Saturday, January 18, 2025
Homeಪುಸ್ತಕ ಮಳಿಗೆಯಕ್ಷಸೇಚನ  - ಡಾ. ಕೆ. ಎಂ. ರಾಘವ ನಂಬಿಯಾರ್

ಯಕ್ಷಸೇಚನ  – ಡಾ. ಕೆ. ಎಂ. ರಾಘವ ನಂಬಿಯಾರ್

‘ಯಕ್ಷಸೇಚನ’ ಎಂಬುದು ವಿದ್ವಾಂಸರೂ ವಿಮರ್ಶಕರೂ ಪ್ರಸಂಗಕರ್ತರೂ ಆಗಿರುವ ಡಾ. ಕೆ. ಎಂ. ರಾಘವ ನಂಬಿಯಾರರ ಲೇಖನಿಯಿಂದ ಸಿದ್ಧವಾದ ಕೃತಿ. ಈ ಕೃತಿಯು 2010ರಲ್ಲಿ ಪ್ರಕಟವಾಗಿ ಕಲಾಪ್ರೇಮಿಗಳ ಕೈ ಸೇರಿತ್ತು. ಯಕ್ಷಗಾನ ಸಂಬಂಧೀ ಪ್ರಬಂಧ ಸಮಾಹಾರವಾಗಿ ಯಕ್ಷಸೇಚನವು ಲೋಕಾರ್ಪಣೆಗೊಂಡಿತ್ತು. ಪುಸ್ತಕದ ಪ್ರಕಾಶಕರು ಸಾಗರ ಪ್ರಕಾಶನ, ನಾಗರಬಾವಿ, ಬೆಂಗಳೂರು. ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಹದಿಮೂರು ಲೇಖನಗಳು ಈ ಕೃತಿಯೊಳಗಿವೆ. ಅವುಗಳೆಂದರೆ ೧. ಗಾನ ಶಿಲ್ಪದ ರೂಪರೇಖೆ ೨. ಹೊಸ ಪ್ರಸಂಗ ಮತ್ತು ರಚನಕಾರನ ಹೊಣೆ ೩. ಸ್ತ್ರೀ ಶಿರೋಭೂಷಣಕ್ಕೆ ಪ್ರೇರಣೆ ೪. ಅಮೃತ ಯುಗದಲ್ಲಿ ಯಕ್ಷಗಾನ ಕಲಿಕೆ ೫. ಯಕ್ಷಗಾನ – ಹುಚ್ಚು ಹೊಳೆ ೬. ರಂಗಕಲೆ ಎಂಬ ರಾಜಕಾರಣ ೭. ಆಟಕ್ಕೊಂದು ನಿರ್ದೇಶನ ೮. ತುಳು ಯಕ್ಷಗಾನ ೯. ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ೧೦. ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ಪುನರುಜ್ಜೀವನ ೧೧. ಸುವರ್ಣಯುಗದಲ್ಲಿ ಕರಾವಳಿಯ ಯಕ್ಷಗಾನ ೧೨. ಕರ್ನಾಟಕದ ಸಮಗ್ರ ಯಕ್ಷಗಾನ ೧೩. ಶ್ವೇತಕುಮಾರ ಚರಿತ್ರೆ (ಪ್ರಸಂಗ ಅಧ್ಯಯನ).

