್ಕೆ ಮಂಗಳೂರಿಗೇ ಬರಬೇಕಾಯಿತು. ಬಹುಶಃ ಕಲಾಮಾತೆಯ ಸಂಕಲ್ಪವೇ ಹಾಗಿರಬೇಕು. ಶ್ರೇಷ್ಠ ಭಾಗವತನಾಗಿ ನನ್ನ ಸೇವೆಯನ್ನು ಮಾಡು ಎಂಬ ಆಕೆಯ ಅವ್ಯಕ್ತ ಆದೇಶವೇ ಇದಕ್ಕೆ ಕಾರಣವಿರಬಹುದು. ಮಂಗಳೂರಿಗೆ ಬಂದ ಮೇಲೆ ಮತ್ತೆ ಯಕ್ಷಗಾನದ ನಂಟು ಬೆಳೆಯಿತು. ಪ್ರದರ್ಶನಗಳನ್ನು ನೋಡುತ್ತಾ ಹಿರಿಯ ಭಾಗವತರುಗಳು ಆಟ ಆಡಿಸುವ ಕ್ರಮಗಳನ್ನು ನೋಡುತ್ತಾ ಅವನ್ನು ಗ್ರಹಿಸಿಕೊಂಡಿದ್ದರು. ಎಳವೆಯಲ್ಲೇ ತೀರ್ಥರೂಪರೊಂದಿಗೆ ಅವರ ಪದ್ಯಕ್ಕೆ ಮದ್ದಳೆಗಾರನಾಗಿ ಸಹಕರಿಸಿದ್ದೂ ಇದೆ.

ಇದರಿಂದ ಅನುಕೂಲವೇ ಆಗಿತ್ತು. ಪದವಿ ಶಿಕ್ಷಣವನ್ನು ಪೂರೈಸಿದರೂ ಆ ಕಾಲದಲ್ಲಿ ಉದ್ಯೋಗ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆದುದರಿಂದ ಯಕ್ಷಗಾನ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಜತೆಯಲ್ಲಿ ಕಲಾಸಕ್ತಿಯೂ ತೀವ್ರವಾಗಿ ಇತ್ತು ಅನ್ನಬಹುದು. ಮೇಳಕ್ಕೆ ಸೇರಿದರೂ ಶ್ರೀ ರಘುರಾಮ ಹೊಳ್ಳರು ‘ಯಕ್ಷಗಾನ ಬೇಡ, ಬೇರೇನಾದರೂ ಉದ್ಯೋಗ ಮಾಡೋಣ’ ಎಂಬ ತೀರ್ಮಾನಕ್ಕೂ ಬಂದಿದ್ದರು. ಕೆಲ ವರ್ಷಗಳ ಕಾಲ ಮಂಗಳೂರಿನ ಪ್ರಸಿದ್ಧ ಶ್ರೀ ಗಣೇಶ ಪ್ರಸಾದ್ ಉಪಾಹಾರ ಗೃಹ, ವಸತಿ ಗೃಹದಲ್ಲಿ ಉದ್ಯೋಗ ಮಾಡಿದ್ದರು. ಆದರೆ ಕಲಾಮಾತೆಯ ಸಂಕಲ್ಪವು ಹುಸಿಯಾಗುವುದುಂಟೇ? ಆಗದು.

ಯಕ್ಷಗಾನ ಎಂಬ ಗಂಡು ಕಲೆಯು ಶ್ರೀ ರಘುರಾಮ ಹೊಳ್ಳರನ್ನು ಕೈಬೀಸಿ ಕರೆಯುತ್ತಿತ್ತು. ಕದ್ರಿ ಮೇಳದ ತಿರುಗಾಟದಲ್ಲಿ ಗೆಜ್ಜೆದ ಪೂಜೆ ಪ್ರಸಂಗದ ಹಾಡುಗಳು ಶ್ರೀ ರಘುರಾಮ ಹೊಳ್ಳರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಅಲ್ಲದೆ ಹಲವಾರು ತುಳು, ಪುರಾಣ ಪ್ರಸಂಗಗಳಲ್ಲಿ ಇವರ ಹಾಡುಗಾರಿಕೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡರು. ಕದ್ರಿ ಮೇಳದ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ಕಳೆದ 29 ವರ್ಷಗಳಿಂದ ವ್ಯವಸಾಯ ಮಾಡಿದ್ದರು. ಮೊದಲು ಕಡತೋಕಾ ಶ್ರೀ ಮಂಜುನಾಥ ಭಾಗವತರ ಜತೆ ತಿರುಗಾಟ.

ಅವರ ನಿವೃತ್ತಿಯ ನಂತರ ಮುಖ್ಯ ಭಾಗವತರಾಗಿ ಅನೇಕ ವರ್ಷಗಳಿಂದ ಕಲಾಸೇವೆಯನ್ನು ಮಾಡಿದ್ದರು. ಪುರಾಣ ಪ್ರಸಂಗಗಳ ಮಾಹಿತಿ, ನಡೆಗಳ ಕುರಿತಾಗಿ ಹೀಗೆಂದೇ ಹೇಳಬಲ್ಲವರು ಶ್ರೀ ರಘುರಾಮ ಹೊಳ್ಳರು. ಪ್ರದರ್ಶನಗಳನ್ನು ಯಶಸ್ವಿಯಾಗಿ ರಂಜಿಸುವಂತೆ ಮಾಡುವ ಕುಶಲಗಾರಿಕೆಯೂ ಸಿದ್ಧಿಸಿದ ಭಾಗವತರಿವರು. ವೇಷಧಾರಿಯ ಸಾಮರ್ಥ್ಯವನ್ನು ಅಳೆದು ತೂಗಿ ಅವನ ಪ್ರತಿಭೆಯನ್ನು ಪರಿಪೂರ್ಣವಾಗಿ ತನ್ನ ಹಾಡುಗಾರಿಕೆಯಿಂದ ಹೊರಗೆಡಹಬಲ್ಲರು.

ಪರಂಪರೆಯ ಜೊತೆಗೆ ಪರಂಪರೆಯ ಮೇರೆಯನ್ನು ಮೀರದ ಹೊಸತನದಿಂದ ತನ್ನ ಹಾಡುಗಾರಿಕೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಳ್ಳುತ್ತಿದ್ದಾರೆ. ಶ್ರೀಯುತರ ಭಾಗವತಿಕೆಯ ಬಗೆಗೆ ಎಲ್ಲರಿಗೂ ತಿಳಿದಿದೆ.  ಸಮಷ್ಟಿ ಕಲೆ. ತನ್ನೊಬ್ಬನ ಪ್ರದರ್ಶನ ಚೆನ್ನಾದರೆ ಸಾಲದು. ಒಟ್ಟು ಪ್ರದರ್ಶನವು ಗೆಲ್ಲಬೇಕು. ರಂಜಿಸಬೇಕು. ಗಾಯನ, ವಾದನ, ಅಭಿನಯ ಇವುಗಳೊಳಗೆ ಸಮನ್ವಯತೆ ಇದ್ದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಎಲ್ಲರ ಮನೋಧರ್ಮವು ಒಂದೇ ಆಗಿರಬೇಕು. ಪೂರ್ವಸಿದ್ಧತೆ ಸಮಾಲೋಚನೆಗಳಿಂದಲೇ ಇದನ್ನು ಸಾಧಿಸಬೇಕು. ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ ಹೌದು. ಆದರೆ ಪ್ರದರ್ಶನವು ರಂಜಿಸಿದಾಗ ಮಾತ್ರ ಈ ಮಾತಿಗೆ ಮೌಲ್ಯವು ಬರುತ್ತದೆ. ನಿರ್ದೇಶಕನ ಪ್ರಯತ್ನವು ಪ್ರದರ್ಶನದ ಯಶಸ್ವಿಗೆ ಒಂದು ಪ್ರಮುಖ ಕೊಡುಗೆಯಾಗಲೇ ಬೇಕು.

ಎಲ್ಲಾ ಕಲಾವಿದರನ್ನೂ ಒಂದು ತಂಡವಾಗಿ ಮುನ್ನಡೆಸುವ ಗುಣವೂ ಭಾಗವತನಿಗಿರಬೇಕು. ಎಂಬುದು ಶ್ರೀ ರಘುರಾಮ ಹೊಳ್ಳರ ಅಭಿಪ್ರಾಯ. ಭಾಗವತನಾಗಿ ಕಾಣಿಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮವನ್ನು ಪಡಬೇಕು. ನಿರಂತರ ಅಧ್ಯಯನಾಸಕ್ತನಾಗಿರಬೇಕು. ಗೊತ್ತಿಲ್ಲದ ವಿಚಾರಗಳನ್ನು ತಿಳಿದವರಿಂದ ಕೇಳಿ ತಿಳಿದು ಅದನ್ನು ಅಳವಡಿಸಿಕೊಳ್ಳುವ ಗುಣವನ್ನು ಹೊಂದಿರಬೇಕು. ಉತ್ತಮ ನಿರ್ವಹಣೆಯನ್ನು ನೀಡಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದು ಕಲಿಕಾಸಕ್ತರಿಗೆ ಶ್ರೀ ರಘುರಾಮ ಹೊಳ್ಳರು ನೀಡುವ ಸಲಹೆಗಳು. ದೇಶ ವಿದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಶ್ರೀ ರಘುರಾಮ ಹೊಳ್ಳರು ತಮ್ಮ ಯಕ್ಷಗಾನ ಹಾಡುಗಾರಿಕೆಯಿಂದ ಕಲಾಭಿಮಾನಿಗಳ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ. ವೃತ್ತಿಜೀವನದಲ್ಲೂ ಕೌಟುಂಬಿಕವಾಗಿಯೂ ಇವರು ಸಂತೃಪ್ತರು.

ಪತ್ನಿ ಶ್ರೀಮತಿ ವಾಣಿ.  ರಘುರಾಮ ಹೊಳ್ಳ ದಂಪತಿಗಳಿಗೆ ಈರ್ವರು ಪುತ್ರಿಯರು. ವಿದ್ಯಾವಂತೆಯರು. ಹಿರಿಯ ಪುತ್ರಿ ಶ್ರೀಲಕ್ಷ್ಮಿ (ಎಂಸಿ.ಎ) ವಿವಾಹಿತೆ. ಕಿರಿಯ ಪುತ್ರಿ ಶ್ರೀವಿದ್ಯಾ (ಬಿ.ಇ) ಉದ್ಯೋಗಿ. ಪುತ್ತಿಗೆ ಶ್ರೀ ರಘುರಾಮ ಹೊಳ್ಳರ ಅಕ್ಕಂದಿರ ಮಕ್ಕಳಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತು ಶ್ರೀ ಗೋಪಾಲಕೃಷ್ಣ ನಾವಡ ಬಾಯಾರು ಇವರುಗಳು ಖ್ಯಾತ ಭಾಗವತರುಗಳಾಗಿ ಕಲಾಭಿಮಾನಿಗಳೆಲ್ಲರಿಗೂ ಪರಿಚಿತರು. ಯಕ್ಷ ಭಾಗವತಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments