Saturday, January 18, 2025
Homeಪುಸ್ತಕ ಮಳಿಗೆ'ಲಿಂಗಣ್ಣ' - ಹೊಸಹಿತ್ತಿಲು ಮಹಾಲಿಂಗ ಭಟ್ಟರ ಅನುಭವ ಕಥನ 

‘ಲಿಂಗಣ್ಣ’ – ಹೊಸಹಿತ್ತಿಲು ಮಹಾಲಿಂಗ ಭಟ್ಟರ ಅನುಭವ ಕಥನ 

ಲಿಂಗಣ್ಣ’ ಎಂಬ ಈ ಹೊತ್ತಗೆಯು ತೆಂಕುತಿಟ್ಟಿನ ಖ್ಯಾತ ಕಲಾವಿದರಾಗಿದ್ದ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರ ಅನುಭವ ಕಥನವಾಗಿ ಪ್ರಕಟವಾಗಿದೆ. ಇದು ಓದುಗರ ಕೈ ಸೇರಿದ್ದು 2011ರಲ್ಲಿ. ಈ ಪುಸ್ತಕದ ಪ್ರಕಾಶಕರು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು, ಉಡುಪಿ. ನಿರೂಪಣೆ ಶ್ರೀ ಜೆಡ್ಡು ಸದಾಶಿವ ಭಟ್ಟರಿಂದ. ಇದು ಒಟ್ಟು ನೂರಾ ತೊಂಬತ್ತೆಂಟು ಪುಟಗಳಿಂದ ಕೂಡಿದ ಪುಸ್ತಕ. ಹೊಸಹಿತ್ತಿಲು ಮಹಾಲಿಂಗ ಭಟ್ಟರ ಬಗೆಗೆ ಮೊದಲೊಂದು ಲೇಖನವನ್ನು ಬರೆಯುವ ಅವಕಾಶವೂ ಸಿಕ್ಕಿತ್ತು. ಅವರ ಕುರಿತಾದ ‘ಲಿಂಗಣ್ಣ’ ಎಂಬ ಈ ಪುಸ್ತಕದ ಕುರಿತಾಗಿ ಬರೆಯುವುದೂ ಭಾಗ್ಯವೆಂದು ಭಾವಿಸುತ್ತೇನೆ.

ಮೊದಲಾಗಿ ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೊ. ಎಚ್. ಕೃಷ್ಣ ಭಟ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕರಿಸಿದ ಸರ್ವರನ್ನೂ ನೆನಪಿಸಿಕೊಂಡಿರುತ್ತಾರೆ. ಬಳಿಕ ವಿದ್ವಾಂಸರೂ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ಡಾ. ಎಂ. ಪ್ರಭಾಕರ ಜೋಶಿ ಅವರು ಬರೆದ ಅಸಾಧಾರಣ ಕಲಾವಿದನೊಬ್ಬನ ಕಥನಕ್ಕೆ ಅಭಿನಂದನೆ’ ಎಂಬ ಲೇಖನವನ್ನು ನೀಡಲಾಗಿದೆ. ತದನಂತರ ಶ್ರೀ ಜೆಡ್ಡು ಸದಾಶಿವ ಭಟ್ಟರು ‘ನಿರೂಪಕನ ಬಿನ್ನಹ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವಿದೆ. ಈ ಪುಸ್ತಕವು ಆತ್ಮಕಥನ, ಲಿಂಗಣ್ಣ-ಅಭಿಮಾನಿಗಳ ದೃಷ್ಟಿಯಲ್ಲಿ,ಚಿತ್ರಸಂಪುಟ, ಅನುಬಂಧಗಳು ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಆತ್ಮಕಥನ ವಿಭಾಗದಲ್ಲಿ ಹುಟ್ಟು ಮತ್ತು ಬೆಳವಣಿಗೆ, ಕೌಟುಂಬಿಕ ಪರಿಸ್ಥಿತಿ, ಪ್ರೀತಿ ಅಭಿಮಾನಗಳೇ ಅಸ್ತಿ ಸಂಪತ್ತು, ತುಳು ಪ್ರಸಂಗಗಳು  ಮತ್ತು ನೈಜತೆ, ಬಡಗು ತಿಟ್ಟಿನೊಂದಿಗೆ ಸಂಪರ್ಕ, ನಾನು ವೇಷ ಮಾಡಿದ ಪ್ರಸಂಗಗಳು, ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು,ಭಾಗವತಿಕೆ ಅರ್ಥಗಾರಿಕೆ  ರಂಗಸ್ಥಳದ ಶಿಸ್ತು, ನನ್ನ ಸಮಕಾಲೀನ ಸಮವಯಸ್ಕ ಕಲಾವಿದರು, ಇಂದಿನ ವೇಷಧಾರಿಗಳು, ಕೆಲವು ಪ್ರಸಂಗಗಳ ಒಳನೋಟ, ಕೆಲವು ವೈಚಾರಿಕ ಪ್ರಶ್ನೆಗಳು, ಕೆಲವು ರಸಮಯ ಸನ್ನಿವೇಶಗಳು, ಯಕ್ಷಗಾನದ ಹೆಸರಿನಲ್ಲಿ ಆಭಾಸಗಳು, ಮುಂದಿನ ಪೀಳಿಗೆಯವರಿಗೆ ಕಿವಿಮಾತು ಎಂಬ ವಿಚಾರಗಳಡಿ ಹೊಸಹಿತ್ತಿಲು ಮಹಾಲಿಂಗ ಭಟ್ಟರ ಮಾತುಗಳನ್ನು ಶ್ರೀ ಜೆಡ್ಡು ಸದಾಶಿವ ಭಟ್ಟರು ಅತ್ಯುತ್ತಮವಾಗಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. ನಿಜಕ್ಕೂ ಇದೊಂದು ಸಾಹಸ. ‘ಲಿಂಗಣ್ಣ ಅಭಿಮಾನಿಗಳ ದೃಷ್ಟಿಯಲ್ಲಿ’ ಎಂಬ ವಿಭಾಗದಲ್ಲಿ ಜೆಡ್ಡು ನಾರಾಯಣ ಭಟ್ಟ, ಡಾ. ಕೆ.ಎಂ.ರಾಘವ ನಂಬಿಯಾರ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟ, ಕುರಿಯ ವೆಂಕಟ್ರಮಣ ಶಾಸ್ತ್ರಿ, ಪಿ. ಶಂಕರ ಭಟ್ಟ ಪೂಕಳ, ಪ್ರೊ| ಅಮೃತ ಸೋಮೇಶ್ವರ, ವಿದ್ವಾನ್ ಪುಚ್ಛೆಕೆರೆ ಕೃಷ್ಣ ಭಟ್ಟ, ಯೋಗೀಶ್ ರಾವ್ ಚಿಗುರುಪಾದೆ, ಇವರುಗಳು ಬರೆದ ಲೇಖನಗಳಿವೆ. ಚಿತ್ರಸಂಪುಟ ಎಂಬ ಭಾಗದಲ್ಲಿ ಸುಮಾರು ಮೂವತ್ತೈದಕ್ಕೂ ಹೆಚ್ಚು ಲಿಂಗಣ್ಣ ಮತ್ತು ಅವರ ವೇಷಗಳ ಚಿತ್ರಗಳನ್ನು ನೀಡಲಾಗಿದೆ. ಕೊನೆಯ ಅನುಬಂಧಗಳು ಎಂಬ ವಿಭಾಗದಲ್ಲಿ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರು ತಿರುಗಾಟ ನಡೆಸಿದ ಮೇಳಗಳು, ಮಾಡಿದ ವೇಷಗಳು, ಪಡೆದ ಪ್ರಶಸ್ತಿ ಸನ್ಮಾನಗಳು, ಲೇಖಕರ ವಿಳಾಸ, ಅಲ್ಲದೆ ಡಾ.ಕೆ.ಎಂ.ರಾಘವ ನಂಬಿಯಾರರು ಬರೆದ ‘ಜೆಡ್ಡು ಅವರ ಜಿದ್ದು’ ಎಂಬ ಬರಹವನ್ನೂ ನೀಡಲಾಗಿದೆ. ‘ಲಿಂಗಣ್ಣ’ ಶ್ರೇಷ್ಠ ಕಲಾವಿದ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರ ಅನುಭವ ಕಥನವು ಒಂದು ಅತ್ಯುತ್ತಮ ಪುಸ್ತಕ. 

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments