‘ಯಕ್ಷ ಸಿಂಚನ’ ಎಂಬ ಈ ಹೊತ್ತಗೆಯು 2011ನೇ ಇಸವಿಯಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಈ ಪುಸ್ತಕದ ಲೇಖಕರು ಶ್ರೀ ಕೇಶವ ಹೆಗಡೆ ಮಂಗಳೂರು. ಶ್ರೀಯುತರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಬಳಿ. ಮಂಗಳೂರಿನ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾದವರು. ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಆದುದರಿಂದಲೇ ಯಕ್ಷಗಾನ ಕಲೆಯಿಂದ ದೂರವಾಗದೆ ಕಲೆಯ ಸಂಬಂಧವಿರಿಸಿಕೊಂಡೇ ಬದುಕನ್ನು ಸಾಗಿಸುತ್ತಿದ್ದಾರೆ. ಹೌದು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಯಕ್ಷಗಾನದಿಂದ ದೂರವಾಗಿ ಬದುಕಲು ಸಾಧ್ಯವೇ ಇಲ್ಲ. ಅವರ ಪಾಲಿಗೆ ಯಕ್ಷಗಾನವೂ ಬದುಕಿನ ಒಂದು ಅಂಗವೇ ಆಗಿ ಪರಿಣಮಿಸಿದೆ. ಕಲಾಪ್ರೇಮಿಗಳಾದ ಶ್ರೀ ಕೇಶವ ಹೆಗಡೆಯವರು ಉದ್ಯೋಗಿಯಾಗಿ ಮಂಗಳೂರಿನಲ್ಲಿಯೇ ನೆಲೆಸಿದ ಮೇಲೆ, ಲೇಖಕರಾಗಿ ಸಾಹಿತ್ಯಾಸಕ್ತಿಯನ್ನೂ ಸಂಘಟಕರಾಗಿ ಕಲಾಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಶ್ರೀಯುತರು ಪ್ರಬುದ್ಧ ಬರಹಗಾರರಾಗಿಯೂ ಉತ್ತಮ ಸಂಘಟಕರಾಗಿಯೂ ಗುರುತಿಸಿಕೊಂಡಿರುತ್ತಾರೆ.
ಕೇಶವ ಹೆಗಡೆಯವರು ಬರೆದ ಯಕ್ಷ ಸಿಂಚನ ಎಂಬ ಈ ಪುಸ್ತಕದ ಪ್ರಕಾಶಕರು ‘ಕಲಾಸಂಗಮ ಸಾಂಸ್ಕೃತಿಕ ವೇದಿಕೆ, ಮಂಗಳೂರು’ ಎಂಬ ಸಂಸ್ಥೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿರುತ್ತಾರೆ. ಲೇಖಕ ಕೇಶವ ಹೆಗಡೆಯವರು ತಮ್ಮ ಅನಿಸಿಕೆಗಳನ್ನು ಲೇಖಕರ ನುಡಿ ಎಂಬ ಶೀರ್ಷಿಕೆಯಡಿ ವ್ಯಕ್ತಪಡಿಸಿದ್ದಾರೆ. ವಿದ್ವಾಂಸರೂ ಖ್ಯಾತ ಪ್ರಸಂಗಕರ್ತರೂ ಆದ ಡಾ. ಅಮೃತ ಸೋಮೇಶ್ವರರು ಈ ಹೊತ್ತಗೆಗೆ ಮೆಚ್ಚುನುಡಿಗಳನ್ನು ಬರೆದಿರುತ್ತಾರೆ. ಯಕ್ಷ ಸಿಂಚನ ಎಂಬ ಈ ಪುಸ್ತಕದಲ್ಲಿ ಯಕ್ಷಗಾನ – ಪದ್ಯ, ಹಿನ್ನೋಟ, ಯಕ್ಷಗಾನದಲ್ಲಿ ತಿಟ್ಟುಗಳು, ಪೂರ್ವರಂಗ, ವಾದನಗಳು, ಭಾಗವತರು, ಪೀಠಿಕೆವೇಷ, ಪಾತ್ರನಿರ್ವಹಣೆ, ಕಲಾವಿದನಿಗೆ ಇರಬೇಕಾದ ಗುಣಲಕ್ಷಣಗಳು, ಯಕ್ಷರಂಗದಲ್ಲಿ ಸ್ತ್ರೀ ಪಾತ್ರ, ಯಕ್ಷರಂಗದಲ್ಲಿ ಮಹಿಳೆಯರು, ರಾತ್ರಿ ನಗಿಸಿ ಹಗಲು ಅಳುವ ಕಲಾವಿದ, ತಾಳಮದ್ದಳೆ, ಶತಮಾನದ ಯಕ್ಷ ಪುರುಷರು, ಪ್ರಶಸ್ತಿಗಳು, ವಿನೂತನ ಪ್ರಯೋಗ – ಮೇಘದೂತ, ಪಿ. ಎಚ್. ಡಿ. ಗೌರವ ಪಡೆದವರು, ಪ್ರಸಂಗ ರಚನೆ, ಗೊಂಬೆಯಾಟ ಎಂಬ ಹತ್ತೊಂಬತ್ತು ವಿಚಾರಗಳನ್ನು ಶ್ರೀ ಕೇಶವ ಹೆಗಡೆಯವರು ಲೇಖನಗಳ ಮೂಲಕ ಒದಗಿಸಿದ್ದಾರೆ. ಅಲ್ಲದೆ ಹಿಮ್ಮೇಳದಲ್ಲಿ ಉಪಯೋಗಿಸುವ ವಾದ್ಯಗಳ ಚಿತ್ರಗಳನ್ನೂ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ವೇಷಗಳ ಆಭರಣಗಳ ಚಿತ್ರಗಳನ್ನೂ ನೀಡಿರುತ್ತಾರೆ. ಅಲ್ಲದೆ ಉಭಯ ತಿಟ್ಟಿನ ವೇಷಗಳ ಸುಮಾರು ಎಪ್ಪತ್ತೈದಕ್ಕೂ ಮಿಕ್ಕಿ ಬಣ್ಣದ ಚಿತ್ರಗಳನ್ನೂ ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರ ಶುಭ ಸಂದೇಶವನ್ನು ಪ್ರಕಟಿಸಲಾಗಿದೆ. ಶ್ರೀ ಕೇಶವ ಹೆಗಡೆ ಅವರಿಗೆ ಶುಭಾಶಯಗಳು. ಅಭಿನಂದನೆಗಳು. ಅವರ ಲೇಖನಿಯಿಂದ ಇನ್ನಷ್ಟು ಲೇಖನಗಳೂ, ಪುಸ್ತಕಗಳೂ ಓದುಗರ ಕೈ ಸೇರುವಂತಾಗಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