Saturday, January 18, 2025
Homeಪುಸ್ತಕ ಮಳಿಗೆಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ಪ್ರಸಂಗ ಮಾಲಿಕೆ 

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ಪ್ರಸಂಗ ಮಾಲಿಕೆ 

ಶೀರ್ಷಿಕೆಯೇ ಸೂಚಿಸುವಂತೆ ದಿ। ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಪ್ರಸಂಗಗಳ ಸಂಪುಟ. ಭಾಗವತರಾಗಿ ಪ್ರಸಂಗಕರ್ತರಾಗಿ ಶ್ರೇಷ್ಠ ನಿರ್ದೇಶಕರಾಗಿ ಯಕ್ಷಗಾನಕ್ಕೆ ಅಗರಿಯವರ ಕೊಡುಗೆಯು ಅನುಪಮವಾದುದು. ಶ್ರೀಯುತರ ಜೀವಿತಾವಧಿ 1906-1997 ಅವರು ರಚಿಸಿದ ಪ್ರಸಂಗಗಳ, ಪದ್ಯಗಳ ಸೌಂದರ್ಯವು ವರ್ಣನಾತೀತವೆಂದು ಕಲಾವಿದರೂ ಕಲಾಭಿಮಾನಿಗಳೂ ಹೇಳುತ್ತಾರೆ. ಸತತ ಸಾಧನೆಯಿಂದಲೇ ಸರಸ್ವತಿ ದೇವಿಯ ಅನುಗ್ರಹವು ಸಿದ್ಧಿಸಿತ್ತು. ಆಶು ಕವಿತ್ವವನ್ನು ಸಿದ್ಧಿಸಿದ ಮೇರು ವ್ಯಕ್ತಿತ್ವವನ್ನು ಹೊಂದಿ ಅನೇಕ ಅತ್ಯುತ್ತಮ ಪ್ರಸಂಗಗಳನ್ನು ರಚಿಸಿ ಕಲಾಮಾತೆಯ ಮಡಿಲಿಗೆ ಅರ್ಪಿಸಿದ್ದರು. ಯಕ್ಷಗಾನದ ಸಮರ್ಥ ನಿರ್ದೇಶಕರಾಗಿ ಅಗರಿ ಶೈಲಿಯನ್ನು ಹುಟ್ಟುಹಾಕಿ ಬೆಳಗಿಸಿದ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಹದಿನಾರು ಪ್ರಸಂಗಗಳು ಈ ಪುಸ್ತಕದಲ್ಲಿವೆ. ದೇವಿ ಮಹಾತ್ಮೆ , ಬ್ರಹ್ಮ ಕಪಾಲ, ಬಪ್ಪನಾಡು ಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ, ಭಸ್ಮಾಸುರ ಮೋಹಿನಿ, ಸುಂದೋಪಸುಂದರ ಕಾಳಗ, ಮಹಾದೇವಿ ಲಲಿತೋಪಾಖ್ಯಾನ, ಶಿವಲೀಲಾರ್ಪಣ, ಅಂಧಕಾಸುರ ವಧೆ, ಪ್ರಭಾವತಿ ಪರಿಣಯ, ಧನಾಗುಪ್ತಾ ಮಹಾಬಲಿ, ಭಗವಾನ್ ಏಸುಕ್ರಿಸ್ತ, ನಾರಾಯಣ ಗುರು ಮಹಾತ್ಮೆ, ಭರತೇಶ ವೈಭವ, ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ , ಸಿರಿ ಮಹಾತ್ಮೆ ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ.

ಈ ಪೈಕಿ ಹೆಚ್ಚಿನ ಪ್ರಸಂಗಗಳಲ್ಲೂ ವೇಷ  ಅವಕಾಶವೂ ನನಗೆ ಲಭಿಸಿದ್ದು ಸಂತಸ ತಂದಿದೆ. ವಿಶೇಷವೇನೆಂದರೆ ಈ ಸಂಪುಟದಲ್ಲಿರುವ ಹೆಚ್ಚಿನ ಪ್ರಸಂಗಗಳೂ ಪ್ರಸ್ತುತ ಚಾಲ್ತಿಯಲ್ಲಿವೆ.  ದೇವಿ ಮಹಾತ್ಮೆ , ಬ್ರಹ್ಮಕಪಾಲ, ಬಪ್ಪನಾಡು ಕ್ಷೇತ್ರ ಮಹಾತ್ಮೆ , ವೆಂಕಟೇಶ ಮಹಾತ್ಮೆ(ಶ್ರೀನಿವಾಸ ಕಲ್ಯಾಣ), ಭಸ್ಮಾಸುರ ಮೋಹಿನಿ, ಸುಂದೋಪಸುಂದರ ಕಾಳಗ,  ಮಹಾದೇವಿ ಲಲಿತೋಪಾಖ್ಯಾನ ಪ್ರಸಂಗಗಳು ತಿರುಗಾಟದುದ್ದಕ್ಕೂ ಮೇಳಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರಸಂಗಗಳು ಒಂದೇ ಪುಸ್ತಕದಲ್ಲಿ ಅಚ್ಚಾಗಿ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯವೆಂದೇ ಹೇಳಬೇಕು. ಅದೂ ಅತ್ಯುತ್ತಮ ಚಾಲ್ತಿ ಪ್ರಸಂಗಗಳು. ಈ ಪ್ರಸಂಗ ಮಾಲಿಕೆಯು ಮುದ್ರಿಸಲ್ಪಟ್ಟದ್ದು 2007ರಲ್ಲಿ. ಬದುಕಿರುತ್ತಿದ್ದರೆ ಅವರು ನೂರಾ ಒಂದನೆಯ ವರುಷದಲ್ಲಿರುತ್ತಿದ್ದರು. ಆದರೂ ಶತಮಾನೋತ್ಸವದ ಅಂತ್ಯಕ್ಕೆ ಹೀಗೊಂದು ಪ್ರಸಂಗ ಸಂಪುಟವು ಅಚ್ಚಾದುದು ಅತ್ಯಂತ ಸಂತಸದ ಸಂಗತಿ. ಇದು ಮುನ್ನೂರ ಇಪ್ಪತ್ತನಾಲ್ಕು ಪುಟಗಳನ್ನೂ ಹೊಂದಿರುವ ಪುಸ್ತಕ. ಇದರ ಪ್ರಕಾಶಕರು ಮುಂಬೈಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕ.  ಮುಂಬೈಯಲ್ಲಿ ಅತ್ಯುತ್ತಮ ಸಂಘಟಕರೂ ಕಲಾಭಿಮಾನಿಗಳೂ ಎಲ್ಲರಿಗೂ ಪ್ರಿಯರೂ ಆಗಿದ್ದ ಶ್ರೀ ಎಚ್.ಬಿ. ಎಲ್. ರಾಯರು ಇದರ ಮುಖ್ಯ ಸಂಪಾದಕರಾಗಿದ್ದರು. ಶ್ರೀ ಪಿ. ಶ್ರೀನಿವಾಸ ಭಟ್ ಕಟೀಲು ಇದರ ಸಂಪಾದಕರು. ಅಗರಿ ಶ್ರೀನಿವಾಸ ರಾಯರ ಈ ಪ್ರಸಂಗ ಸಂಪುಟವು ಅಗರಿಯವರ ಕುರಿತು, ಅಗರಿಯವರ ಲೇಖನಗಳು, ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಪ್ರಸಂಗಗಳು ಎಂಬ ವಿಭಾಗಗಳನ್ನು ಒಳಗೊಂಡಿದೆ. ಆರಂಭದಲ್ಲಿ ಪ್ರಧಾನ ಸಂಪಾದಕ  ಶ್ರೀ ಎಚ್.ಬಿ. ಎಲ್. ರಾಯರ ಮಾತುಗಳು, ಸಂಪಾದಕ  ಪಿ. ಶ್ರೀನಿವಾಸ ಭಟ್ ಅವರ ಅನಿಸಿಕೆಗಳನ್ನು ಸವಿವರವಾಗಿ ನಮಗೆ ಓದಬಹುದು. ಬಳಿಕ ಶ್ರೀ ಅಗರಿ ರಘುರಾಮ ಭಾಗವತರು ತಮ್ಮ ತೀರ್ಥರೂಪರ ಬಗೆಗೆ ಬರೆದ ‘ನನ್ನ ತಂದೆಯವರನ್ನು ನಾನು ಕಂಡಂತೆ’ ಎಂಬ ಲೇಖನವೂ ಮಗಳು ಜಯಂತಿ ರಾವ್ ಅವರು ಬರೆದ ಅಗರಿ ಶ್ರೀನಿವಾಸ ಭಾಗವತರು ಎಂಬ ಲೇಖನಗಳೂ ಇವೆ. ಬಳಿಕ ‘ಅಗರಿಯವರ ಕುರಿತು’ ಎಂಬ ತಲೆಬರಹದಡಿಯಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ , ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದಾಮೋದರ ಮಂಡೆಚ್ಚರು, ನೆಡ್ಲೆ ನರಸಿಂಹ ಭಟ್ಟರು, ಕಡತೋಕ ಮಂಜುನಾಥ ಭಾಗವತ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಶಿಮಂತೂರು ನಾರಾಯಣ ಶೆಟ್ಟಿ, ವಿದ್ವಾನ್ ಕೆ. ವೆಂಕಟರಾಯಾಚಾರ್ಯ , ಕೆ. ಎಂ. ರಾಘವ ನಂಬಿಯಾರ್, ವಿಟ್ಲ ಗೋಪಾಲಕೃಷ್ಣ ಜೋಶಿ, ಕೆರೆಮನೆ ಮಹಾಬಲ ಹೆಗಡೆಯವರ ಅನಿಸಿಕೆಗಳು ಅಕ್ಷರರೂಪಕ್ಕಿಳಿದಿದೆ. ಅದನ್ನು ಓದಿ ಆಸ್ವಾದಿಸುತ್ತಾ ಸಂತೋಷವನ್ನು ಹೊಂದಲೇ ಬೇಕು. ಮುಂದಿನ ವಿಭಾಗ ಅಗರಿಯವರ ಲೇಖನಗಳು. ಈ ವಿಭಾಗದಲ್ಲಿ ಅಗರಿಯವರು ಬರೆದ ನಾಲ್ಕು ಲೇಖನಗಳಿವೆ. ಅವರು ಅತ್ಯುತ್ತಮ ಬರಹಗಾರರಾಗಿದ್ದರೆಂದು ಈ ಲೇಖನಗಳಿಂದ ತಿಳಿಯುತ್ತದೆ.   ಅಳಕೆ ರಾಮಯ್ಯ ರೈ, ಬಲಿಪ ನಾರಾಯಣ ಭಾಗವತ, ದಿ। ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಮುಳಿಯ ಮಹಾಬಲ ಭಟ್ಟ , ಇವರುಗಳು ಅಗರಿಯವರ ಬಗೆಗೆ ಆಡಿದ ನುಡಿಮುತ್ತುಗಳನ್ನೂ ಮುದ್ರಿಸಲಾಗಿದೆ. ಮುಂದಿನ ವಿಭಾಗದಲ್ಲಿ ಅಗರಿಯವರ ಸಂದರ್ಶನವಿದೆ. ವಿದ್ವಾನ್ ರಾಮಚಂದ್ರ ಉಚ್ಚಿಲರು ಅಗರಿ ಶ್ರೀನಿವಾಸ ಭಾಗವತರನ್ನು ಸಂದರ್ಶಿಸಿ ಬರೆದ ಲೇಖನವು ಸವಿವರವಾಗಿ ಇದೆ. ಇದು “ಪುಟ್ಟ ಕಬಿಗ ಅಗರಿ ಶ್ರೀನಿವಾಸ ರಾವ್” ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೊಳ್ಯೂರು ರಾಮಚಂದ್ರ ರಾಯರು ಅಗರಿಯವರು ತನಗೆ ಕಲಿಕಾ ಹಂತದಲ್ಲಿ ನೀಡಿದ ಹಿತವಚನವನ್ನು ನೆನಪಿಸಿ ಅವರನ್ನು ಗೌರವಿಸಿದ್ದಾರೆ. ಮುಂದೆ ಅಗರಿ ಶ್ರೀನಿವಾಸ ರಾಯರು ರಚಿಸಿದ ಹದಿನಾರು ಪ್ರಸಂಗಗಳು. ಈ ಸಂಪುಟದ ಕೊನೆಯಲ್ಲಿ ಅಗರಿ ಶ್ರೀನಿವಾಸ ಭಾಗವತರ ಕೆಲವು ರಚನೆಗಳು ಎಂಬ ವಿಭಾಗದಲ್ಲಿ ಆರು ಹಾಡುಗಳನ್ನು ಗಮನಿಸಬಹುದು. ಕಲಾವಿದರಿಗೆ, ಯಕ್ಷಗಾನ ಪ್ರಿಯರಿಗೆ ಇದು ಒಂದು ಬಹು ಉಪಯೋಗೀ ಪುಸ್ತಕ. 

ಲೇಖನ: ರವಿಶಂಕರ ವಳಕ್ಕುಂಜ 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments