Thursday, November 21, 2024
Homeಪುಸ್ತಕ ಮಳಿಗೆಬಲಿಪರ ಜಯಲಕ್ಷ್ಮಿ- ಬಲಿಪ ನಾರಾಯಣ ಭಾಗವತರ ಪ್ರಸಂಗಗಳು

ಬಲಿಪರ ಜಯಲಕ್ಷ್ಮಿ- ಬಲಿಪ ನಾರಾಯಣ ಭಾಗವತರ ಪ್ರಸಂಗಗಳು

ಕಿರಿಯ ಬಲಿಪ ನಾರಾಯಣ ಭಾಗವತರು ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರು. ಪ್ರಸಂಗಕರ್ತರೂ ಹೌದು. ‘ಬಲಿಪರಿಗೆ ಬಲಿಪರೇ ಸಾಟಿ’ ಎಂದು ಕಲಾಭಿಮಾನಿಗಳು ಆಡುವುದನ್ನು ನಾವು ಕೇಳಿದ್ದೇವೆ. ಹಿರಿಯ ಬಲಿಪ ನಾರಾಯಣ ಭಾಗವತರ ಮೊಮ್ಮಗನಾಗಿ ಯಕ್ಷಗಾನವು ಇವರಿಗೆ ರಕ್ತಗತವಾಗಿಯೇ ಒಲಿದಿತ್ತು. ಭಾಗವತರಾಗಿ, ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧಕರಾಗಿ ಕಾಣಿಸಿಕೊಂಡವರು. ಸುದೀರ್ಘ ಕಾಲ ಶ್ರೀ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿ ಪ್ರಸ್ತುತ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಇವರ ಪುತ್ರರಾದ ಶ್ರೀ ಶಿವಶಂಕರ ಬಲಿಪ ಮತ್ತು ಶ್ರೀ ಪ್ರಸಾದ ಬಲಿಪ ಇವರುಗಳೂ ಪ್ರಸ್ತುತ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಭಾಗವತರಾಗಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಿರಿಯ ಬಲಿಪ ನಾರಾಯಣ ಭಾಗವತರು ಬರೆದ ಹದಿನಾರು ಪ್ರಸಂಗಗಳ ಸಂಪುಟವೇ ‘ಬಲಿಪರ ಜಯಲಕ್ಷ್ಮಿ’ಎಂಬ ಪುಸ್ತಕ. ಜಯಲಕ್ಷ್ಮಿ ಎಂದು ಇವರ ಧರ್ಮಪತ್ನಿಯ ಹೆಸರು.  ಇವರು ಬರೆದ ಅನೇಕ ಪ್ರಸಂಗಗಳು ಈ ಹಿಂದೆ ಪ್ರಕಟವಾಗಿತ್ತು. ಮುದ್ರಿತವಾಗದೆ ಉಳಿದ ಪ್ರಸಂಗಗಳನ್ನು ಆಯ್ಕೆ ಮಾಡಿ ಸಂಪುಟವಾಗಿ ಹೊರ ತಂದದ್ದು ಶ್ಲಾಘನೀಯ ಕಾರ್ಯ. ಪ್ರಸಂಗಗಳು ಕಲಾಭಿಮಾನಿಗಳ ಕಲಾವಿದರ ಕೈ ಸೇರುವಂತಾಯಿತು. ಈ ಪುಸ್ತಕದ ಪ್ರಕಾಶಕರು ಶ್ರೀ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆ. ಡಾ. ನಾಗವೇಣಿ ಮಂಚಿ ಈ ಪುಸ್ತಕದ ಸಂಪಾದಕಿ. ಇದು ಆರುನೂರ ಅರುವತ್ತಕ್ಕೂ ಹೆಚ್ಚು ಪುಟಗಳನ್ನೂ ಹೊಂದಿದ ಪ್ರಸಂಗ ಸಂಪುಟ. ೨೦೧೭ನೇ ಇಸವಿಯಲ್ಲಿ ಅಡ್ಯಾರು ಗಾರ್ಡನ್ ನ ಪಟ್ಲ ಯಕ್ಷೋತ್ಸವ ಸಂದರ್ಭದಲ್ಲಿ ಇದು ಓದುಗರ ಕೈ ಸೇರಿತ್ತು. ಮುನ್ನುಡಿಯನ್ನು ಬರೆದವರು ಭಾಗವತರೂ ಪ್ರಸಂಗಕರ್ತರೂ ಆದ ಶ್ರೀ ಬೊಟ್ಟಿಕೆರೆ ಪುರೋಷೋತ್ತಮ ಪೂಂಜರು. ಬಲಿಪ ನಾರಾಯಣ ಭಾಗವತರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.  ಯಕ್ಷಧ್ರುವ ಪಟ್ಲ ಫೌಂಡೇಶನ್ ನ  ಶ್ರೀ ಪಟ್ಲ ಸತೀಶ ಶೆಟ್ಟಿಯವರು ಪ್ರಕಾಶಕರಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಸಂಪಾದಕಿ  ಡಾ. ನಾಗವೇಣಿ ಮಂಚಿ ಅವರು ಈ ಪ್ರಸಂಗಗುಚ್ಛ ಹೊರತರಲು ಪ್ರೇರೇಪಿಸಿದ, ಸಹಕರಿಸಿದ ಹಿರಿಯರನ್ನೂ ಒಡನಾಡಿಗಳನ್ನೂ ನೆನಪಿಸಿ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಧ್ರುವಚರಿತ್ರೆ, ಚಿತ್ರವಿಚಿತ್ರ ಕಾಳಗ,ಶ್ರೀಕೃಷ್ಣ ರಾಯಭಾರ, ಹಿರಣ್ಯಮಣಿ ಕಾಳಗ, ಗರುಡ ಘರ್ವಭಂಗ, ಮಯೂರೇಕ ವಿಜಯ, ಪ್ರತಾಪನ ಸಾಹಸ, ಚಂದ್ರಸೇನ ಚರಿತ್ರೆ, ನಮುಚಿಯ  ಪ್ರತಾಪ, ಸತಿ ಅನಸೂಯ, ಸುದರ್ಶನೋಪಾಖ್ಯಾನ (ಚಂದ್ರಕಲಾ ಸ್ವಯಂವರ), ಸುಂದೋಪಸುಂದರ ಕಾಳಗ ಮತ್ತು ಮಾಯಾವಿ ವಧೆ, ಕರಂಧಮ ಚರಿತ್ರೆ ಮತ್ತು ಮರುತ್ತ ಯಾಗ, ತುಲಸಿ ಮಾಲತಿ ಧಾತ್ರಿ, ವಜ್ರಬಾಹು ಕಾಳಗ, ಕಲ್ಕ್ಯಾವತಾರ ಎಂಬ ಹದಿನಾರು ಪ್ರಸಂಗಗಳು ಈ ಪುಸ್ತಕದಲ್ಲಿವೆ. ಕಥಾಸಾರಾಂಶವನ್ನೂ ಕಥೆಯಲ್ಲಿ ಬರುವ ಪಾತ್ರ ಪರಿಚಯವನ್ನೂ ನೀಡಿದ್ದು ತುಂಬಾ ಅನುಕೂಲವಾದೀತು. ಬಳಿಕ ಬಲಿಪರ ಕುಟುಂಬದ ಕಪ್ಪು ಬಿಳುಪಿನ  ಒಂದು ಸುಂದರ ಚಿತ್ರವನ್ನೂ ಬಲಿಪರ ವಂಶಾವಳಿಯನ್ನೂ ನೀಡಿದ್ದಾರೆ. ಬಲಿಪ ಭಾಗವತರ ಪ್ರಕಟಿತ ಯಕ್ಷಗಾನ ಪ್ರಸಂಗಗಳ ಪಟ್ಟಿಯನ್ನೂ ಒದಗಿಸಿದ್ದಾರೆ. ಈ ಪುಸ್ತಕ ಕಲಾಕ್ಷೇತ್ರಕ್ಕೊಂದು ಉತ್ತಮ ಕೊಡುಗೆ. 

ಲೇಖನ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments