‘ಪಾತಾಳ ಯಕ್ಷಮಣಿ’ ಎಂಬ ಶೀರ್ಷಿಕೆಯನ್ನು ಹೊಂದಿದ ಈ ಪುಸ್ತಕವು ಕಲಾವಿದ ಶ್ರೀ ಅಂಬಾ ಪ್ರಸಾದ್ ಪಾತಾಳ ಇವರ ಅಭಿನಂದನಾ ಗ್ರಂಥ. ಅಂಬಾ ಪ್ರಸಾದರು ತೆಂಕುತಿಟ್ಟು ಯಕ್ಷಗಾನದ ಅನುಭವಿ ಕಲಾವಿದರು. ಶ್ರೇಷ್ಠ ಸ್ತ್ರೀ ಪಾತ್ರಧಾರಿಗಳು. ಮಂಗಳೂರಿನ ಕಲ್ಕೂರ ಪ್ರಕಾಶನದವರು ಪ್ರಕಾಶಕರಾದ ಈ ಪುಸ್ತಕದ ಸಂಪಾದಕರು ಶ್ರೀ ನಿತ್ಯಾನಂದ ಕಾರಂತ ಪೊಳಲಿ ಮತ್ತು ಶ್ರೀ ಜಿ.ಕೆ.ಭಟ್ ಸೇರಾಜೆ. ಅಂಬಾಪ್ರಸಾದರು ಯಕ್ಷಗಾನದ ಹಿರಿಯ ಶ್ರೇಷ್ಠ ಸ್ತ್ರೀ ಪಾತ್ರಧಾರಿಗಳಲ್ಲೊಬ್ಬರಾದ ಪಾತಾಳ ವೆಂಕಟ್ರಮಣ ಭಟ್ಟರ ಪುತ್ರರು. ತಂದೆಯಂತೆ ಇವರೂ ಸ್ತ್ರೀ ಪಾತ್ರಧಾರಿಯಾಗಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಕನ್ನಡ ತುಳು ಭಾಷೆಯ ಪ್ರಸಂಗಗಳಲ್ಲಿ ಇವರು ಕಲಾವಿದರಾಗಿ ರಂಜಿಸಿದ್ದಾರೆ. ಎಳವೆಯಲ್ಲಿಯೇ ನಾಟ್ಯಾಭ್ಯಾಸವನ್ನು ಮಾಡಿ ತೆಂಕು ಮತ್ತು ಬಡಗು ಎಂಬ ಉಭಯ ತಿಟ್ಟುಗಳ ಮೇಳಗಳಲ್ಲೂ ತಿರುಗಾಟ ನಡೆಸಿರುತ್ತಾರೆ. ಸ್ತ್ರೀ ಪಾತ್ರಧಾರಿಯಾದರೂ ಅಂಬಾಪ್ರಸಾದರು ಪುರುಷ ವೇಷಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲರು. ಶ್ರೀಯುತರ ಕುರಿತಾಗಿ ಅಭಿನಂದನಾ ಗ್ರಂಥವು ಪ್ರಕಟವಾದುದು ಕಲಾಭಿಮಾನಿಗಳೆಲ್ಲರಿಗೂ ಸಂತೋಷವನ್ನು ಕೊಡುವ ವಿಚಾರ.
ಪಾತಾಳ ಯಕ್ಷಮಣಿ ಎಂಬ ಈ ಪುಸ್ತಕವು ನೂರಾ ನಲುವತ್ತು ಪುಟಗಳನ್ನೂ ಹೊಂದಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರ ಅನುಗ್ರಹ ಸಂದೇಶಗಳನ್ನೂ ಕಲಾಪೋಷಕ ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಡಾ. ಟಿ. ಶ್ಯಾಮ ಭಟ್ಟರ ಶುಭ ಸಂದೇಶಗಳನ್ನೂ ನೀಡಲಾಗಿದೆ. ಸಂಪಾದಕ ಮಂಡಳಿಯ ಪರವಾಗಿ ಶ್ರೀ ನಿತ್ಯಾನಂದ ಕಾರಂತ ಪೊಳಲಿ ಅವರು ಸಂಪಾದಕೀಯ ಲೇಖನವನ್ನು ಬರೆದರೆ, ಪ್ರಕಾಶಕರಾದ ಶ್ರೀ ಎಸ್. ಪ್ರದೀಪಕುಮಾರ ಕಲ್ಕೂರ ಅವರು ತಮ್ಮ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕದ ಲೇಖನಗಳು ಮೂರು ವಿಭಾಗಗಳಲ್ಲಿವೆ. ವಿಭಾಗ ಒಂದರಲ್ಲಿ ‘ನನ್ನ ಕಲಾಜೀವನ’ ಎಂಬ ಅಂಬಾ ಪ್ರಸಾದರ ಲೇಖನವೂ ‘ಕಳೆದ ಕಾಲದ ಕಥನ’ ಎಂಬ ಪಾತಾಳ ವೆಂಕಟ್ರಮಣ ಭಟ್ಟರ ಲೇಖನವೂ ಇದೆ. ವಿಭಾಗ ಎರಡರಲ್ಲಿ ಕುಂಬಳೆ ಸುಂದರ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಎಂ. ಪ್ರಭಾಕರ ಜೋಶಿ, ಕೆ. ಗೋವಿಂದ ಭಟ್, ಡಾ. ಕೊಳ್ಯೂರು ರಾಮಚಂದ್ರ ರಾವ್,ಕಜೆ ಈಶ್ವರ ಭಟ್, ಬರೆ ಕೇಶವ ಭಟ್, ಎಚ್. ಶ್ರೀಧರ ಹಂದೆ, ವಿ. ಬಿ. ಅರ್ತಿಕಜೆ, ಕರ್ನಾಟಕ ಯಕ್ಷಧಾಮ, ಎಚ್. ಜನಾರ್ದನ ಹಂದೆ, ಕುಂಬಳೆ ಶ್ರೀಧರ ರಾವ್, ಬಿ. ಐತಪ್ಪ ನಾಯ್ಕ, ಜಿ.ಕೆ.ಭಟ್ ಸೇರಾಜೆ, ನಿತ್ಯಾನಂದ ಕಾರಂತ ಪೊಳಲಿ, ಎಚ್. ದಾಸಪ್ಪ ರೈ, ತಾರಾನಾಥ ವರ್ಕಾಡಿ, ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಸುಬ್ಬಣ್ಣ ಭಟ್, ಕೇಶವ ಹೆಗಡೆ, ವರ್ಕಾಡಿ ರವಿ ಅಲೆವೂರಾಯ, ಶ್ರೀಮತಿ ರಜನಿ ಕುಮಾರ್, ಪ್ರಕಾಶ್ ಇಳಂತಿಲ, ಬೇಗಾರ್ ಶಿವಕುಮಾರ್, ನರಹರಿ ಭಟ್, ಈಶ್ವರ ಪ್ರಸಾದ ಪಿ.ವಿ., ಶ್ರೀಮತಿ ಜಯಂತಿ ಅಂಬಾಪ್ರಸಾದ, ಡಾ. ದಿನಕರ್ ಎಸ್. ಪಚ್ಚನಾಡಿ, ಇವರುಗಳ ಲೇಖನವಿದೆ. ವಿಭಾಗ ಮೂರರಲ್ಲಿ ಪಾತಾಳ ವೆಂಕಟ್ರಮಣ ಭಟ್ಟರು ಬರೆದ ‘ಯಕ್ಷಗಾನ ತಿಟ್ಟುಗಳು ತನ್ನತನದಲ್ಲಿ ಬದುಕಲಿ’ ಎಂಬ ಲೇಖನವನ್ನೂ ಎಚ್. ಜನಾರ್ದನ ಹಂದೆಯವರು ಬರೆದ ‘ಇವಳ್ಯಾವ ಲೋಕದ ಸತಿಯೋ’ ಎಂಬ ಲೇಖನವನ್ನೂ ನೀಡಲಾಗಿದೆ. ಪಾತಾಳ ಶ್ರೀ ಅಂಬಾಪ್ರಸಾದರಿಂದ ಯಕ್ಷಮಾತೆಯ ಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರಿಗೆ ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ.
ಲೇಖಕ: ರವಿಶಂಕರ್ ವಳಕ್ಕುಂಜ