ಶ್ರೀ ಕೆ.ಪಿ. ರಾಜಗೋಪಾಲ್ ಅವರು ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿಗಳು. ಶ್ರೀಯುತರ ಸಾಹಿತ್ಯಾಸಕ್ತಿ, ಕಲಾಸಕ್ತಿ, ಸಂಗ್ರಹಾಸಕ್ತಿಗಳು ಅಭಿನಂದನೀಯವಾದುದು. ಬೆಂಗಳೂರು ನಗರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಕಲಾವಿದರಾಗಿ, ಲೇಖಕರಾಗಿ ಯಕ್ಷಗಾನ ಕಲಾ ಸಂಘಟಕರಾಗಿ ಕಲಾಮಾತೆಯ ಮತ್ತು ಸಾಹಿತ್ಯ ಸೇವೆಯನ್ನು ಮಾಡಿದವರು. ಪುಸ್ತಕಗಳ ಮೇಲೆ ಇವರಿಗಿರುವ ಪ್ರೀತಿ, ಗೌರವ, ಅದನ್ನು ಸಂಗ್ರಹಿಸುವ ಆಸಕ್ತಿ, ಅವುಗಳನ್ನು ಕೆಡದಂತೆ ಕಾಪಿಡುವಲ್ಲಿ ಇವರಿಗಿರುವ ಶ್ರದ್ಧೆಗೆ ಯಾರಾದರೂ ಮೆಚ್ಚಲೇ ಬೇಕು. ಪ್ರಬುದ್ಧ ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮಿಂದಾದ ಪರಮಾವಧಿ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಕೆಲವು ಅಪೂರ್ವ ಸಂಗ್ರಹಗಳು ಮುಂದಿನ ತಲೆಮಾರಿಗೆ ಖಂಡಿತಾ ಅನುಕೂಲವಾದೀತು ಎಂಬುದರಲ್ಲಿ ಸಂಶಯವಿಲ್ಲ. ಶ್ರೀಯುತರ ಸಹೋದರರಾದ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರೂ ಕಲಾವಿದರಾಗಿ, ಲೇಖಕರಾಗಿ, ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
‘ಯಕ್ಷಗಾನದ ಯಕ್ಷರು’ ಎಂಬ ಪುಸ್ತಕವು ಶ್ರೀ ರಾಜಗೋಪಾಲ ಕನ್ಯಾನ ಇವರ ಸಂಪಾದಕತ್ವದಲ್ಲಿ 2007ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಇದರ ಪ್ರಕಾಶಕರು ಹರೀಶ ಎಂಟರ್ಪ್ರೈಸಸ್, ವಿ.ವಿ. ಪುರಂ, ಬೆಂಗಳೂರು. ಈ ಹೊತ್ತಗೆಯಲ್ಲಿ ಸ್ವರಚಿತ, ಸಂಪಾದಿತ, ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ, ಪತ್ರಿಕಾ ವರದಿಗಳು, ಸ್ವಕಥಾ ಸಂಯೋಜನೆಯ ಪ್ರಸಂಗ ಎಂಬ ಐದು ವಿಭಾಗಗಳಿವೆ. ಸ್ವರಚಿತ ಎಂಬ ವಿಭಾಗದಲ್ಲಿ ವಿದ್ವಾನ್ ಟಿ. ಕೇಶವ ಭಟ್ಟ, ಕೆರೆಮನೆ ಗಜಾನನ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಪುಂಡಿಕಾಯ್ ಕೃಷ್ಣ ಭಟ್, ಅಡೂರು ಶ್ರೀಧರ ರಾವ್,ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಕಾಸರಗೋಡು, ಪ್ರೊ| ಕಾಳೇಗೌಡ ನಾಗವಾರ ಸಂದರ್ಶನ, ಮಾಸ್ಟರ್ ಕೇಶವ ಕನ್ಯಾನ, ಮಾಸ್ಟರ್ ಭೀಮ ಭಾರದ್ವಾಜ್ ಕನ್ಯಾನ, ವಿದ್ವಾನ್ ತಾಳ್ತಜೆ ಕೃಷ್ಣ ಭಟ್, ಇವರುಗಳ ಬಗೆಗೆ ಶ್ರೀ ರಾಜಗೋಪಾಲರು ಬರೆದ ಲೇಖನಗಳಿವೆ. ಸಂಪಾದಿತ ಎಂಬ ವಿಭಾಗದಡಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕುರಿಯ ವಿಠಲ ಶಾಸ್ತ್ರಿ, ಪೊಳ್ಳಕಜೆ ಗೋಪಾಲಕೃಷ್ಣ ಭಟ್, ದೇಲಂತಬೆಟ್ಟು ಕೃಷ್ಣ ಭಟ್, ಇವರುಗಳ ಬಗೆಗೆ ಬರೆದ ಲೇಖನಗಳಿವೆ. ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ ಎಂಬ ವಿಭಾಗದಲ್ಲಿ ಮೂರು ಪ್ರಸಂಗಗಳ ವಿವರಗಳನ್ನೂ ರಚಿಸಿದ ಕವಿಗಳ ಹೆಸರುಗಳನ್ನೂ ನೀಡಿರುತ್ತಾರೆ. ಪತ್ರಿಕಾ ವರದಿಗಳು ಎಂಬ ವಿಭಾಗದಲ್ಲಿ ಒಟ್ಟು ಏಳು ಲೇಖನ ರೂಪದ ವರದಿಗಳಿವೆ. ಕೊನೆಯ ವಿಭಾಗ ಸ್ವಕಥಾ ಸಂಯೋಜನೆಯ ಪ್ರಸಂಗ. ಜಲಜಸಖ ಕಾವ್ಯನಾಮದ ಬೆಳ್ಳಾರೆ ಶ್ರೀ ಸೂರ್ಯನಾರಾಯಣ ಭಟ್ಟರು ರಚಿಸಿದ ಸೂರ್ಯೋದಯ ಎಂಬ ಯಕ್ಷಗಾನ ಪ್ರಸಂಗವನ್ನು ಕಥಾಸಾರಾಂಶ ಮತ್ತು ಪಾತ್ರ ಪರಿಚಯದೊಂದಿಗೆ ನೀಡಿರುತ್ತಾರೆ. ಇದು ಒಟ್ಟು ನೂರಾ ಮೂವತ್ತಾರು ಪುಟಗಳುಳ್ಳ ಪುಸ್ತಕ. ಯಕ್ಷಗಾನ ಕ್ಷೇತ್ರದ ಹಲವು ಸಾಧಕರ ಕುರಿತಾಗಿ ಮಾಹಿತಿಯುಳ್ಳ ಹೊತ್ತಗೆಯಾದುದರಿಂದ ‘ಯಕ್ಷಗಾನದ ಯಕ್ಷರು’ ಎಂಬ ಶೀರ್ಷಿಕೆಯು ಅರ್ಥಪೂರ್ಣವಾಗಿದೆ. ವಿದ್ವಾಂಸರಾದ ಶ್ರೀ ರಾಜಗೋಪಾಲ್ ಕನ್ಯಾನ ಅವರಿಂದ ಇನ್ನಷ್ಟು ಕಲಾ, ಸಾಹಿತ್ಯ ಸೇವೆಗಳು ನಡೆಯಲಿ ಎಂಬ ಶುಭ ಹಾರೈಕೆಗಳು.
ನನ್ನೀ ಕೃತಿಯನ್ನು ಸರ್ವ ಪ್ರಥಮವಾಗಿ ಪರಿಚಯಿಸಿದ ನೆಗಳ್ತೆಗೆ ತಾವು ಪಾತ್ರರಾದಿರಿ.
ಕೃತಜ್ಞತೆಗಳು.
ರಾಜಗೋಪಾಲ್ ಕನ್ಯಾನ.