Saturday, January 18, 2025
Homeಪುಸ್ತಕ ಮಳಿಗೆಯಕ್ಷಗಾನ ಪ್ರಸಂಗಮಾಲಿಕಾ - ಶ್ರೀಧರ ಡಿ.ಎಸ್. 

ಯಕ್ಷಗಾನ ಪ್ರಸಂಗಮಾಲಿಕಾ – ಶ್ರೀಧರ ಡಿ.ಎಸ್. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿಟ್ಟೂರು ಶ್ರೀಧರ ಡಿ.ಎಸ್. ಅವರ ಹುಟ್ಟೂರು. ಧರೆಮನೆ ಎಂಬಲ್ಲಿ ಜನನ. ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು. ತೀರ್ಥರೂಪರಾದ ಶ್ರೀಪಾದಯ್ಯ ಅವರು ಯಕ್ಷಗಾನ ಕಲಾವಿದರೂ ಕೃಷಿಕರೂ ಆಗಿದ್ದರು. ಬಾಲ್ಯದಲ್ಲಿಯೇ ಯಕ್ಷಗಾನದ ಸಂಬಂಧವಿರಿಸಿಕೊಂಡೇ ಬೆಳೆದ ಶ್ರೀಧರ ಡಿ.ಎಸ್. ಅವರು ಓದಿದ್ದು ಹೆಬ್ಬಿಗ ಶಾಲೆಯಲ್ಲಿ ಮತ್ತು ಉಡುಪಿಯಲ್ಲಿ. ಉಡುಪಿಯಲ್ಲಿ ವಿದ್ವಾಂಸರ ಸತ್ ಚಿಂತನೆಗಳನ್ನು ಹೊಂದಿದ ಮಿತ್ರರ ಒಡನಾಟವೂ ದೊರಕಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೇಷಗಾರಿಕೆ, ತಾಳಮದ್ದಳೆಗಳಲ್ಲಿ ಭಾಗವಹಿಸುವುದರ ಜತೆಗೆ ಸಾಹಿತ್ಯ ಕ್ಷೇತ್ರದತ್ತ  ಒಲವನ್ನೂ ತೋರಿದ್ದರು. ಪಿಯುಸಿ ಓದುತ್ತಿರುವಾಗಲೇ ವೀರ ಚಿತ್ರಧ್ವಜ ಎಂಬ ಪ್ರಸಂಗವನ್ನೂ ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ, ಶ್ರೀ ರಂಗ ರಾಯಭಾರ ಎಂಬ ಪ್ರಸಂಗಗಳನ್ನೂ ರಚಿಸಿದ್ದರು. ಕೊರ್ಗಿ ಶ್ರೀ ಸೂರ್ಯನಾರಾಯಣ ಉಪಾಧ್ಯಾಯರ ಸಲಹೆ ಸೂಚನೆಯಂತೆ ಮತ್ತೆ ಪ್ರಸಂಗಾ ರಚನಾ ಕಾರ್ಯಕ್ಕೆ ತೊಡಗಿದ್ದರು. ಪದವಿ ಶಿಕ್ಷಣದ ಬಳಿಕ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ  ಉದ್ಯೋಗ. ಜೊತೆಗೆ ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ. ಈ ಸಂದರ್ಭ ಸಾಹಿತ್ಯ ಮತ್ತು ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬದುಕನ್ನೂ, ಬದುಕಿಗೊಂದು ಸಾಂಸ್ಕೃತಿಕ ವಲಯವನ್ನೂ ಉಡುಪಿಯ ಪರಿಸರವು ನಿರ್ಮಿಸಿತು ಎನ್ನುವುದು ಶ್ರೀಧರ ಡಿ.ಎಸ್. ಅವರ ಅಭಿಪ್ರಾಯ. 1981ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆ. ಪರಿಸರದ ಜನರು ಯಕ್ಷಗಾನಾಸಕ್ತರು. ಕೊರ್ಗಿ ವೆಂಕಟೇಶ ಉಪಾಧ್ಯಾಯ,ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಪು. ಶ್ರೀನಿವಾಸ ಭಟ್ಟ, ಮೊದಲಾದವರ ಒಡನಾಟವೂ ಆಗಿತ್ತು. ದರಿಂದ ಅನುಕೂಲವೇ ಆಗಿತ್ತು. ಸಾಹಿತ್ಯ ಸೇವೆಯ ಜೊತೆಗೆ ಕಲಾಸಂಘಟಕರಾಗಿಯೂ ಕಾಣಿಸಿಕೊಂಡರು. ೨೦೧೬ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು 475ಕ್ಕೂ ಮಿಕ್ಕಿ  ಲೇಖನಗಳನ್ನು ಬರೆದಿರುತ್ತಾರೆ. ಯಕ್ಷಗಾನ ಕವಿಗಳ ಬಗ್ಗೆ ಬರೆದ ಲೇಖನಗಳು 25. ಅಂಕಣಗಳಲ್ಲೂ ಇವರು ಬರಹಗಾರರು. ಆಟದಲ್ಲಿ ಅವಾಂತರ,ಹೀಗೂ ಆಗುತ್ತೆ, ತಾಳಮದ್ದಳೆಯಲ್ಲಿ ತಲೆಹರಟೆ ಎಂಬ ಶೀರ್ಷಿಕೆಯಡಿಯಲ್ಲಿ ಲೇಖನಗಳು ಪ್ರಕಟವಾಗಿವೆ. ಜಡಭರತ ಎಂಬ ಪೌರಾಣಿಕ ಕಾದಂಬರಿ, ಗೋವಿಪ್ರ ಎಂಬ ಕಿರುಕಾದಂಬರಿ, ಅಸುರಗುರು ಎಂಬ ಬೃಹತ್ ಕಾದಂಬರಿ ಬದುಕು ಜಟಕಾ ಬಂಡಿ ಎಂಬ ಹಾಸ್ಯ ಲೇಖನಗಳ ಸಂಕಲನ, ತಾಳಮದ್ದಳೆಯ ಕಥಾ ಸರಣಿಗೆ ಪೃಥುಯಜ್ಞ ಮತ್ತು ನೈಮಿಷಾರಣ್ಯ ಎಂಬ ಪ್ರಸಂಗಗಳನ್ನೂ ರಚಿಸಿದ್ದಾರೆ.

ಇವರು ರಚಿಸಿದ ಪ್ರಸಂಗಗಳ ಸಂಪುಟವೇ ‘ಯಕ್ಷಗಾನ ಪ್ರಸಂಗ ಮಾಲಿಕಾ’. ಈ ಕೃತಿಗೆ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯು ಲಭಿಸಿತ್ತು. ಯಕ್ಷಗಾನ ಕೇಂದ್ರ ಉಡುಪಿ ಎಂಬ ಘನ ಸಂಸ್ಥೆಯು ಈ ಪುಸ್ತಕವನ್ನು ಪ್ರಕಟಿಸಿತ್ತು. ಪ್ರಕಾಶಕರಾಗಿ ಶ್ರೀ ಹೆರಂಜೆ ಕೃಷ್ಣ ಭಟ್ಟರು ನಲ್ನುಡಿಗಳನ್ನು ಬರೆದಿದ್ದು ವಿದ್ವಾಂಸರಾದ ಪಾದೆಕಲ್ಲು ವಿಷ್ಣು ಭಟ್ಟರು ಮುನ್ನುಡಿ ಬರಹದಲ್ಲಿ ಶ್ರೀಧರ ಡಿ.ಎಸ್. ಅವರ ಪ್ರಸಂಗ ರಚನೆಯಲ್ಲಿ ಕಂಡುಬರುವ ವಿಶೇಷತೆಯನ್ನೂ, ಅದರಿಂದಾಗುವ ಅನುಕೂಲತೆಗಳನ್ನೂ ತಿಳಿಸಿದ್ದಾರೆ. ಶ್ರೀಧರ ಡಿ.ಎಸ್. ಅವರು ಕೃತಿ ಸಂಪುಟವನ್ನು ಆತ್ಮೀಯರೂ ತನ್ನ ನಾಲ್ಕು ದಶಕಗಳ ಒಡನಾಡಿಯಾಗಿದ್ದ ದಿ। ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಿಗೆ ಅರ್ಪಿಸಿದ್ದು ಅಭಿನಂದನೀಯ. ಇದು ಕಬಂಧ ಮೋಕ್ಷ, ಸುದ್ಯುಮ್ನ, ಆದಿನಾರಾಯಣ ದರ್ಶನ, ಕುವಲಯಾಶ್ವ, ಗರುಡಂಪ್ರತಾಪ, ಬಾಲಭಾರತ, ಸತ್ವಶೈಥಿಲ್ಯ, ಮಹಾಪ್ರಸ್ಥಾನ, ಪರೀಕ್ಷಿತ – ಆಸ್ತೀಕ ಜನ್ಮ, ಜನಮೇಜಯ, ಶುಕ್ರ ಸಂಜೀವಿನಿ, ಅಗಸ್ತ್ಯ, ಜಡಭರತ ಎಂಬ ಹದಿಮೂರು ಪ್ರಸಂಗಗಳನ್ನು ಒಳಗೊಂಡ ಸಂಪುಟ. ಇವುಗಳಲ್ಲಿ ಮಹಾಪ್ರಸ್ಥಾನ ಎಂಬ ಪ್ರಸಂಗದ ಒಂದು ಭಾಗವು ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಕಾಂ. ಎರಡನೇ ವರ್ಷದ ಕನ್ನಡ ಪಠ್ಯವಾಗಿತ್ತು ಎಂಬುದು ಉಲ್ಲೇಖನೀಯ. ಮುನ್ನುಡಿಯಲ್ಲಿ ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು ಶ್ರೀಧರ ಡಿ.ಎಸ್. ಅವರ ಪದ್ಯ ರಚನಾ ಕೌಶಲದ ಬಗ್ಗೆ ತಿಳಿಸುತ್ತಾ ‘ಯಕ್ಷಗಾನ ಛಂದೋಮ್ಬುಧಿಯ ಲೇಖಕ  ಡಾ. ಎನ್ . ನಾರಾಯಣ ಶೆಟ್ಟಿಯವರ ಪ್ರಭಾವ ಕಾಣಿಸುತ್ತಿದೆ ಎಂದಿದ್ದಾರೆ. ಯಕ್ಷಗಾನ ಛಂದಸ್ಸಿನ ಹಿರಿಯ ವಿದ್ವಾಂಸರಾದ ಡಾ. ಎನ್ . ನಾರಾಯಣ ಶೆಟ್ಟಿ, ಶ್ರೀ ಕ. ಪು. ಸೀತಾರಾಮ ಕೆದಿಲಾಯರ ಗ್ರಂಥಗಳ ಜೊತೆಗೆ ಈ ವರೆಗೆ ಪ್ರಕಟವಾದ ನೂರಾರು ಯಕ್ಷಕಾವ್ಯಗಳು ನನಗೆ ಮಾರ್ಗದರ್ಶಿಗಳು ಎಂಬುದನ್ನು ಲೇಖಕರಾದ ಶ್ರೀಧರ ಡಿ.ಎಸ್. ‘ಅರಿಕೆಯೊಂದುಂಟು’ ತಲೆಬರಹದಡಿಯಲ್ಲಿ ಬರೆದು ಗೌರವವನ್ನು ಸೂಚಿಸಿದ್ದಾರೆ. ತನ್ನ ಕಲಾಶಕ್ತಿಗೆ ನೀರುಣಿಸಿ ಪ್ರೋತ್ಸಾಹಿಸಿದ ವಿದ್ವಾಂಸರಿಗೂ ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ. ಎಲ್ಲಾ ಪ್ರಸಂಗಗಳ ಕಥಾಮೂಲ ಮತ್ತು ಆಶಯಗಳನ್ನು ನೀಡಿದ್ದು ಅಭಿನಂದನಾರ್ಹ. ಓದುಗರಿಗೆ, ಕಲಾವಿದರಿಗೆ ಇದರಿಂದ ತುಂಬಾ ಅನುಕೂಲವಾದೀತು. ಪ್ರಸಂಗಮಾಲಿಕಾ ಸಂಪುಟದ ಕೊನೆಯಲ್ಲಿ ಅನುಭಂದ ಒಂದು, ಎರಡು, ಮೂರು ಎಂಬ ಶೀರ್ಷಿಕೆಗಳಡಿಯಲ್ಲಿ ಪ್ರೊ| ಎಂ. ರಾಜಗೋಪಾಲಾಚಾರ್ಯ, ಉದ್ಯಾವರ ಶ್ರೀ ಮಾಧವ ಆಚಾರ್ಯ, ಶ್ರೀ ಗುರುರಾಜ ಮಾರ್ಪಳ್ಳಿ ಇವರುಗಳ   ಶ್ರೀಧರ ಡಿ.ಎಸ್. ಇವರ ಬಾಲಭಾರತ, ಶುಕ್ರಸಂಜೀವಿನಿ ಪ್ರಸಂಗಗಳಿಗೆ ಮುನ್ನುಡಿ ರೂಪವಾದ ಹಾರೈಕೆಗಳನ್ನು ಓದುಗರು ಗಮನಿಸಬಹುದಾಗಿದೆ. ಈ ಪ್ರಸಂಗಮಾಲಿಕೆಯು ಒಟ್ಟು ೩೧೨ ಪುಟಗಳಿಂದ ಕೂಡಿದ್ದು ೨೦೧೧ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಶ್ರೀಧರ ಡಿ.ಎಸ್. ಅವರು ರಚಿಸಿದ ಸಾಮ್ರಾಟ್ ಮರುತ್ತ  ಎಂಬ ಪ್ರಸಂಗದಲ್ಲಿ ವೇಷ ಮಾಡುವ ಅವಕಾಶವೂ ನನಗೆ ಸಿಕ್ಕಿದ್ದು ಒಳ್ಳೆಯ ಅನುಭವ ಮತ್ತು ಭಾಗ್ಯವೆಂದು ಭಾವಿಸುತ್ತೇನೆ. ಈ ಪ್ರಸಂಗಮಾಲಿಕಾ ಪುಸ್ತಕದಲ್ಲಿರುವ ಎಲ್ಲಾ ಪ್ರಸಂಗಗಳೂ ಸದಾ ಪ್ರದಶನಗೊಳ್ಳುತ್ತಾ ಇರಲಿ ಎಂಬ ಸದಾಶಯಗಳು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments