Saturday, January 18, 2025
Homeಪುಸ್ತಕ ಮಳಿಗೆರಾಧಾಕೃಷ್ಣ ಕಲ್ಚಾರ್ ಅವರ "ಪುರಾಣಕೋಶ ವಿಹಾರಿ - ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ"

ರಾಧಾಕೃಷ್ಣ ಕಲ್ಚಾರ್ ಅವರ “ಪುರಾಣಕೋಶ ವಿಹಾರಿ – ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ”

ಶೀರ್ಷಿಕೆಯೇ ಸೂಚಿಸುವಂತೆ ಇದು ಹಿರಿಯ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ವಿದ್ವಾಂಸರೂ ಆಗಿರುವ ಮೂಡಂಬೈಲು ಶ್ರೀ ಗೋಪಾಲಕೃಷ್ಣ ಶಾಸ್ತ್ರಿಗಳ ಕುರಿತಾಗಿ ಬರೆದ ಕೃತಿ. ನಿವೃತ್ತ ಉಪಾನ್ಯಾಸಕರೂ, ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿಗಳೂ ಲೇಖಕರೂ ಆದ  ಶ್ರೀ ರಾಧಾಕೃಷ್ಣ ಕಲ್ಚಾರ್ ಇದರ ಲೇಖಕರು. ಪುರಾಣಗಳ ವಿಚಾರದಲ್ಲಿ ಅದ್ಭುತವಾದ ಜ್ಞಾನವನ್ನು ಹೊಂದಿದವರು ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು. ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ತಾನು ಸಂಗ್ರಹಿಸಿದ ವಿಚಾರಗಳನ್ನು ಸಾಹಿತ್ಯಾಸಕ್ತ ಓದುಗರಿಗೆ, ಅಧ್ಯಯನಶೀಲರಿಗೆ ಗ್ರಂಥಗಳನ್ನು ರಚಿಸಿ ನೀಡಿರುತ್ತಾರೆ. ಸಲಹೆ ಮಾರ್ಗದರ್ಶನಗಳನ್ನೂ ನೀಡುತ್ತಾರೆ. ಆದುದರಿಂದ ಅವರ ಕುರಿತಾದ ಈ ಹೊತ್ತಗೆಯ ಶೀರ್ಷಿಕೆ  “ಪುರಾಣಕೋಶ ವಿಹಾರಿ – ಅರ್ಥಧಾರಿ” ಅರ್ಥಪೂರ್ಣವಾದುದು. ಕೃತಿಯ ಪ್ರಕಾಶಕರು ಕನ್ನಡ ಸಂಘ ಕಾಂತಾವರ (ರಿ). ಈ ಪುಸ್ತಕವು ಪ್ರಕಟವಾದುದು 2015ರಲ್ಲಿ. ಕನ್ನಡ ಸಂಘ ಕಾಂತಾವರದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಓದುಗರ ಕೈಸೇರಿದೆ.

ಪ್ರಧಾನ ಸಂಪಾದಕರು ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅವರು. ಸಂಪಾದಕರು ಶ್ರೀ ಬಿ. ಜನಾರ್ದನ ಭಟ್. ಇದು ಸುಮಾರು ನಲುವತ್ತೈದು ಪುಟಗಳಿಂದ ಕೂಡಿದೆ. ಅಧ್ಯಕ್ಷರ ಮಾತು ಎಂಬ ಶೀರ್ಷಿಕೆಯಡಿ ಡಾ. ನಾ. ಮೊಗಸಾಲೆ ಅವರ ಮಾತುಗಳನ್ನೂ, ಡಾ. ಬಿ. ಜನಾರ್ದನ ಭಟ್ ಅವರ ಸಂಪಾದಕೀಯ ಬರಹವನ್ನೂ ನೀಡಲಾಗಿದೆ. ಬಳಿಕ ಒಟ್ಟು ನಲುವತ್ತಮೂರು ಪುಟಗಳಲ್ಲಿ ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಮೂಡಂಬೈಲು ಅವರ ಬಗೆಗೆ ಅತ್ಯುತ್ತಮವಾಗಿ ಬರೆದಿರುತ್ತಾರೆ. ಒಂದು ನುಡಿಚಿತ್ರ, ಕಲಾಜೀವನ- ೧, ಮೊದಲು ಭಾಗವತಿಕೆ, ಅರ್ಥಧಾರಿಯಾಗಿ, ಕಲಾಜೀವನ – ೨, ಜೀವನವೃತ್ತ-ಹಿನ್ನೆಲೆ-ಹುಟ್ಟು, ಶಿಕ್ಷಕನಾಗಿ, ಕೃಷಿಕನಾಗಿ, ಸಂಸಾರಿಯಾಗಿ, ಛಲಗಾರ, ಪ್ರಶಸ್ತಿ- ಸನ್ಮಾನಗಳು, ಕೆಲವು ಸ್ವಾರಸ್ಯ ಪ್ರಸಂಗಗಳು, ಲೋಕಾಭಿರಾಮ, ಅರ್ಥಗಾರಿಕೆಯ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಶಾಸ್ತ್ರೀಗಳು ನೀಡುವ ಸಲಹೆಗಳು ಎಂಬ ವಿಚಾರಗಳಡಿಯಲ್ಲಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಶ್ರೀ ಶಾಸ್ತ್ರಿಗಳ ಬಗೆಗೆ ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ಬಳಿಕ ‘ಶಾಸ್ತ್ರಿಯವರ ಸಾಹಿತ್ಯ’ ಎಂಬ ವಿಚಾರದಡಿಯಲ್ಲಿ ಮೂಡಂಬೈಲು ಗೋಪಾಲಕೃಷ್ಣ  ಶಾಸ್ತ್ರಿಗಳು ಬರೆದ ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಕೋಶ, ಅರ್ಥಸಹಿತ ಕುಮಾರ ವಿಜಯ, ದಶಾವತಾರ ಉಪಾನ್ಯಾಸಗಳು, ಶೇಣಿ ಗೋಪಾಲಕೃಷ್ಣ ಭಟ್ಟ ಎಂಬ ಕೃತಿಗಳ ಬಗೆಗೆ ಮಾಹಿತಿಯನ್ನು ನೀಡಿರುತ್ತಾರೆ. ಶ್ರೀ ರಾಧಾಕೃಷ್ಣ ಕಲ್ಚಾರರ ಶ್ರೇಷ್ಠ ಬರಹಗಾರಿಕೆಯಲ್ಲಿ  “ಪುರಾಣಕೋಶ ವಿಹಾರಿ – ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ”  ಎಂಬ ಈ ಕೃತಿಯು ಅತ್ಯುತ್ತಮವಾಗಿ ಮೂಡಿಬಂದಿದೆ. ಅಲ್ಲದೆ ಅನುಬಂಧ ಎಂಬ ವಿಚಾರದಡಿ ಡಾ. ಎಂ. ಪ್ರಭಾಕರ ಜೋಶಿಯವರು ಮತ್ತು ಡಾ. ಅಮೃತ ಸೋಮೇಶ್ವರರು ಶಾಸ್ತ್ರಿಗಳ ಕುರಿತು ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಕನ್ನಡ ಸಂಘ ಕಾಂತಾವರ ಸಂಸ್ಥೆಯು ನಾಡಿಗೆ ನಮಸ್ಕಾರ ಗ್ರಂಥ ಮಾಲೆಯಡಿ ಹನ್ನೊಂದು ಕಂತುಗಳಲ್ಲಿ ಪ್ರಕಟಿಸಿದ ನೂರಾ ಇಪ್ಪತ್ತೆರಡು ಪುಸ್ತಕಗಳ ಹೆಸರುಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಸಂಪಾದಕರಾದ ಶ್ರೀ ಬಿ. ಜನಾರ್ದನ ಭಟ್ಟರು ಲೇಖಕರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರನ್ನು ಅಭಿನಂದಿಸಿ ಬರೆದ ಲೇಖನವಿದೆ.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

1 COMMENT

  1. atunta hiriya artadari gala salina kondi hatira dinda balle e va rana vidye ge vinaya ve bushana adanna shastri giya va rin da le navu nodi tiliya takkadu aham ellada mahan artadari

LEAVE A REPLY

Please enter your comment!
Please enter your name here

Most Popular

Recent Comments