ಡಾ. ಕೆ. ಎಂ. ರಾಘವ ನಂಬಿಯಾರ್

ಕೃತಿಯ ಲೇಖಕರಾದ ಶ್ರೀ ನಂಬಿಯಾರರು ‘ನಿವೇದನೆ’ ಎಂಬ ತನ್ನ ಬರಹದಲ್ಲಿ ಸೇಚನ ಎಂಬ ಶಬ್ದದ ಅರ್ಥವನ್ನು ತಿಳಿಸಿ ಈ ಕೃತಿಗೆ ಯಕ್ಷಸೇಚನ ಎಂಬ ಶೀರ್ಷಿಕೆಯು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಈ ಕೃತಿಯನ್ನು ಸಂಪೂರ್ಣ ಓದಿದಾಗ ಶ್ರೀ ನಂಬಿಯಾರರು ತಮ್ಮ ಲೇಖನಗಳಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರಿಗೆ, ಸಂಘಟಕರಿಗೆ, ಪ್ರಸಂಗಕರ್ತರಿಗೆ, ಕಲಾಭಿಮಾನಿಗಳಿಗೆ ಅತ್ಯುತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಯಬಹುದು. ಪ್ರತಿಯೊಬ್ಬರೂ ತಾವು ಹೇಗಿರಬೇಕು? ಹೇಗಿದ್ದರೆ ಯಕ್ಷಗಾನದ ಮೂಲ ಸೌಂದರ್ಯವು ಉಳಿದು ಬೆಳೆದೀತು ಎಂಬುದನ್ನು ತಿಳಿಸಿದ್ದಾರೆ. ಅವರ ನಿರ್ದೇಶನಗಳನ್ನು ಮತ್ತು ಸೂಚನೆಗಳನ್ನು ಪಾಲಿಸಿದರೆ ಖಂಡಿತಾ ಯಕ್ಷಗಾನ ಕಲೆಗೆ ಅದರಿಂದ ಅನುಕೂಲವಾದೀತು ಎಂಬುದರಲ್ಲಿ ಸಂಶಯವಿಲ್ಲ. ಸೃಜನಶೀಲತೆಯು ಸ್ವೇಚ್ಚಾಚಾರಕ್ಕೆ ಎಡೆಯಾಗಬಾರದು. ವಿಕಾಸವೆಂಬುದು ವಿಕೃತಿಗೆ ಕಾರಣವಾಗಬಾರದು ಎಂಬ ಅತ್ಯುತ್ತಮ ನೀತಿಗಳನ್ನು ಅಧ್ಯಯನಾಸಕ್ತರಿಗೆ ತಿಳಿಸಿರುತ್ತಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಶ್ರೀ ಶರತ್ ಕಲ್ಕೋಡ್. ‘ಪೆಟಾರಿಯ ತೆರೆಯೋಣ’ ಎಂಬ ಶೀರ್ಷಿಕೆಯಡಿ ಬರೆದ ಮುನ್ನುಡಿ ಬರಹದಲ್ಲಿ ಶ್ರೀ ಶರತ್ ಕಲ್ಕೋಡ್ ಅವರು ಮಲೆನಾಡಿನಲ್ಲಿ ಯಕ್ಷಗಾನ ನೋಡುತ್ತಾ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿದ್ದಲ್ಲದೆ, ಶ್ರೀ ನಂಬಿಯಾರರ ಜೊತೆ ಅವರ ಒಡನಾಟ, ಸ್ನೇಹ, ಅವರಿಗಿರುವ ಕಲಾಪ್ರೀತಿ, ಸಾಹಿತ್ಯಾಸಕ್ತಿ, ಸ್ವಭಾವ ಮೊದಲಾದ ವಿಚಾರಗಳ ಬಗೆಗೆ ತಿಳಿಸಿ, ಕೃತಿಗೆ ಶುಭ ಹಾರೈಸಿರುತ್ತಾರೆ. ಪುಸ್ತಕದ ಕೊನೆಯ ಪುಟದಲ್ಲಿ  ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಕೃತಿಗಳ ವಿವರಗಳನ್ನು ನೀಡಲಾಗಿದೆ. ಹೊರ ಆವರಣದಲ್ಲಿ ಶ್ರೀ ಶರತ್ ಕಲ್ಕೋಡ್ ಅವರ ಮುನ್ನುಡಿ ಬರಹದ ವಿಚಾರಗಳನ್ನು ನೀಡಲಾಗಿದೆ. ಈ ಕೃತಿಯನ್ನು ಲೇಖಕರು ತಮ್ಮ ಸಹೋದರ  ಡಾ. ಕೆ. ಎಂ. ಶಂಕರ ನಂಬಿಯಾರ್ ಅವರಿಗೆ ಅರ್ಪಿಸಿದ್ದಾರೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments